ಭೂ ಪರಿಹಾರ ಪಡೆಯಲು ಅಡ್ಡಿಯಾದ ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಯತ್ನ

KannadaprabhaNewsNetwork |  
Published : Mar 11, 2024, 01:16 AM ISTUpdated : Mar 11, 2024, 01:17 AM IST
ಮರ್ಡರ್‌ | Kannada Prabha

ಸಾರಾಂಶ

ಭೂ ಪರಿಹಾರ ಪಡೆಯಲು ಅಡ್ಡಿಯಾಗಿದ್ದ ಆರ್‌ಟಿಐ ಕಾರ್ಯಕರ್ತನನ್ನು ಕೊಲ್ಲಲು ಯತ್ನಿಸಿದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದ ರೌಡಿಶೀಟರ್ ಸೇರಿ ಆರು ಮಂದಿ ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ಬೈರವೇಶ್ವರನಗರ ನಿವಾಸಿಗಳಾದ ಮನೀಶ್ ಮೋಹನ್ ಪೂಜಾರಿ (28), ಶಶಿಕುಮಾರ್ ರೆಡ್ಡಿ (20), ಕೃಷ್ಣ (30), ಸತೀಶ್ (44), ಎ. ವೇಣುಗೋಪಾಲ್ ಅಲಿಯಾಸ್ ಕುಮಾರಸ್ವಾಮಿ (51) ಮತ್ತು ಮೈಸೂರು ರಸ್ತೆ ಕಣಿಮಿಣಿಕೆ ಕೆ.ಜಿ.ಗೋವಿಂದರಾಜು(40) ಬಂಧಿತರು.

ಆರೋಪಿಗಳು ಫೆ.29ರಂದು ಕೆಂಗೇರಿ ರೈಲ್ವೆ ಅಂಡರ್ ಪಾಸ್ ಬಳಿ ಕುಂಬಳಗೋಡು ಆರ್‌ಟಿಐ ಕಾರ್ಯಕರ್ತ ಕೆ.ನಾಗರಾಜ್‌ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪದೇ ಪದೇ ಅರ್ಜಿ ಹಾಕಿದ್ದಕ್ಕೆ ಕೋಪ:

ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಗೆ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿತ್ತು. ಈ ವೇಳೆ ಗೋವಿಂದರಾಜು ಸರ್ಕಾರದಿಂದ ಪರಿಹಾರ ಪಡೆದುಕೊಂಡಿದ್ದ. ಗೋಮಾಳ ಭೂಮಿ ತನಗೆ ಸೇರಿದ್ದು ಎಂದು ಸುಳ್ಳು ದಾಖಲೆ ಕೊಟ್ಟು ಗೋವಿಂದರಾಜು ಕೋಟ್ಯಂತರ ರುಪಾಯಿ ಪರಿಹಾರ ಪಡೆಯಲು ಮುಂದಾಗಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ನಾಗರಾಜು, ಪದೇ ಪದೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ದಾಖಲೆ ಪತ್ರಗಳನ್ನು ಕೋರುತ್ತಿದ್ದ. ಈ ವಿಚಾರ ಗೊತ್ತಾಗಿ ಆರೋಪಿಗಳಾದ ಗೋವಿಂದರಾಜು ಮತ್ತು ಸತೀಶ್‌ ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಅಡ್ಡಿಯಾಗುತ್ತಿರುವ ಆರ್‌ಟಿಐ ಕಾರ್ಯಕರ್ತ ನಾಗರಾಜು ವಿರುದ್ಧ ಕೋಪಗೊಂಡಿದ್ದರು. ಈತನನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು.₹5 ಲಕ್ಷಕ್ಕೆ ಸುಪಾರಿ

ಆರೋಪಿ ಗೋವಿಂದರಾಜು ಆರ್‌ಟಿಐ ಕಾರ್ಯಕರ್ತ ನಾಗರಾಜ್‌ ಹತ್ಯೆಗೆ ಚಂದ್ರಾಲೇಔಟ್‌ ಠಾಣೆ ರೌಡಿ ಶೀಟರ್‌ ಕೃಷ್ಣ ಹಾಗೂ ಆತನ ಗ್ಯಾಂಗ್‌ಗೆ ₹5 ಲಕ್ಷಕ್ಕೆ ಸುಪಾರಿ ನೀಡಿದ್ದರು. ಮುಂಗಡವಾಗಿ ₹1.50 ಲಕ್ಷ ನೀಡಿದ್ದರು. ಅದರಂತೆ ಫೆ.29ರಂದು ಆರ್‌ಟಿಐ ಕಾರ್ಯಕರ್ತ ನಾಗರಾಜ್ ಕೆಂಗೇರಿಯ ರೈಲ್ವೆ ಅಂಡರ್ ಪಾಸ್ ಬಳಿ ನಡೆದುಕೊಂಡು ಹೋಗುವಾಗ ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.

ಈ ಸಂಬಂಧ ಗಾಯಾಳು ನಾಗರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಕೆಂಗೇರಿ ಠಾಣೆ ಇನ್‌ಸ್ಪೆಕ್ಟರ್‌ ಬಿ.ಎಂ.ಕೊಟ್ರೇಶಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ಶರತ್‌ ವಶ
ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್