ಶ್ರೀರಂಗಪಟ್ಟಣ ಭೂ ಕಬಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಮ್ಮದ್ ಹುಸೇನ್‌ಗೆ ಮಿಮ್ಸ್‌ನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಅಲೋಕ್‌ಕುಮಾರ್‌ರಿಂದ ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ಭೂ ಕಬಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಮ್ಮದ್ ಹುಸೇನ್‌ಗೆ ಮಿಮ್ಸ್‌ನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಅಲೋಕ್‌ಕುಮಾರ್ ಮಂಗಳವಾರ ಜಿಲ್ಲಾ ಕಾರಾಗೃಹ ಮತ್ತು ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಅಲೋಕ್‌ಕುಮಾರ್ ಅವರು ಜೈಲರ್ ಶಾಂತಮ್ಮ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಕ್ರಿಮಿನಲ್ ಪ್ರಕರಣದ ಆರೋಪಿಯನ್ನು ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಜೈಲಿನ ವೈದ್ಯಾಧಿಕಾರಿ ಸಲಹೆ ಮೇರೆಗೆ ಮಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದೇಕೆ. ಇದೇನಾ ನೀವು ಕರ್ತವ್ಯ ನಿರ್ವಹಿಸೋ ರೀತಿ. ಕಾನೂನನ್ನು ಕಾಪಾಡಬೇಕಾದ ನೀವು ಕಾನೂನು ಉಲ್ಲಂಘಿಸಿ ಕಳೆದ ಐದು ದಿನಗಳಿಂದ ಆರೋಪಿ ಅಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಿದ್ದು ಏಕೆ ಎಂದು ತರಾಟೆ ತೆಗೆದುಕೊಂಡರು ಎನ್ನಲಾಗಿದೆ.
ಆರೋಪಿಯ ಆರೋಗ್ಯದ ಕುರಿತಂತೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಲಿಲ್ಲವೇಕೆ?. ನಿಮಗಿಷ್ಟ ಬಂದಂತೆ ನಡೆದುಕೊಳ್ಳುವುದಕ್ಕೆ ಅಧಿಕಾರ ಕೊಟ್ಟವರು ಯಾರು?. ನ್ಯಾಯಾಧೀಶರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸುವವರೆಗೆ ನೀವೆಲ್ಲಾ ಏನು ಮಾಡುತ್ತಿದ್ದೀರಿ?. ನಿಮ್ಮ ಈ ಕೆಲಸದಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕೆಂಡಾಮಂಡಲರಾದರು ಎಂದು ತಿಳಿದುಬಂದಿದೆ.
ಈ ಬೆಳವಣಿಗೆಗಳ ಕುರಿತಂತೆ ಸಮಗ್ರ ವರದಿಯೊಂದನ್ನು ನನಗೆ ನೀಡಬೇಕು. ಮಹಿಳೆಯನ್ನು ಆರೋಪಿಯ ಕೊಠಡಿಗೆ ಬಿಟ್ಟಿರುವ ಸಂಬಂಧ ಭದ್ರತೆಯಲ್ಲಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದರು.
ಆನಂತರ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಡಿಜಿಪಿ ಅಲೋಕ್‌ಕುಮಾರ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅವರೊಂದಿಗೆ ಚರ್ಚಿಸಿದರು. ಆರೋಪಿ ಮಹಮ್ಮದ್ ಹುಸೇನ್ ಇದ್ದ ಕೊಠಡಿಯ ಪರಿಶೀಲನೆ ನಡೆಸಿದರು. ವಿಚಾರಣಾಧೀನ ಕೈದಿಗಳ ದಾಖಲಿಗೆ ಪ್ರತ್ಯೇಕ ವಾರ್ಡ್ ನಿರ್ಮಿಸುವಂತೆ ತಿಳಿಸಿದಾಗ, ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಪ್ರತ್ಯೇಕ ವಾರ್ಡ್ ನಿರ್ಮಿಸಲು ತೊಂದರೆಯಾಗಿದೆ. ಆದರೂ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ಡಾ.ಪಿ.ನರಸಿಂಹಸ್ವಾಮಿ ತಿಳಿಸಿದರು.
ಎಸ್‌ಪಿಗೆ ಹುಷಾರಿಲ್ಲ, ಜೈಲು ಅಧಿಕಾರಿ ಸ್ವಿಚ್‌ಆಫ್
ಡಿಜಿಪಿ ಅಲೋಕ್‌ಕುಮಾರ್ ಭೇಟಿಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಪೊಲೀಸ್ ಅಧೀಕ್ಷಕರ ಮೊಬೈಲ್‌ಗೆ ಕರೆ ಮಾಡಿದಾಗ ಅವರ ಭದ್ರತಾ ಸಿಬ್ಬಂದಿ ಮೇಡಂಗೆ ಹುಷಾರಿಲ್ಲ, ವಿಶ್ರಾಂತಿಯಲ್ಲಿದ್ದಾರೆ ಎಂಬ ಮಾಹಿತಿ ದೊರಕಿತು. ಇನ್ನು ಜೈಲು ಅಧಿಕಾರಿ ಶಾಂತಮ್ಮ ಅವರಿಗೆ ಕರೆ ಮಾಡಿದರೆ ಸ್ವಿಚ್‌ಆಫ್ ಆಗಿತ್ತು.
