ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚು ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ ಅವರ ಪುತ್ರ ಮನ್ವಿತ್‌ಗೌಡ ಎಂಬಾತನೇ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಬಾಲಕ.

ಕನ್ನಡಪ್ರಭ ವಾರ್ತೆ ಮಂಡ್ಯ

ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚು ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಂಕರ ಅವರ ಪುತ್ರ ಮನ್ವಿತ್‌ಗೌಡ (೮) ಎಂಬಾತನೇ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಬಾಲಕ. ಮನೆಯ ಮುಂದೆ ತನ್ನ ಸ್ನೇಹಿತರೊಡನೆ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಹಠಾತ್ತನೆ ಬಂದ ಹುಚ್ಚುನಾಯಿ ಆತನ ಮೇಲೆ ದಾಳಿ ಮಾಡಿದೆ. ಇದನ್ನು ಕಂಡ ಇತರೆ ಹುಡುಗರು ಮನೆ ಕಡೆಗೆ ಓಡಿದ್ದಾರೆ. ನಾಯಿ ದಾಳಿಗೆ ಸಿಲುಕಿದ ಮನ್ವಿತ್‌ಗೌಡನ ಎರಡೂ ತುಟಿಗಳನ್ನು ನಾಯಿ ಕಚ್ಚಿ ಎಳೆದಿರುವುದರಿಂದ ತುಟಿಗಳು ಬೇರ್ಪಡೆಯಾಗಿವೆ. ಜೊತೆಗೆ ಮೂಗನ್ನೂ ಕಚ್ಚಿ ಎಳೆದು ಗಾಯಗೊಳಿಸಿದೆ. ಬಾಲಕನ ಚೀರಾಟ ಕೇಳಿಸಿದ ಪೋಷಕರು ತಕ್ಷಣ ಬಂದು ನಾಯಿಯನ್ನು ಓಡಿಸಿ ಮಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಗೆ ವೈದ್ಯರು ಸಹಕಾರ ನೀಡದ ಕಾರಣ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಧ್ಯ ಮನ್ವಿತ್‌ಗೌಡನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೊದಲು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಅವಧಿ ಮುಗಿದ ನಂತರ ಪ್ಲಾಸ್ಟಿಕ್ ಸರ್ಜರಿ ಮೂಲಕ ತುಟಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಮನೆಗಳಲ್ಲಿ ಸಾಕು ನಾಯಿಗಳ ಮೇಲೂ ದಾಳಿ ಮಾಡಿರುವ ಹುಚ್ಚು ನಾಯಿ ಅವುಗಳಿಗೂ ಕಚ್ಚಿ ಗಾಯಗೊಳಿಸಿದೆ. ಬಾಲಕನ ಮೇಲೆ ದಾಳಿ ನಡೆಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಮಂಡ್ಯ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮದ್ದೂರು-ಹನಕೆರೆ ರೈಲು ನಿಲ್ದಾಣಗಳ ನಡುವೆ ಜರುಗಿದೆ. ಮೃತ ವ್ಯಕ್ತಿ 65 ರಿಂದ 75 ವರ್ಷದವರಾಗಿದ್ದಾರೆ. ಇದುವರೆಗೂ ಮೃತನ ಗುರುತು ಹಾಗೂ ವಾರಸುದಾರರೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿ 6.5 ಅಡಿ ಎತ್ತರ, ಗೋಧಿ ಮೈಬಣ್ಣ, ಸದೃಢ ಮೈಕಟ್ಟು, ದುಂಡು ಮುಖ ಹೊಂದಿದ್ದು ಹಲ್ಲಿಗೆ ಕ್ಲಿಪ್‌ ಹಾಕಿದ್ದಾರೆ. ಕಪ್ಪು ಬಿಳಿ ಉದ್ದನೆಯ ಸಣ್ಣಗೆರೆಗಳುಳ್ಳ ಅಂಗಿ, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್‌ ಠಾಣೆ ಅಥವಾ ದೂರವಾಣಿ: 0821-2516579 ಹಾಗೂ 9480802122 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.