ಕನ್ನಡಪ್ರಭ ವಾರ್ತೆ ಬೆಂಗಳೂರು
ಜ.22 ರಂದು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೂಪೇನ ಅಗ್ರಹಾರದ ಕೋಡಿಚಿಕ್ಕನಹಳ್ಳಿಯಲ್ಲಿ ಬಾಲ್ಯವಿವಾಹಕ್ಕೆ ಯತ್ನಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪೊಲೀಸ್ ಸಹಾಯವಾಣಿಯಾದ ‘ನಮ್ಮ 112’ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಐ ಸುರೇಶ್ ಮತ್ತು ಎಚ್.ಸಿ ಉಮೇಶ ನಾಗಣ್ಣವರ್ ಅವರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿ ಸಮಾರಂಭವನ್ನು ನಿಲ್ಲಿಸಿ ವಿವರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ 17 ವರ್ಷದ ಬಾಲಕ ಮತ್ತು 18 ವರ್ಷದ ಯುವಕನನ್ನು ಗುರುತಿಸಿದ್ದಾರೆ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ಕಾನೂನು ನಿಬಂಧನೆಗಳ ಕುರಿತು ಪಾಲಕರಿಗೆ ಮತ್ತು ಕುಟುಂಬ ಸದಸ್ಯರಿಗೆ ಸಲಹೆ ನೀಡಿದ್ದು, ಕಾನೂನನ್ನು ಉಲ್ಲಂಘಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ಒತ್ತಿ ಹೇಳಿದರು. ಇದರ ಪರಿಣಾಮ ನಡೆಯಲಿದ್ದ ಬಾಲ್ಯ ವಿವಾಹ ತಪ್ಪಿದಂತಾಗಿದೆ.ಈ ಘಟನೆಯು ಅಪ್ರಾಪ್ತರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಕಾನೂನನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸೇಫ್ ಸಿಟಿ ಉಪಕ್ರಮದಡಿಯಲ್ಲಿ ಬೆಂಗಳೂರು ನಗರ ಪೊಲೀಸರ ಜಾಗರೂಕತೆ ಮತ್ತು ಪೂರ್ವಭಾವಿ ಹಸ್ತಕ್ಷೇಪವನ್ನು ಒತ್ತಿ ಹೇಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃದ್ಧ ಮಹಿಳೆಗೆ ನೆರವಾದರುಮತ್ತೊಂದೆಡೆ ಸಂಕಷ್ಟದಲ್ಲಿದ್ದ ವೃದ್ಧ ಮಹಿಳೆಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ನೆರವಾಗಿದ್ದಾರೆ.
ಜ.22 ರ ಮಧ್ಯಾಹ್ನ 2:24ರ ವೇಳೆ ಸುಮಾರು 60 ವರ್ಷದ ವಯಸ್ಸಿನ ವೃದ್ಧ ಮಹಿಳೆಯೊಬ್ಬರು ದಾರಿ ತಪ್ಪಿ ತೊಂದರೆಯಲ್ಲಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಕೂಡಲೇ 112ಕ್ಕೆ ಕರೆ ಮಾಹಿತಿ ನೀಡಿದ್ದಾರೆ.112 ಸಿಬ್ಬಂದಿಯವರು ಕರ್ತವ್ಯದಲ್ಲಿದ್ದ ಎ.ಎಸ್.ಐ. ಉಮಾಚಗಿ ಹಾಗೂ ಎಚ್.ಸಿ ಹನುಮಂತ್ ಉಪ್ಪಾರ್ ಅವರಿಗೆ ಮಾಹಿತಿಯನ್ನು ರವಾನಿಸಿದ್ದು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋದ ಪೊಲೀಸರು ವೃದ್ಧ ಮಹಿಳೆಯನ್ನು ಸಮಾಧಾನ ಪಡಿಸಿ, ವಿಚಾರಣೆ ಮಾಡಿ, ಕುಟುಂಬದವರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಂತರ ಅವರ ಪುತ್ರಿಯನ್ನು ಸಂಪರ್ಕಿಸಿ ನಂತರ ವೃದ್ಧ ಮಹಿಳೆಯನ್ನು ಸುರಕ್ಷಿತವಾಗಿ ಮಗಳ ಜತೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.