ಕನ್ನಡಪ್ರಭ ವಾರ್ತೆ ಮಂಡ್ಯ
ಮೇಲುಕೋಟೆ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿಕ್ಷಕಿ ದೀಪಿಕಾ ಕೊಲೆಯ ಸುಳಿವನ್ನು ಪ್ರವಾಸಿಗರು ಸೆರೆಹಿಡಿದ ೧೩ ಸೆಕೆಂಡ್‌ಗಳ ವಿಡಿಯೋ ನೀಡಿದೆ. ದೀಪಿಕಾಗೆ ಮನಸೋಇಚ್ಛೆ ಥಳಿಸುತ್ತಿರುವ ವಿಡಿಯೋ ಆರೋಪಿಯನ್ನು ಪತ್ತೆ ಹಚ್ಚಲು ಸಹಕರಿಸಿದೆ.ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಹತ್ಯೆಯಾದ ಶಿಕ್ಷಕಿ. ಬಹಿರಂಗಗೊಂಡಿರುವ ವೀಡಿಯೋದಲ್ಲಿರುವುದು ಅದೇ ಗ್ರಾಮದ ಯುವಕ ನಿತೀಶ್ ಎಂದು ಗುರುತಿಸಲಾಗಿದೆ. ಈತನೇ ದೀಪಿಕಾಳನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೇಲುಕೋಟೆಯ ಎಸ್‌ಇಟಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೀಪಿಕಾ ನಿತ್ಯವೂ ತಮ್ಮ ಸ್ಕೂಟರ್‌ನಲ್ಲೇ ಬಂದು ಹೋಗುತ್ತಿದ್ದರು. ಜ.೨೦ರಂದು ದೀಪಿಕಾ ಎಂದಿನಂತೆ ಶಾಲೆಗೆ ಸ್ಕೂಟರ್‌ನಲ್ಲಿ ಆಗಮಿಸಿದ್ದರು. ಶಾಲೆಯ ಕರ್ತವ್ಯ ಮುಗಿಸಿ ಮಧ್ಯಾಹ್ನ ೧೨ ಗಂಟೆಗೆ ಯಾರದೋ ಫೋನ್ ಕಾಲ್ ಬಂದಿದ್ದರಿಂದ ಆಕೆ ಶಾಲೆಯಿಂದ ನಿರ್ಗಮಿಸಿದ್ದರು. ಆ ನಂತರದಲ್ಲಿ ಅವರು ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ.ಶನಿವಾರದಂದೇ ಸ್ಕೂಟರ್ ಪತ್ತೆ:
ದೀಪಿಕಾ ನಾಪತ್ತೆಯಾಗಿರುವ ಬಗ್ಗೆ ಜ.೨೦ರಂದೇ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾಕತಾಳೀಯವೆಂಬಂತೆ ಅಂದೇ ಪ್ರವಾಸಿಗರು ಬೆಟ್ಟದ ಮೇಲಿನಿಂದ ಯುವಕ-ಯುವತಿ ಹೊಡೆದಾಡುವ ವಿಡಿಯೋವನ್ನು ಸೆರೆ ಹಿಡಿದಿದ್ದರು. ಅದನ್ನು ಪೊಲೀಸರಿಗೂ ಒಪ್ಪಿಸಿದ್ದರು. ಅದರ ಜಾಡು ಹಿಡಿದು ಹೋದವರಿಗೆ ಸಿಕ್ಕಿದ್ದು ದೀಪಿಕಾರವರ ಸ್ಕೂಟರ್ ಮಾತ್ರ. ಸ್ಕೂಟರ್ ಸಿಕ್ಕಿದ ನಂತರವೂ ಪೊಲೀಸರು ದೀಪಿಕಾ ಪತ್ತೆಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪಗಳು ಕೇಳಿಬಂದಿವೆ.ಸೋಮವಾರದಂದು ದೀಪಿಕಾ ಶವ ಕುಟುಂಬದವರಿಗೆ ಸಿಕ್ಕಿತು. ಶಿಕ್ಷಕಿಯನ್ನು ಕೊಲೆಗೈದು ಮಣ್ಣಿನಲ್ಲಿ ಹೂತುಹಾಕಲಾಗಿತ್ತು. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದ ದೀಪಿಕಾ ಮತ್ತು ಯುವಕನ ನಡುವೆ ವಿರಸ ಉಂಟಾಗಿದ್ದು ಏಕೆ, ಹೊಡೆದಾಟಕ್ಕೆ ಕಾರಣವೇನು, ಕೊಲೆ ಹೇಗೆ ನಡೆಯಿತು ಎನ್ನುವುದು ಬಹಿರಂಗಗೊಂಡಿಲ್ಲ.
ಹೊಡೆದಾಡುತ್ತಿರುವ ದೃಶ್ಯ ಸೆರೆ:ಕೊಲೆ ಶಂಕೆ ವ್ಯಕ್ತವಾಗಿರುವ ನಿತೀಶ್ ಸ್ವಗ್ರಾಮದವನಾಗಿದ್ದು, ದೀಪಿಕಾಗೆ ಪರಿಚಯಸ್ಥನಾಗಿದ್ದನು. ಆಕೆಯನ್ನು ಅಕ್ಕ.. ಅಕ್ಕ.. ಎಂದೇ ಕರೆಯುತ್ತಿದ್ದನು ಎಂದು ಹೇಳಲಾಗಿದೆ. ಪ್ರವಾಸಿಗರು ಸೆರೆಹಿಡಿದಿರುವ ವಿಡಿಯೋದಲ್ಲಿ ಯುವಕ-ಯುವತಿ ಹೊಡೆದಾಡುತ್ತಿರುವುದು. ಆ ದೃಶ್ಯಗಳಲ್ಲಿರುವುದು ನಿತೀಶ್ ಮತ್ತು ದೀಪಿಕಾ ಪತ್ತೆಹಚ್ಚಲಾಗಿದೆ. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೀಪಿಕಾರನ್ನು ನಿತೀಶ್ ಕೊಲೆ ಮಾಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಶವ ಸಿಗುತ್ತಿದ್ದಂತೆ ಆರೋಪಿ ಪರಾರಿ:ದೀಪಿಕಾ ಶವ ಸಿಗುತ್ತಿದ್ದಂತೆ ಶಂಕಿತ ಆರೋಪಿ ನಿತೀಶ್ ತಲೆಮರೆಸಿಕೊಂಡಿದ್ದಾನೆ. ಸೋಮವಾರ ಸಂಜೆಯವರೆಗೂ ಊರಿನಲ್ಲೇ ಓಡಾಡಿಕೊಂಡಿದ್ದನು. ಶವ ಪತ್ತೆಯಾದ ನಂತರ ನನ್ನನ್ನು ಹುಡುಕಬೇಡಿ, ನಾನು ತಪ್ಪು ಮಾಡಿದ್ದೇನೆ. ಅಕ್ಕನಿಗೆ ಮದುವೆ ಮಾಡಿ ಎಂದು ಸಂದೇಶ ಕಳುಹಿಸಿ ಪರಾರಿಯಾಗಿದ್ದಾನೆ. ನಿತೀಶ್ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಂಕಿತ ಆರೋಪಿ ನಿತೀಶ್‌ಗಾಗಿ ಶೋಧ ನಡೆಸುತ್ತಿದ್ದಾರೆ.