ಪಾಲಿಕೆ ಅಧಿಕಾರಿ, ಪ್ರಭಾವಿಗಳಿಂದ ಭೂಮಿ ಕಬಳಿಕೆ ಯತ್ನ!

KannadaprabhaNewsNetwork | Published : Jan 24, 2024 2:04 AM

ಸಾರಾಂಶ

ಪಾಲಿಕೆ ಅಧಿಕಾರಿ, ಪ್ರಭಾವಿಗಳಿಂದ ಭೂಮಿ ಕಬಳಿಕೆ ಯತ್ನ! ಸತ್ಯಾಸತ್ಯತೆ ಪತ್ತೆಹಚ್ಚಲು ಪಾಲಿಕೆ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನಿರ್ದೇಶನ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬಿಎಚ್‌ಇಎಲ್‌ ಬಡಾವಣೆಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಭಾವಿಗಳು ಭೂಮಿ ಕಬಳಿಸಲು ಯತ್ನಿಸಿರುವ ಆರೋಪ ಕುರಿತ ಸತ್ಯಾಸತ್ಯತೆ ಪತ್ತೆಹಚ್ಚಲು ಕ್ರಮ ಜರುಗಿಸುವಂತೆ ಪಾಲಿಕೆ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬಿಎಚ್‌ಇಎಲ್‌ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂದು ತಿಳಿಸಿ ಬಿಬಿಎಂಪಿ ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಬೆಂಗಳೂರಿನ ರೆಮ್ಕೋ (ಬಿಎಚ್‌ಇಎಲ್) ಬಡಾವಣೆಯ ನಿವಾಸಿಗಳು ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಬಿಬಿಎಂಪಿ ನೀಡಿದ್ದ ನೋಟಿಸ್‌ಗಳನ್ನು ರದ್ದುಪಡಿಸಿದೆ.

ವಿಚಾರಣೆಯಲ್ಲಿ ಅರ್ಜಿದಾರರು ಪರ ವಕೀಲರು, ಮಿರ್ಲೆ ವರದರಾಜ್ ಮತ್ತು ಅವರ ಸಂಬಂಧಿ ಮಂಜುನಾಥ್ ಎಂಬುವವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ಜಮೀನು ಕಬಳಿಸಿದ್ದಾರೆ. ಈ ಸಂಬಂಧ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳ ವಿರುದ್ದದ ಆರೋಪದ ಸತ್ಯಾಸತ್ಯತೆ ಪತ್ತೆ ಹಚ್ಚುವಂತೆ ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚಿಸಿತು. ಜೊತೆಗೆ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು. ಅರ್ಜಿದಾರರು ಬಿಬಿಎಂಪಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸಹ ನಿರ್ದೇಶಿಸಿದೆ.

ಬಿಬಿಎಂಪಿ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ನ್ಯಾಯಪೀಠ, ಅಧಿಕಾರಿಗಳಿರುವುದು ಜನಸಾಮಾನ್ಯರ ಪರ ಸೇವೆ ಸಲ್ಲಿಸಲು ಹೊರತು ಪ್ರಭಾವಿಗಳ ಪರವಾಗಿ ಕೆಲಸ ಮಾಡಲು ಅಲ್ಲ. ಪ್ರಭಾವಿಗಳ ಕೈಗೊಂಬೆಯಾಗಿ ಪಾಲಿಕೆ ಅಧಿಕಾರಿಗಳು ವರ್ತಿಸಬಾರದು. ತಾರತಮ್ಯದಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಪ್ರಕರಣದ ಹಿನ್ನೆಲೆ:

ನಿಯಮಗಳ ಅನುಸಾರ ಸರ್ಕಾರ ಖಾಸಗಿ ವ್ಯಕ್ತಿಗಳ ಜಮೀನು ಸ್ವಾಧೀನಪಡಿಸಿಕೊಂಡು ನೀಡಿದ್ದ ಜಾಗದಲ್ಲಿ ಬಿಎಚ್‌ಇಎಲ್ ಅಧೀನದ ರೆಮ್ಕೋ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ ನಿರ್ಮಿಸಿ 1992ರಲ್ಲಿ ನಿವೇಶನ ರಚಿಸಿ ಹಂಚಿಕೆ ಮಾಡಿತ್ತು. ಈ ನಡುವೆ ಕೆಲ ಭೂ ಮಾಲೀಕರು ಸ್ವಾಧೀನ ಪ್ರಕ್ರಿಯೆ ಕಾನೂನು ಬಾಹಿರವಾಗಿದ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಬಳಿಕ ಸೊಸೈಟಿಯು ಭೂ ಮಾಲೀಕರನ್ನು ಸಂಪರ್ಕಿಸಿ ಹೆಚ್ಚುವರಿಯಾಗಿ ಪರಿಹಾರ ನೀಡಿ ಜಮೀನು ಪಡೆದುಕೊಂಡಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ನಂತರ ನಿವೇಶನದಾರರು ಸ್ವಾಧೀನಾನುಭವ ಪತ್ರ ಪಡೆದು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು. ಮನೆಗಳನ್ನು ಸಹ ನಿರ್ಮಿಸಿಕೊಂಡು ನೆಲೆಸಿದ್ದಾರೆ. ಬಿಬಿಎಂಪಿಗೆ ಆಸ್ತಿ ತೆರಿಗೆ ಸಹ ಪಾವತಿಸಿದ್ದರು. ಆದರೆ, ಕಟ್ಟಡಗಳ ನಿರ್ಮಾಣದಲ್ಲಿ ನಕ್ಷೆ ಮಂಜೂರಾತಿ ನಿಯಮಗಳನ್ನು ಉಲ್ಲಂಘನೆಯಾಗಿದ್ದು, ತೆರವುಗೊಳಿಸುವಂತೆ ಸೂಚಿಸಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ವಾಸ್ತವವಾಗಿ ಮಿರ್ಲೆ ವರದರಾಜು ಮತ್ತವರ ಸಂಬಂಧಿಕರು ಪಾಲಿಕೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಿವೇಶನ/ಭೂಮಿ ಬಳಸಲು ಮತ್ತು ಹೆಸರಿಗೆ ಖಾತೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಬಿಬಿಎಂಪಿ ನೀಡಿರುವ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡುವ ಬದಲು ಸಕ್ರಮಗೊಳಿಸಲು ಬಿಬಿಎಂಪಿ ಕಟ್ಟಡ ಬೈಲಾದಲ್ಲಿ ಅವಕಾಶವಿದೆ. ಉಲ್ಲಂಘನೆ ಮಾಡಿದ ದಿನದಿಂದ ತೆರಿಗೆ ಮತ್ತು ದಂಡ ಪಾವತಿಸುವಂತೆ ಕಟ್ಟಡ ಮಾಲೀಕರಿಗೆ ಸೂಚನೆ ನೀಡಬಹುದು. ಇನ್ನೂ ಮಿರ್ಲೆ ವರದರಾಜು ಮತ್ತು ಮಂಜುನಾಥ್ ಎಂಬುವರು ಪ್ರಕರಣದಲ್ಲಿ ವಿವಾದಿತ ಆಸ್ತಿ ಮೇಲೆ ಹಕ್ಕು ಹೊಂದಿರಬಹುದು ಅಥವಾ ಇಲ್ಲದಿರಬಹುದು. ಆದರೆ, ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಪರವಾಗಿ ಕೆಲ ಮಾಡುವುದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Share this article