ಬೆಂಗಳೂರು : ವಿಪತ್ತು ನಿರ್ವಹಣೆಯಡಿ ಕೈಗೊಂಡಿರುವ ರಾಜಕಾಲುವೆ ಕಾಂಕ್ರೀಟಿಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿಯ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಶನಿವಾರ ಬಿಬಿಎಂಪಿಯ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ನಗರದ 860 ಕಿ.ಮೀ ಉದ್ದದ ರಾಜಕಾಲುವೆ ಪೈಕಿ 173 ಕಿ.ಮೀ ಉದ್ದದ ರಾಜಕಾಲುವೆಯನ್ನು ಕಾಂಕ್ರೀಟಿಕರಣ ಮಾಡಲಾಗುತ್ತಿದ್ದು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಕುರಿತು ಯೋಜನಾ ವಿಭಾಗದ ವಿಶೇಷ ಆಯುಕ್ತರು ಕಾಲ-ಕಾಲಕ್ಕೆ ಪರಿಶೀಲನಾ ಸಭೆ ನಡೆಸಬೇಕೆಂದು ನಿರ್ದೇಶಿಸಿದರು.
ಗುರುತಿಸಲಾದ 209 ಪ್ರವಾಹ ಪೀಡಿತ ಸ್ಥಳಗಳಲ್ಲಿ ಕೈಗೊಂಡ ಪರಿಹಾರದ ಕುರಿತು ವಲಯ ಆಯುಕ್ತರು ಪ್ರಮಾಣೀಕರಿಸಿದ ವರದಿ ನೀಡಬೇಕು. ಪರಿಹಾರ ಬಾಕಿ ಇರುವ ಕಡೆ ಮಳೆ ಬಂದಾಗ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಗರ ರಸ್ತೆಗಳಲ್ಲಿ ಮಳೆ ಬಂದಾಗ ನೀರು ನಿಲ್ಲುವ 137 ಸ್ಥಳಗಳನ್ನು ಗುರುತಿಸಿ ಸಂಚಾರ ಪೊಲೀಸರು, ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ. ಆ ಸಮಸ್ಯೆ ಪರಿಹಾರವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ಬಿದ್ದ ಮರ ಹಾಗೂ ಮರದ ರೆಂಬೆ-ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಿ, ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಿ, ಹಿರಿಯ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಕಾರ್ಯವಹಿಸಲು ಸೂಚಿಸಿದರು. ಒಣಗಿದ ಮರ ಗುರುತಿಸಿ ತೆರವುಗೊಳಿಸಬೇಕು. ನೆಟ್ಟ ಸಸಿಗಳಿಗೆ ಗ್ರಿಲ್ ಅಳವಡಿಕೆ ಮಾಡಬೇಕೆಂದು ಅರಣ್ಯ ವಿಭಾಗದ ಅಧಿಕಾರಿಗಳಿಗೆ ತಿಳಿಸಿದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ನವೀನ್ ಕುಮಾರ್ ರಾಜು ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಸದ ದೂರಿಗೆ ಸಹಾಯವಾಣಿ
ನಗರದಲ್ಲಿ ಕಸದ ಸಮಸ್ಯೆ ಕುರಿತು ದೂರು ಸಲ್ಲಿಸಲು ಪ್ರತ್ಯೇಕ ಸಹಾಯವಾಣಿ ಸಂಖ್ಯೆ ನೀಡಬೇಕು ಜತೆಗೆ, ನಗರದಲ್ಲಿ ‘ಸ್ವಚ್ಛ ಬೆಂಗಳೂರು ಅಭಿಯಾನ’ ನಡೆಸುವಂತೆ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.