;Resize=(412,232))
ಬೆಂಗಳೂರು : ತನ್ನ ಸಹಪಾಠಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಮೇರೆಗೆ ಚಿತ್ರ ನಟ ದುನಿಯಾ ವಿಜಯ್ ಅವರ ಪುತ್ರ ಹಾಗೂ ಆತನ ಸ್ನೇಹಿತರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಮನೀಶ್ ಗೌಡ ಮೇಲೆ ಹಲ್ಲೆ ನಡೆದಿದ್ದು, ಕಾಲೇಜಿನ ವಾಹನ ನಿಲುಗಡೆ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ದುಂಡಾ ವರ್ತನೆ ತೋರಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಲೇಜಿನಲ್ಲಿ ಮಂಗಳವಾರ ಮಧ್ಯಾಹ್ನ 12.10ರ ಸುಮಾರಿಗೆ ಹಿಂಭಾಗದ ಗೇಟ್ ಎನ್‌ಜಿಟಿ ಪಾರ್ಕಿಂಗ್ ಹತ್ತಿರ ಬೈಕ್ ನಿಲುಗಡೆ ಮಾಡುತ್ತಿದ್ದೆ. ಆಗ ನನ್ನನ್ನು ಬಲವಂತವಾಗಿ ಕರೆದೊಯ್ದು ಸಾಮ್ರಾಟ್ ವಿಜಯ್, ಸಮೃದ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್, ಸಮೀದ್ ಮತ್ತು ಅವರ ಸ್ನೇಹಿತರು ಕಾರಿಗೆ ಹತ್ತಿಸಿಕೊಂಡರು. ನಂತರ ಕಾಲೇಜಿನಿಂದ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿರುವ ರಾಕ್ಸ್‌ಬಾರ್ ಮುಂದೆ ರಸ್ತೆಯಲ್ಲಿ ನಿಲ್ಲಿಸಿ ಕಾರಿನಲ್ಲೇ ಮುಖ, ಕುತ್ತಿಗೆ, ತಲೆಗೆ ಮತ್ತು ಎದೆ ಭಾಗಕ್ಕೆ ಮುಷ್ಟಿಯಿಂದ ಗುದ್ದಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತ ಮನೀಷ್ ದೂರಿದ್ದಾರೆ.
ಹಲ್ಲೆ ಬಳಿಕ ಅಲ್ಲೇ ನನ್ನನ್ನು ಕಾರಿನಿಂದಿಳಿಸಿ ಆರೋಪಿಗಳು ತೆರಳಿದರು. ಬಳಿಕ ನನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ. ನನ್ನನ್ನು ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಸಾಮ್ರಾಟ್ ವಿಜಯ್, ಸಮೃದ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ಮತ್ತು ಇತರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಮನೀಷ್ ಒತ್ತಾಯಿಸಿದ್ದಾರೆ. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
ಪೊಲೀಸರ ಸಂಧಾನ ಯತ್ನ
ವಿದ್ಯಾರ್ಥಿಗಳಾಗಿರುವ ಕಾರಣ ಎಫ್‌ಐಆರ್ ದಾಖಲಾದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ತಿಳಿ ಹೇಳಿ ವಿದ್ಯಾರ್ಥಿಗಳನ್ನು ರಾಜಿ ಸಂಧಾನಕ್ಕೆ ಪೊಲೀಸರು ಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಹದಿಹರೆಯದ ವಯಸ್ಸಿನಲ್ಲಿ ತಿಳಿಯದೆ ತಪ್ಪಾಗಿರಬಹುದು. ಹಾಗಾಗಿ ಎಫ್‌ಐಆರ್ ದಾಖಲಿಸದೆ ತಪ್ಪಿತಸ್ಥರಿಂದ ಕ್ಷಮೆ ಕೋರಿಸಿ ಪ್ರಕರಣ ಇತ್ಯರ್ಥಪಡಿಸಲು ಪೊಲೀಸರು ಮುಂದಾಗಿದ್ದರು. ಆದರೆ ಸಂತ್ರಸ್ತ ಮನೀಷ್ ಕುಟುಂಬದವರು ಒಪ್ಪಲಿಲ್ಲ ಎನ್ನಲಾಗಿದೆ.