ದೇಹದಲ್ಲಿ 15 ಪ್ರೇತಾತ್ಮಗಳಿವೆ ಎಂದು ಹೆದರಿಸಿ ಮಹಿಳಾ ಪೇದೆಗೆ 6 ಲಕ್ಷ ರು. ವಂಚನೆ

Follow Us

ಸಾರಾಂಶ

ಜಾತಕದಲ್ಲಿ ದೋಷ ಹಾಗೂ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ಅವರಿಂದ ಸುಮಾರು 6 ಲಕ್ಷ ರು. ಪಡೆದು ವಂಚಿಸಿದ ಆರೋಪ

  ಬೆಂಗಳೂರು : ಜಾತಕದಲ್ಲಿ ದೋಷ ಹಾಗೂ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಹೆದರಿಸಿ ಶಾಂತಿ ಪೂಜೆ ನೆಪದಲ್ಲಿ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ಅವರಿಂದ ಸುಮಾರು 6 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಹೇಮಂತ್‌ ಭಟ್‌(50) ಬಂಧಿತ. ಆರೋಪಿಯು ಇತ್ತೀಚೆಗೆ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರಿಗೆ ಜಾತಕದಲ್ಲಿ ದೋಷ ಹಾಗೂ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ ಎಂದು ಹೆದರಿಸಿ ಶಾಂತಿ ಪೂಜೆ ಸೇರಿದಂತೆ ವಿವಿಧ ಪೂಜೆಗಳ ನೆಪದಲ್ಲಿ 6 ಲಕ್ಷ ರು.ಗೂ ಅಧಿಕ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ನೊಂದ ಮಹಿಳಾ ಕಾನ್ಸ್‌ಟೇಬಲ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರನಗರದ ಪೊಲೀಸ್‌ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್ಸ್‌ಟೇಬಲ್‌ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಮದುವೆಗೆ ಪ್ರಯತ್ನಿಸಿದರೂ ಸಂಬಂಧ ಕೂಡಿ ಬಂದಿರಲಿಲ್ಲ. ಹೀಗಾಗಿ ಸ್ನೇಹಿತರ ಸಲಹೆ ಮೇರೆಗೆ ಟಿವಿ ಜಾಹೀರಾತಿನಲ್ಲಿ ಈ ಜೋತಿಷಿ ಹೇಮಂತ್‌ ಭಟ್‌ನ ಮೊಬೈಲ್‌ ಸಂಖ್ಯೆ ಪಡೆದು ಕರೆ ಮಾಡಿ ಮಾತನಾಡಿದ್ದಾರೆ.

ಈ ವೇಳೆ ಹೇಮಂತ್ ಭಟ್‌ ಆಕೆಯ ಜಾತಕ ತರಿಸಿಕೊಂಡು ಪರಿಶೀಲಿಸಿ, ನಿನ್ನ ದೇಹದಲ್ಲಿ ಹದಿನೈದು ಪ್ರೇತಾತ್ಮಗಳಿವೆ. ಹೀಗಾಗಿ ನೀನು ಪದೇ ಪದೇ ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿರುವೆ. ಮದುವೆ ಸಹ ವಿಳಂಬವಾಗಲೂ ಈ ಸಮಸ್ಯೆಗಳೇ ಕಾರಣವಾಗಿದೆ. ಶಾಂತಿ ಪೂಜೆ ಮಾಡಿಸದಿದ್ದರೆ, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಬೆದರಿಸಿದ್ದಾನೆ.

ಖಾಸಗಿ ಹೋಟೆಲ್‌ನಲ್ಲಿ ಪೂಜೆ:

ಇದರಿಂದ ಆತಂಕಗೊಂಡ ಮಹಿಳಾ ಕಾನ್ಸ್‌ಟೇಬಲ್‌, ಜೋತಿಷಿ ಹೇಮಂತ್‌ ಭಟ್‌ ಮಾತು ನಂಬಿ ಜಾತಕ ದೋಷ ಪರಿಹಾರಕ್ಕೆ ಪೂಜೆ ಮಾಡಿಸಲು ಒಪ್ಪಿದ್ದಾರೆ. ಬಳಿಕ ಆತನ ಸೂಚನೆ ಮೇರೆಗೆ ಕೋರಮಂಗಲ ಖಾಸಗಿ ಹೋಟೆಲ್‌ವೊಂದರಲ್ಲಿ ರೂಮ್‌ ಬಾಡಿಗೆಗೆ ಪಡೆದು ಪೂಜೆ ಮಾಡಿಸಿದ್ದಾರೆ. ಪ್ರತಿಯಾಗಿ ಹೇಮಂತ್‌ ಭಟ್‌, ಮಹಿಳಾ ಕಾನ್ಸ್‌ಟೇಬಲ್‌ನಿಂದ ವಿವಿಧ ಹಂತಗಳಲ್ಲಿ 6 ಲಕ್ಷ ರು.ಗೂ ಅಧಿಕ ಹಣ ಪಡೆದುಕೊಂಡಿದ್ದಾನೆ.

ಪೂಜೆ ಬಳಿಕವೂ ಚೇತರಿಸದ ಆರೋಗ್ಯ:

ಪೂಜೆ ಬಳಿಕವೂ ಮಹಿಳಾ ಕಾನ್ಸ್‌ಟೇಬಲ್‌ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಲ್ಲ. ಬಳಿಕ ಜೋತಿಷಿ ಹೇಮಂತ್‌ ಭೇಟ್‌ಗೆ ಕರೆ ಮಾಡಿ ಹಣ ವಾಪಾಸ್‌ ನೀಡುವಂತೆ ಕೇಳಿದ್ದಾರೆ. ಆದರೆ, ಆತ ಹಣ ವಾಪಾಸ್‌ ನೀಡಿಲ್ಲ. ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ಹೀಗಾಗಿ ಮಹಿಳಾ ಕಾನ್ಸ್‌ಟೇಬಲ್‌ ತನಗೆ ವಂಚಿಸಿದ ಜೋತಿಷಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಡುಗೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದೇ ರೀತಿ ಆರೋಪಿಯಿಂದ ಯಾರಾದರೂ ವಂಚನೆಗೆ ಒಳಗಾಗಿದ್ದಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. 

Read more Articles on