ಗ್ರಾಹಕರ ಮನೆಗಳನ್ನೇ ದೋಚಿದ ಆಟೋ ಚಾಲಕ ಬಂಧನ

KannadaprabhaNewsNetwork |  
Published : Jan 22, 2025, 01:46 AM IST
Sathish | Kannada Prabha

ಸಾರಾಂಶ

ತಾನು ಬಾಡಿಗೆ ಹೋಗುವ ಗ್ರಾಹಕರ ಬಗ್ಗೆ ಮಾಹಿತಿ ಪಡೆದು ಬಳಿಕ ಅವರ ಮನೆಗೆ ಕನ್ನ ಹಾಕುತ್ತಿದ್ದ ಚಾಲಾಕಿ ಉಬರ್ ಆಟೋ ಚಾಲಕನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಬಾಡಿಗೆ ಹೋಗುವ ಗ್ರಾಹಕರ ಬಗ್ಗೆ ಮಾಹಿತಿ ಪಡೆದು ಬಳಿಕ ಅವರ ಮನೆಗೆ ಕನ್ನ ಹಾಕುತ್ತಿದ್ದ ಚಾಲಾಕಿ ಉಬರ್ ಆಟೋ ಚಾಲಕನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಾಮಾಕ್ಷಿಪಾಳ್ಯ ಸಮೀಪದ ಕಾವೇರಿಪುರದ ನಿವಾಸಿ ಸತೀಸ್ ಬಂಧಿತನಾಗಿದ್ದು, ಆರೋಪಿಯಿಂದ 237 ಗ್ರಾಂ ಚಿನ್ನಾಭರಣ ಹಾಗೂ 47 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಭೈರವೇಶ್ವನಗರದಲ್ಲಿ ಅಕ್ಕಸಾಲಿಗರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಭರತ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆಟೋ ಚಾಲಕನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಟೋ ಬುಕ್ ಮುನ್ನ ಎಚ್ಚರವಾಗಿರಿ:

ಆರೋಪಿ ಸತೀಶ್ ಮೂಲತಃ ತಮಿಳುನಾಡು ರಾಜ್ಯದ ವೆಲ್ಲೂರಿನವನಾಗಿದ್ದು, ತನ್ನ ತಾಯಿ ಹಾಗೂ ಅಣ್ಣನ ಜತೆ ಕಾವೇರಿಪುರದಲ್ಲಿ ಆತ ವಾಸವಾಗಿದ್ದ. ಉಬರ್‌ ಹಾಗೂ ಓಲಾಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಸತೀಶ್, ಈಗ ಸುಲಭವಾಗಿ ಹಣ ಸಂಪಾದನೆಗೆ ಮನೆ ಕಳ್ಳತನ ಕೃತ್ಯಕ್ಕಿಳಿದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಮುಂಜಾನೆ ವೇಳೆ ಆಟೋ ಬುಕ್ ಮಾಡುವ ಗ್ರಾಹಕರನ್ನು ಬಸ್ ನಿಲ್ದಾಣಕ್ಕೆ ಬಿಟ್ಟ ನಂತರ ಮರುದಿನ ಆ ಗ್ರಾಹಕರ ಮನೆಗೆ ಕನ್ನ ಹಾಕಿ ಕೈಗೆ ಸಿಕ್ಕಿದ್ದನ್ನು ಸತೀಶ್ ದೋಚುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಂದ್ರಾಲೇಔಟ್‌ನ ಭೈರವೇಶ್ವರ ನಗರದಲ್ಲಿ ಅಕ್ಕಸಾಲಿಗ ಪ್ರೀತಿ ಕುಟುಂಬ ನೆಲೆಸಿದೆ. ಜ.1 ರಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ತಮ್ಮ ಪತಿ ಭೇಟಿಗೆ ಅವರು ತೆರಳಬೇಕಿತ್ತು. ಆಗ ಬಸ್ ನಿಲ್ದಾಣಕ್ಕೆ ಹೋಗಲು ಉಬರ್‌ ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿದಾಗ ಆ ಅರ್ಡರ್‌ ಅನ್ನು ಓಕೆ ಮಾಡಿ ಸತೀಶ್ ತೆರಳಿದ್ದ. ಆದರೆ ಕೊನೆ ಕ್ಷಣದಲ್ಲಿ ತಮ್ಮ ಯೋಜನೆ ಬದಲಿಸಿದ ಪ್ರೀತಿ, ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ತಾನು ಕಾರಿನಲ್ಲೇ ಸಾಗರಕ್ಕೆ ಹೋಗಬೇಕಿದೆ. ನಿಮಗೆ ಯಾರಾದರೂ ಪರಿಚಯಸ್ಥರಿದ್ದರೆ ತಿಳಿಸುವಂತೆ ಕೋರಿದ್ದರು. ಕೊನೆಗೆ ತನ್ನ ಸ್ನೇಹಿತ ಕಾರಿನಲ್ಲಿ ಅವರನ್ನು ಸತೀಶ್ ಕಳುಹಿಸಿಕೊಟ್ಟಿದ್ದ.

ಇನ್ನು ಪ್ರೀತಿ ಅವರನ್ನು ಬಸ್‌ ನಿಲ್ದಾಣಕ್ಕೆ ಕರೆದುಕೊಂಡು ಬಿಡಲು ತೆರಳಿದ್ದಾಗ ಅವರ ಮನೆಯ ಪರಿಸ್ಥಿತಿಯನ್ನು ಆತ ತಿಳಿದುಕೊಂಡಿದ್ದ. ಮರು ದಿನ ಅವರ ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ತನ್ನೂರು ತಮಿಳುನಾಡಿಗೆ ಸತೀಶ್ ಪರಾರಿಯಗಿದ್ದ. ಜ.3 ರಂದು ಮನೆಗೆ ಮರಳಿದಾಗ ಕಳ್ಳತನ ಬಗ್ಗೆ ಪ್ರೀತಿ ಅವರಿಗೆ ಗೊತ್ತಾಯಿತು. ಬಳಿಕ ಚಂದ್ರಾಲೇಔಟ್ ಠಾಣೆಗೆ ಅವರು ದೂರು ನೀಡಿದರು. ಅಂತಿಮವಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು