ಶಾಲೆಯ ನಾಲ್ವರು ಮಕ್ಕಳು ನಾಲೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಶಿಕ್ಷಕರಿಬ್ಬರ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಾಲೆಯ ನಾಲ್ವರು ಮಕ್ಕಳು ನಾಲೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಶಿಕ್ಷಕರಿಬ್ಬರ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಕರ ಬಳಿ ಬಂದ ಕ್ಷಣದಿಂದ ಮನೆಗೆ ಹಿಂದಿರುಗುವವರೆಗೆ ಶಿಕ್ಷಕರೇ ಜವಾಬ್ದಾರರು. ಆ ಜವಾಬ್ದಾರಿಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮದರಸ-ಇ-ಹಾಜರ ನಿಸ್ವಾನ್‌ ಶಾಲೆಯ ಶಿಕ್ಷಕರಾದ ನಝಿಯಾ ಬಾನು ಮತ್ತು ನಜಿಮಾ ಬಾನು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿತು.

ಇದಕ್ಕೂ ಮುನ್ನ ವಿಚಾರಣೆ ನ್ಯಾಯಪೀಠ, ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳಬೇಕು. ಪ್ರಕರಣದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕೋಪದಿಂದ ನುಡಿಯಿತು. ಇದಕ್ಕೆ ಅರ್ಜಿದಾರರು ಪರ ವಕೀಲರು, ದುರಾದೃಷ್ಟವಶಾತ್‌ ಈ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.

ಇದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಪೀಠ, ಏನು ದುರಾದೃಷ್ಟವಶಾತ್ತೇ? ನಾಲೆ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಿರುವುದಕ್ಕೆ ಈ ಘಟನೆ ನಡೆದಿದೆ. ಮಕ್ಕಳನ್ನು ನಾಲೆ ಬಳಿ ಕರೆದುಕೊಂಡು ಏಕೆ ಹೋಗಲಾಗಿತ್ತು? ಘಟನೆಗೆ ಅರ್ಜಿದಾರ ಶಿಕ್ಷಕರು ಹೊಣೆಯಲ್ಲವೇ. ನಾಲ್ಕು ಮಕ್ಕಳು ಸಾವನ್ನಪ್ಪಿದ್ದರೂ ಶಿಕ್ಷಕರು ಮಾತ್ರ ಏನೂ ಆಗಿಲ್ಲ, ನಮ್ಮದೇನು ತಪ್ಪಿಲ್ಲ ಎಂದು ಹೇಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡಿತು.

ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ದುಡುಕುತನ ಏನಿಲ್ಲ. ಉದ್ದೇಶಪೂರ್ವಕವಾಗಿ ನಾಲೆ ಸಮೀಪ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಾತ್ರೆ ತೊಳೆಯುವಂತೆ ಮಕ್ಕಳಿಗೆ ಶಿಕ್ಷಕರು ಏಕೆ ಹೇಳಿದರು? ಯಾವುದೇ ಕಾರಣಕ್ಕೂ ಶಿಕ್ಷಕರ ವಿರುದ್ಧ ಪ್ರಕರಣ ರದ್ದುಪಡಿಸುವುದಿಲ್ಲ. ಬೇಕಿದ್ದರೆ ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸಲಿ ಎಂದು ಹೇಳಿ ಅರ್ಜಿ ವಜಾಗೊಳಿಸಿತು.

ಪ್ರಕರಣದ ವಿವರ:

ಕಳೆದ ವರ್ಷ ನ.1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಶ್ರೀರಂಗಪಟ್ಟಣದ ತಾಲೂಕು ಮಂಡ್ಯಕೊಪ್ಪಲು ಬಳಿಯ ರಾಮಸ್ವಾಮಿ ನಾಲೆ ಬಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಮ್ಯಾಟ್‌, ಪಾತ್ರೆ ಸ್ವಚ್ಛಗೊಳಿಸಲು ಆಟೋದಲ್ಲಿ 13 ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳಾದ ಉಮ್ಮೇಹನಿ, ಆಯಿಷಾ, ಆಫ್ರಿನ್‌ ಮತ್ತು ತಮ್ರಿನ್‌ ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಮೃತ ಉಮ್ಮೇಹನಿ ತಂದೆ ಇಸ್ಮಾಯಿಲ್‌ ಘಟನೆ ಕುರಿತು ದೂರು ನೀಡಿದ್ದರು.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 105 ಅಡಿಯಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ (ಉದ್ದೇಶಪೂರ್ವಕವಲ್ಲದ ಕೊಲೆ) ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಶ್ರೀರಂಗಪಟ್ಟಣದ ಪ್ರಧಾನ ಸಿವಿಲ್‌ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.