ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿರುವ ಮಹಿಳೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಭಾನುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪ್ರೇಮಿಗಳು ಮನೆಬಿಟ್ಟು ಓಡಿಹೋಗಿದ್ದ ಹಿನ್ನೆಲೆಯಲ್ಲಿ ಯುವಕನ ಮನೆಗೆ ದಾಳಿ ನಡೆಸಿದ್ದ ಯುವತಿ ಕಡೆಯವರು, ಆತನ ತಾಯಿಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದರು. ಜತೆಗೆ, ಆಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಡಿ.10ರ ಮಧ್ಯರಾತ್ರಿ ನಡೆದಿದ್ದ ಈ ಅಮಾನವೀಯ ಘಟನೆ ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಘಟನೆ ಸಂಬಂಧ ಪೊಲೀಸರು 11 ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.ಬೆಳಗಾವಿ ಅಧಿವೇಶನದ ಹೊತ್ತಿನಲ್ಲೇ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂಥ ಈ ಘಟನೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿತ್ತು. ಇಷ್ಟೇ ಅಲ್ಲದೆ, ಕೇಂದ್ರ ಮಹಿಳಾ ಆಯೋಗ, ಎಸ್ಟಿ ರಾಷ್ಟ್ರೀಯ ನಿಯೋಗ ಹಾಗೂ ಬಿಜೆಪಿ ಸತ್ಯಶೋಧನಾ ಸಮಿತಿ ಕೂಡ ಭಾನುವಾರ ಬೆಳಗಾವಿಗೆ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದಿದ್ದವು.ಈ ಮಧ್ಯೆ ಹೈಕೋರ್ಟ್ ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಸಿಐಡಿ ಅಧಿಕಾರಿಗಳಿಗೆ ಕಡತಗಳನ್ನು ಪ್ರಕರಣದ ತನಿಖಾಧಿಕಾರಿ ಎಸಿಪಿ ಗಿರೀಶ್ ಹಸ್ತಾಂತರಿಸಲಿದ್ದಾರೆ.ಸಿಐಡಿ ಡಿಐಜಿ ಸುನಿಲ್ ಕುಮಾರ್ ಮೀನಾ ಶೀಘ್ರ ಬೆಳಗಾವಿಗೆ ಆಗಮಿಸಲಿದ್ದು, ಈಗಾಗಲೇ ಪ್ರಕರಣದ ತನಿಖಾಧಿಕಾರಿ ಎಸಿಪಿ ಗಿರೀಶ್ ಅವರನ್ನು ಕರೆಸಿಕೊಂಡು ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.