ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ರೌಡಿ ಸೇರಿದಂತೆ ಇಬ್ಬರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯಶವಂತಪುರದ ವಿನಾಯಕ ನಗರದ ನಿವಾಸಿ ಶ್ರೀನಿವಾಸ ಅಲಿಯಾಸ್ ಕರಾಟೆ ಸೀನಾ ಹಾಗೂ ಗಂಗೊಂಡನಹಳ್ಳಿಯ ಗಣಪತಿನಗರದ ವೆಂಕಟೇಶ ಅಲಿಯಾಸ್ ಗೋಲ್ಡನ್ ವೆಂಕಟೇಶ ಬಂಧಿತರಾಗಿದ್ದು, ಆರೋಪಿಗಳಿಂದ 205 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ಸೇರಿದಂತೆ ಒಟ್ಟು ₹15 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಯರ್ರಯ್ಯನಪಾಳ್ಯ ಮದಕರಿ ನಾಯಕ ರಸ್ತೆ ಸಮೀಪ ಮನೆ ಬೀಗ ಮುರಿದು ಕಳ್ಳತನ ನಡೆದಿತ್ತು. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಎಚ್.ಮುತ್ತುರಾಜ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಮಾ.24ರಂದು ರಾಮಮೂರ್ತಿನಗರ ಸಮೀಪದ ಯರ್ರಯ್ಯನಪಾಳ್ಯದ ಮನೆಗೆ ಬೀಗ ಮುರಿದು ಚಿನ್ನಾಭರಣವನ್ನು ಶ್ರೀನಿವಾಸ ದೋಚಿದ್ದ ಎಂದು ಪೊಲೀಸರು ಹೇಳಿದ್ದಾರೆ.ಜೈಲು ಮಿತ್ರನ ಭೇಟಿಗೆ ಬಂದು ಸಿಕ್ಕಿಬಿದ್ದ ಕಳ್ಳ:ಮನೆಗಳ್ಳತನ ಕೃತ್ಯದಲ್ಲಿ ಬಂಧಿತನಾಗಿ ಜೈಲು ಸೇರಿದ್ದಾಗ ಶ್ರೀನಿವಾಸ್‌ನಿಗೆ ವೆಂಕಟೇಶನ ಪರಿಚಯವಾಗಿತ್ತು. ಈ ಗೆಳೆತನದಲ್ಲೇ ತಾನು ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಮಿತ್ರನನ್ನು ಕಾಣಲು ಜೈಲಿಗೆ ವೆಂಕಟೇಶ ಹೋಗಿದ್ದ. ಮನೆಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು, ಕೃತ್ಯದ ಸ್ಥಳದಲ್ಲಿ ಲಭ್ಯವಾದ ಬೆರಳಚ್ಚಿಗೂ ಹಳೆಯ ಆರೋಪಿ ಶ್ರೀನಿವಾಸನ ಬೆರಳಚ್ಚಿಗೂ ತಾಳೆಯಾಗಿತ್ತು. ಈ ಮಾಹಿತಿ ಮೇರೆಗೆ ಜೈಲಿಗೆ ತೆರಳಿ ಶ್ರೀನಿವಾಸನ ಕುರಿತು ವಿಚಾರಿಸಿದಾಗ ಆತನ ಭೇಟಿ ಬಂದಿದ್ದ ವೆಂಕಟೇಶನ ಕುರಿತು ಸುಳಿವು ಲಭಿಸಿತು. ಈ ಸುಳಿವು ಆಧರಿಸಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಶ್ರೀನಿವಾಸ ಸಿಕ್ಕಿಬಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ಅರೆಪ್ರಜ್ಞಾವಸ್ಥೆಯ ವ್ಯಕ್ತಿಗಳ ಮೊಬೈಲ್ ಮಾತ್ರ ಬಳಕೆ!
ತನ್ನ ಸುಳಿವು ಪೊಲೀಸರಿಗೆ ಸಿಗುತ್ತದೆ ಎಂಬ ಕಾರಣಕ್ಕೆ ಶ್ರೀನಿವಾಸ ಮೊಬೈಲ್ ಬಳಸುತ್ತಿರಲಿಲ್ಲ. ರಸ್ತೆಯಲ್ಲಿ ಮದ್ಯ ಸೇವಿಸಿ ಅರೆ ಪ್ರಜ್ಞಾರಾಗಿ ಬಿದ್ದವರ ಮೊಬೈಲ್ ತೆಗೆದುಕೊಂಡು ಪರಿಚಿತರಿಗೆ ಶ್ರೀನಿವಾಸ್ ಕರೆ ಮಾಡುತ್ತಿದ್ದ. ಆದರೆ ಆತ ಮಾತ್ರ ಮೊಬೈಲ್ ಇಟ್ಟಿಕೊಂಡಿರಲಿಲ್ಲ. ಕಳವು ಮಾಡಿದ ಆಭರಣಗಳನ್ನು ಹಳೆಯ ಕಳ್ಳರ ಮೂಲಕವೇ ವಿಲೇವಾರಿ ಮಾಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.₹50 ಸಾವಿರ ಬಹುಮಾನ:ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿದ ರಾಮಮೂರ್ತಿನಗರ ಠಾಣೆ ಪೊಲೀಸರು ಹಾಗೂ ತನಿಖೆಗೆ ಸಹಕರಿಸಿದ ಬೆರಳಚ್ಚು ವಿಭಾಗದ ಸಿಬ್ಬಂದಿಗೆ ತಲಾ ₹25 ಸಾವಿರದಂತೆ ₹50 ಸಾವಿರ ನಗದು ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರಕಟಿಸಿದರು.