;Resize=(412,232))
ವೆಂಕಟೇಶ್ ಕಲಿಪಿ
ಬೆಂಗಳೂರು : ಬಲವಾದ ಕಾರಣಗಳಿಲ್ಲದಿದ್ದರೂ ಯಾಂತ್ರಿಕವಾಗಿ ಪೆರೋಲ್ ಮನವಿಗಳನ್ನು ತಿರಸ್ಕರಿಸುವ ಜೈಲು ಪ್ರಾಧಿಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಉತ್ತಮ ನಡವಳಿಕೆ ಹೊರತಾಗಿಯೂ ಸಜಾಬಂಧಿಯನ್ನು ಪೆರೋಲ್ ಮೇಲೆ ತಾತ್ಕಾಲಿಕ ಬಿಡುಗಡೆ ಮಾಡದೆ ನಿರಂತರವಾಗಿ ಜೈಲಿನಲ್ಲಿಡುವುದು, ನ್ಯಾಯಯುತ ಮತ್ತು ಸಮಂಜಸವಾದ ಕಾರ್ಯವಿಧಾನದ ಮತ್ತು ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ ಪೋಷಕರನ್ನು ಕಂಡು ಆರೈಕೆ ಮಾಡುವುದಕ್ಕೆ ಅನುಕೂಲವಾಗಲು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬೆಂಗಳೂರಿನ ಗಾರ್ವೆಭಾವಿಪಾಳ್ಯ ನಿವಾಸಿ ಆನಂದ್ ಅಲಿಯಾಸ್ ಕುಪ್ಪ ಎಂಬಾತನಿಗೆ ಪೆರೋಲ್ ನಿರಾಕರಿಸಿದ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರ ಕ್ರಮ ಆಕ್ಷೇಪಿಸಿ ಕೈದಿ ಪತ್ನಿ ಮರಿಯಾ ದೀಪಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಈ ಆದೇಶ ಮಾಡಿದೆ.
ಪೆರೋಲ್ ಎಂಬುದು ದಾನದ (ಚಾರಿಟಿ) ವಿಷಯವಲ್ಲ. ಬದಲಾಗಿ ಶಿಕ್ಷೆಯ ಸುಧಾರಣಾ ಸಿದ್ಧಾಂತದ ಒಂದು ಅಂಶ. ಪೆರೋಲ್ ಈಗ ಕ್ರಿಮಿನಲ್ ನ್ಯಾಯ, ಮಾನವೀಯ ಆಡಳಿತದ ಭಾಗವಾಗಿ ಸಾಂವಿಧಾನಿಕ ಮನ್ನಣೆ ಗಳಿಸಿದೆ. ಪೆರೋಲ್‌ನ ಉದ್ದೇಶ ಅಪರಾಧಿಗೆ ಸಾಮಾಜಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು, ವೈಯಕ್ತಿಕ ಮತ್ತು ಕೌಟುಂಬಿಕ ಅಗತ್ಯ ಪೂರೈಸಲು ಮತ್ತು ಸಮಾಜದಲ್ಲಿ ಮರುಸಂಘಟನೆಗೆ ಅನುಕೂಲವಾಗುವಂತೆ ಮಾಡುವುದು. ಆದ್ದರಿಂದ, ಪೆರೋಲ್ ನಿರಾಕರಣೆ ಯಾಂತ್ರಿಕವಾಗಿರಬಾರದು. ಅಸ್ಪಷ್ಟ ಅನುಮಾನಗಳ ಮೇಲೆ ನಿಂತಿರಬಾರದು. ಸಾರ್ವಜನಿಕ ಸುವ್ಯವಸ್ಥೆ ಅಥವಾ ಸುರಕ್ಷತೆಗೆ ನಿಜವಾಗಿ ಬೆದರಿಕೆಯಾಗಿದೆ ಎಂಬುದು ಸ್ಪಷ್ಟವಾಗಿ ಕಾಣಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪೆರೋಲ್ ಅನ್ನು ನಿಯಂತ್ರಿಸುವ ಸಿದ್ಧಾಂತವನ್ನು ಸಾಂವಿಧಾನಿಕ ನ್ಯಾಯಾಲಯಗಳು ಪ್ರಮುಖವಾಗಿ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ಸಮತೋಲನ ಹಾಗೂ ಸ್ಥಿರವಾಗಿ ವ್ಯಾಖ್ಯಾನಿಸಿವೆ. ಒಂದು ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಾತರಿಪಡಿಸುವಲ್ಲಿ ಸಾಮಾಜಿಕ ಹಿತಾಸಕ್ತಿ, ಮತ್ತೊಂದು ಭಾರತದ ಸಂವಿಧಾನದ 21ನೇ ಪರಿಚ್ಛೇದ ಅಡಿ ಅಪರಾಧಿಯ ಘನತೆ ಮತ್ತು ಸುಧಾರಣೆಯ ಹಕ್ಕು. ಹಾಗಾಗಿ, ಪೆರೋಲ್ ನಿಯಂತ್ರಿತ ಮತ್ತು ಷರತ್ತುಬದ್ಧ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸುತ್ತದೆಯೇ ಹೊರತು ಶಿಕ್ಷೆಗೆ ಅಡ್ಡಿಪಡಿಸುವುದಿಲ್ಲ. ಆದರೆ, ಕೇವಲ ಶಿಕ್ಷೆ ಅನುಭವಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಬಂಧಿತ ವ್ಯಕ್ತಿಯ ಚಲನೆ ನಿರ್ಬಂಧಿಸುವುದು, ನಿಯಮಿತವಾಗಿ ಪೊಲೀಸರಿಗೆ ವರದಿ ಮಾಡಲು ನಿರ್ದೇಶಿಸುವುದು ಮತ್ತು ಪ್ರಕರಣದ ಸಂತ್ರಸ್ತರ ಅಥವಾ ಅವರ ಕುಟುಂಬದೊಂದಿಗೆ ಯಾವುದೇ ಸಂಪರ್ಕ ನಿಷೇಧಿಸುವುದು ಸೇರಿ ಷರತ್ತು ವಿಧಿಸುವ ಮೂಲಕ ಪೆರೋಲ್ ನೀಡುವುದರಿಂದ ಎದುರಾಗಬಹುದಾದ ಯಾವುದೇ ಸಂಭಾವ್ಯ ಅಪಾಯ ತಗ್ಗಿಸಬಹುದು. ಅಂತಹ ಸುರಕ್ಷತಾ ಕ್ರಮಗಳು ಲಭ್ಯವಿದ್ದಾಗ, ಪೆರೋಲ್ ಅನ್ನು ಸಂಪೂರ್ಣವಾಗಿ ನಿರಾಕರಿಸುವುದು ಸಮಾನತೆ ಹಾಗೂ ಪೆರೋಲ್ ಮಂಜೂರಾತಿಯನ್ನು ನಿಯಂತ್ರಿಸುವ ತತ್ವಗಳಿಗೆ ವಿರುದ್ಧವಾಗಿರುತ್ತದೆ ಎಂದು ಪೀಠ ಹೇಳಿದೆ.
ಪೆರೋಲ್ ಒಂದು ಸುಧಾರಣಾ ಕ್ರಮವಾಗಿದೆ. ಆದ್ದರಿಂದ, ಬಲವಾದ ಕಾರಣಗಳಿಲ್ಲದೆ ಅದನ್ನು ನಿರಾಕರಿಸುವುದು ನ್ಯಾಯಶಾಸ್ತ್ರದ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಉತ್ತಮ ನಡವಳಿಕೆ ಹೊರತಾಗಿಯೂ ಕೈದಿಗೆ ತಾತ್ಕಾಲಿಕ ಬಿಡುಗಡೆಯನ್ನೂ ನೀಡದೆ ಆತನನ್ನು ನಿರಂತರವಾಗಿ ಜೈಲಿನಲ್ಲಿಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುತ್ತದೆ. ಪ್ರಕರಣದಲ್ಲಿ ಸಜಾಬಂಧಿಗೆ ಪೆರೋಲ್ ನೀಡಲು ಸಮಂಜಸ ಕಾರಣಗಳಿವೆ ನ್ಯಾಯಾಲಯ ನುಡಿದಿದೆ.
ಷರತ್ತು ವಿಧಿಸಿ:
ಹಾಗೆಯೇ, ಆನಂದ್‌ಗೆ 90 ದಿನಗಳ ಕಾಲ ಪೆರೋಲ್ ನೀಡಬೇಕು. ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿವುದಿಲ್ಲ ಎಂದು ಆನಂದ್‌ನಿಂದ ಮುಚ್ಚಳಿಕೆ ಪಡೆಯಬೇಕು. ಆತನಿಗೆ ಕಠಿಣವಾದ ಷರತ್ತು ವಿಧಿಸಬೇಕು. ಸಂಬಂಧಪಟ್ಟ ಠಾಣೆಯ ಪೊಲೀಸರು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಪ್ರಕರಣ ಸಂತ್ರಸ್ತ ಕಟುಂಬದವರನ್ನು ಆನಂದ್ ಸಂಪರ್ಕ ಮಾಡದಂತೆ ನೋಡಿಕೊಳ್ಳಬೇಕು ಎಂದು ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಿಗೆ ನಿರ್ದೇಶಿಸಿರುವ ಹೈಕೋರ್ಟ್, ಯಾವುದೇ ಷರತ್ತು ಉಲಂಘಿಸಿದರೂ ಪೆರೋಲ್ ಮಂಜೂರಾತಿ ರದ್ದಾಗುತ್ತದೆ ಎಂದು ಎಚ್ವರಿಸಿದೆ
ಪ್ರಕರಣವೇನು?:
ಕೊಲೆ ಪ್ರಕರಣದಲ್ಲಿ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 2019ರ ಏ.20ರಂದು ನಗರದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಕಳೆದ 8 ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆನಂದ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಆನಂದ್ ಪೋಷಕರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಅವರನ್ನು ಕಂಡು, ಸ್ವಲ್ಪ ಸಮಯ ಆರೈಕೆಗೆ ಪೆರೋಲ್ ನೀಡಬೇಕೆಂಬ ಪತ್ನಿಯ ಮನವಿ ತಿರಸ್ಕರಿಸಿ ಪರಪ್ಪನ ಅಗ್ರಹಾರ ಅಧೀಕ್ಷಕರು 2025 ಡಿ.23ರಂದು ಆದೇಶಿಸಿದ್ದರು.