ಚನ್ನಪಟ್ಟಣದ ತೊಟದ ಮನೆಯಿಂದ ನಾಪತ್ತೆ । ಮಲೆ ಮಹದೇಶ್ವರ ವನ್ಯಧಾಮದ 50 ಅಡಿ ಕಂದಕದಲ್ಲಿ ಮೃತದೇಹ ಪತ್ತೆ
ಕನ್ನಡಪ್ರಭ ವಾರ್ತೆ ಹನೂರು
ಕಳೆದ ಮೂರು ದಿನಗಳ ಹಿಂದೆ ಚನ್ನಪಟ್ಟಣದ ಚಕ್ಕೆರೆ ತೋಟದ ಮನೆಯಿಂದ ನಾಪತ್ತೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ರವರ ಭಾವ, ಉದ್ಯಮಿ, ಮೆಗಾ ಸಿಟಿ ನಿರ್ದೇಶಕ ಮಹದೇವಯ್ಯನವರ ಶವ ಸೋಮವಾರ ಪತ್ತೆಯಾಗಿದೆ.ರಾಮಾಪುರದಿಂದ ನಾಲ್ ರೋಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಮಲೆ ಮಹದೇಶ್ವರ ವನ್ಯಧಾಮದ ದೊಡ್ಡ ಬಂಡೆ ಸಮೀಪ 50 ಅಡಿ ಅಳದ ಕಂದಕದಲ್ಲಿ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾನುವಾರ ರಾತ್ರಿ ಹನೂರು ತಾಲೂಕಿನ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸಿಪಿ ಯೋಗೇಶ್ವರ್ ರವರ ಭಾವ ಬಳಸುತ್ತಿದ್ದ ಬ್ರಿಜಾ ಕಾರು ಪತ್ತೆಯಾಗಿತ್ತು. ತಕ್ಷಣ ರಾಮಾಪುರ ಪೊಲೀಸರು ಪರಿಶೀಲನೆ ನಡೆಸಿ, ಚನ್ನಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೋಮವಾರ ಬೆಳಗ್ಗೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಸೋಮೇಗೌಡ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪತ್ತೆ ಕಾರ್ಯ ನಡೆಸಿತ್ತು.
ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಇದ್ದ ಮಳಿಗೆಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ಪೊಲೀಸರು, ನಾಲ್ ರೋಡ್ ಮಾರ್ಗ ಕಾರ್ ತೆಗೆದುಕೊಂಡು ಬಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮೂವರು ಮುಸುಕು ದಾರಿಗಳು ಕಾರು ನಿಲ್ಲಿಸಿ ತೆರಳುತ್ತಿರುವುದು ಸೆರೆಯಾಗಿತ್ತು.
ಡಿ. 1ರ ಮಧ್ಯರಾತ್ರಿ ಮಹದೇವಯ್ಯ ಅವರು ಚನ್ನಪಟ್ಟಣದ ಚಕ್ಕರೆ ಗ್ರಾಮದ ತೋಟದ ಮನೆಯಲ್ಲಿದ್ದರು. ಮಧ್ಯರಾತ್ರಿ 12 ಗಂಟೆಗೆ ತೋಟದ ಮನೆಗೆ ನುಗ್ಗಿದ ಮೂವರು ಅಪರಿಚಿತರು, ಬಳಿಕ ಮನೆಯಲ್ಲಿ ಲಾಕರ್ ಓಪನ್ ಮಾಡಿಸಿ ಪತ್ರ, ದುಡ್ಡು ಕೊಂಡೊಯ್ದಿದ್ದರು ಎನ್ನಲಾಗಿದೆ. ಮಹದೇವಯ್ಯ ಅವರನ್ನು ಹಂತಕರು ಚನ್ನಪಟ್ಟಣದಿಂದ ಕಾರಿನಲ್ಲೇ ಕರೆದುಕೊಂಡು ಹನೂರು ತಾಲೂಕಿನ ನಾಲ್ ರೋಡ್ ಬಳಿ ಬಂದು ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಮೃತ ದೇಹ ಬಿಸಾಡಿದ್ದಾರೆ. ಡಿ. 2ರಂದು ಬೆಳಗಿನ ಜಾವ ರಾಮಾಪುರದಲ್ಲಿ ಕಾರು ನಿಲ್ಲಿಸಿ ಹೋಗಿದ್ದಾರೆ ಎನ್ನಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದ ಎಲ್ಲ ಸಿಸಿ ಕ್ಯಾಮರಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
--
----
----
ಹನೂರು ತಾಲೂಕಿನ ರಾಮಾಪುರದಿಂದ ನಾಲ್ ರೋಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಮಲೆ ಮಹದೇಶ್ವರ ವನ್ಯಧಾಮದ ದೊಡ್ಡ ಬಂಡೆ ಸಮೀಪಲ್ಲಿ ಮಹದೇವಯ್ಯ ಶವ ಪತ್ತೆಯಾಗಿರುವುದು.----