ರಾಜ್ಯದ ಇತಿಹಾಸದಲ್ಲೇ ₹21 ಕೋಟಿಯ ಡ್ರಗ್ಸ್‌ ಜಪ್ತಿ!

KannadaprabhaNewsNetwork | Published : Dec 13, 2023 1:30 AM

ಸಾರಾಂಶ

ಸಿಸಿಬಿ ಪೊಲೀಸರು ವಿದೇಶ ಮೂಲದ ಓರ್ವ ಪೆಡ್ಲರ್‌ನನ್ನು ಬಂಧಿಸಿ ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಸಂಗ್ರಹಿಸಿದ್ದ ₹21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಮಾರಾಟ ದಂಧೆ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ವಿದೇಶ ಮೂಲದ ಓರ್ವ ಪೆಡ್ಲರ್‌ನನ್ನು ಬಂಧಿಸಿ ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಸಂಗ್ರಹಿಸಿದ್ದ ₹21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.

ಈ ಪ್ರಮಾಣದ ಡ್ರಗ್ಸ್‌ ವಶ ಪಡಿಸಿಕೊಂಡಿರುವುದು ರಾಜ್ಯದ ಇತಿಹಾಸದಲ್ಲೇ ಒಂದು ದಾಖಲೆ ಎಂದು ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ರಾಮಮೂರ್ತಿ ನಗರದ ಲಿಯೋನಾರ್ಡ್‌ ಓಕ್ವುಡಿಲಿ ಬಂಧಿತನಾಗಿದ್ದು, ಆರೋಪಿಯಿಂದ 16 ಕೇಜಿ ತೂಕದ ಎಂಡಿಎಂಎ ಕ್ರಿಸ್ಟಲ್‌, 500 ಗ್ರಾಂ ಕೊಕೇನ್‌, ಮೂರು ಮೊಬೈಲ್‌ ಹಾಗೂ 3 ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳು ಸೇರಿದಂತೆ ಒಟ್ಟು ₹21 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವರ್ಷದಿಂದ ಡ್ರಗ್ಸ್ ದಂಧೆಯಲ್ಲಿ ಲಿಯೋ ತೊಡಗಿದ್ದು, ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಡ್ರಗ್ಸ್:

ಬಂಧಿತ ಪೆಡ್ಲರ್ ಲಿಯೋ ಮೂಲತಃ ನೈಜೀರಿಯಾ ದೇಶದವನಾಗಿದ್ದು, ಕಳೆದ ವರ್ಷ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ಬಳಿಕ ಬೆಂಗಳೂರಿಗೆ ಬಂದು ರಾಮಮೂರ್ತಿನಗರದ ಬಳಿ ಬಾಡಿಗೆ ಮನೆಯಲ್ಲಿ ಆತ ವಾಸವಾಗಿದ್ದ. ಹೊಸ ವರ್ಷಾಚರಣೆಯ ಪಾರ್ಟಿಗಳಿಗೆ ಪೂರೈಸಲು ದೆಹಲಿ, ಮುಂಬೈ ಸೇರಿದಂತೆ ಇತರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಮೂಲದ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸಿ ನಗರಕ್ಕೆ ತಂದು ಆರೋಪಿ ಸಂಗ್ರಹಿಸಿದ್ದ ಎಂದು ಆಯುಕ್ತರು ತಿಳಿಸಿದ್ದಾರೆ.ಚಾಕೋಲೆಟ್‌, ಚೂಡಿದಾರಬಾಕ್ಸ್‌ನಲ್ಲಿ ಡ್ರಗ್ಸ್‌ ಸಾಗಣೆ

ಹೊರ ರಾಜ್ಯಗಳಿಂದ ಚೂಡಿದಾರದ ಉಡುಪು, ಬೆಡ್‌ಶೀಟ್‌ ಕವರ್‌, ಸೋಪ್‌ ಹಾಗೂ ಚಾಕೋಲೆಟ್ ಬಾಕ್ಸ್‌ಗಳಲ್ಲಿ ಡ್ರಗ್ಸ್ ಅಡಗಿಸಿ ಗುಪ್ತವಾಗಿ ನಗರಕ್ಕೆ ಲಿಯೋ ಸಾಗಿಸಿದ್ದ. ಹೊರ ರಾಜ್ಯದ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ದುಬಾರಿ ಬೆಲೆಗೆ ಮಾರಲು ಆತ ಯೋಜಿಸಿದ್ದ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳಿಗೆ ಸಹ ಆರೋಪಿ ಡ್ರಗ್ಸ್ ಮಾರುತ್ತಿದ್ದ ಎಂದು ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.ಮನೆ ಮಾಲಿಕರ ಮೇಲೆ ಕ್ರಮ: ಆಯುಕ್ತ

ಬಾಡಿಗೆ ನೀಡುವ ಮುನ್ನ ಬಾಡಿಗೆದಾರರ ಪೂರ್ವಾಪರ ವಿಚಾರಿಸದೆ ನಿರ್ಲಕ್ಷ್ಯತನ ತೋರುವ ಮನೆ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದರು.

ಡ್ರಗ್ಸ್ ಪ್ರಕರಣದ ಆರೋಪಿಗೆ ಮನೆ ಬಾಡಿಗೆ ನೀಡಿದ್ದ ಮಾಲಿಕರನ್ನು ವಿಚಾರಣೆ ನಡೆಸಲಾಗಿದೆ. ಬಾಡಿಗೆ ನೀಡುವ ಮುನ್ನ ಬಾಡಿಗೆದಾರರ ಕುರಿತು ಪ್ರಾಥಮಿಕ ಮಾಹಿತಿಯನ್ನು ಮಾಲಿಕರು ಸಂಗ್ರಹಿಸಬೇಕು. ಈಗಾಗಲೇ ನಗರದಲ್ಲಿ ಪಿಜಿಗಳಲ್ಲಿ ನೆಲೆಸುವವರು ಹಾಗೂ ಬಾಡಿಗೆದಾರರ ಕುರಿತು ವಿವರ ಸಂಗ್ರಹಿಸಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

---

ಸಿಸಿಬಿ ಇತಿಹಾಸದಲ್ಲೇ ಡ್ರಗ್ಸ್ ಪೆಡ್ಲರ್‌ನಿಂದ ಮೊದಲ ಬಾರಿಗೆ ದೊಡ್ಡ ಮೊತ್ತದ ಡ್ರಗ್ಸ್ ಜಪ್ತಿಯಾಗಿದೆ. ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮಾರಾಟ ಜಾಲ ಹೆಚ್ಚು ಸಕ್ರಿಯವಾಗಿರುವ ಮಾಹಿತಿ ಇದೆ. ಈ ಬಗ್ಗೆ ನಿಗಾವಹಿಸಲಾಗಿದ್ದು, ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಖರೀದಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು

Share this article