ಮಹಮದ್ ಹುಸೇನ್ ಮತ್ತೆ ಜೈಲಿಗೆ
ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದ ಆರೋಪಿ ಮಹಮ್ಮದ್ ಹುಸೇನ್‌ನನ್ನು ಮಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಜೈಲಿಗೆ ವಾಪಸ್ ಕಳುಹಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಮಿಮ್ಸ್‌ನಲ್ಲಿ ರಾಜಾತಿಥ್ಯದಲ್ಲಿದ್ದ ಹುಸೇನ್ ಬಗ್ಗೆ ವಿಷಯ ತಿಳಿದು ನ್ಯಾಯಾಧೀಶರು ಸೋಮವಾರ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಆರೋಪಿ ಮಹಿಳೆಯೊಂದಿಗೆ ಇರುವುದು ಕಂಡುಬಂದಿತ್ತು. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಕಾರಾಗೃಹಕ್ಕೆ ಕರೆತಂದಿದ್ದಾರೆ.
ಮಹಿಳೆಯನ್ನು ಒಳಬಿಟ್ಟ ಪೇದೆ ಅಮಾನತು
ಕ್ರಿಮಿನಲ್ ಪ್ರಕರಣದ ಆರೋಪಿ ಇರುವ ಕೊಠಡಿಗೆ ಮಹಿಳೆಯೊಬ್ಬರನ್ನು ಒಳಬಿಟ್ಟು ಕರ್ತವ್ಯಲೋಪವೆಸಗಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಯೊಬ್ಬರನ್ನು ಎಸ್‌ಪಿ ಡಾ.ವಿ.ಜೆ.ಶೋಭಾರಾಣಿ ಅವರು ಅಮಾನತುಗೊಳಿಸಿದ್ದಾರೆ. ಆರೋಪಿಯ ಕಾವಲಿಗೆ ನಿಯೋಜನೆಗೊಂಡಿದ್ದ ಪೇದೆ ಮಹಿಳೆಯನ್ನು ಯಾರ ಅನುಮತಿ ಪಡೆದು ಒಳಬಿಟ್ಟಿದ್ದರು ಎನ್ನುವುದು ನಿಗೂಢವಾಗಿದೆ. ನ್ಯಾಯಾಧೀಶರು ಪರಿಶೀಲನೆಗೆ ಭೇಟಿ ನೀಡಿದ ವೇಳೆ ಕೊಠಡಿಯಲ್ಲಿ ಮಹಿಳೆ ಇರುವುದು ಕಂಡುಬಂದಿತ್ತು.ಕರ್ತವ್ಯ ಲೋಪ: ಜೈಲು ಅಧೀಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ಮಂಡ್ಯವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ದಾಖಲಿಸುವ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ತಿಳಿಸುವಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಕರ್ತವ್ಯ ಲೋಪವೆಸಗಿರುವುದರಿಂದ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಲೋಕ್‌ಕುಮಾರ್ ದಕ್ಷಿಣ ವಲಯ ಡಿಐಜಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ವಿಚಾರಣಾಧೀನ ಕೈದಿ, ಶ್ರೀರಂಗಪಟ್ಟಣದ ಎಡಿಎಲ್‌ಆರ್ ಮಹಮದ್ ಹುಸೇನ್ ಅವರನ್ನು ಬೆನ್ನು ನೋವಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸದೆ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಐಜಿ ದಿವ್ಯಶ್ರೀ ಅವರಿಗೆ ಸೂಚಿಸಿದ್ದಾರೆ.ಬೆನ್ನು ನೋವಿನ ದೂರಿನ ಹಿನ್ನೆಲೆಯಲ್ಲಿ ಕಾರಾಗೃಹ ವೈದ್ಯರ ಸಲಹೆ ಮೇರೆಗೆ ಕೈದಿ ಹುಸೇನ್ ಅವರನ್ನು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಮೂಳೆ ರೋಗ ತಜ್ಞರ ಸಲಹೆ ಮೇರೆಗೆ ಅವರನ್ನು ತಾತ್ಕಾಲಿಕವಾಗಿ ಜೈಲು ವಾರ್ಡ್‌ಗೆ ದಾಖಲಿಸಲಾಯಿತು. ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕೈದಿ ಕಾವಲಿಗೆ ಬೆಂಗಾವಲು ಒದಗಿಸಿತ್ತು. ಕರ್ತವ್ಯದಲ್ಲಿ ಲೋಪವೆಸಗಿದ ಬೆಂಗಾವಲು ತಂಡದ ಸಿಬ್ಬಂದಿ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಜೈಲು ಅಧಿಕಾರಿ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.