ಹೈಕೋರ್ಟ್ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸಿದ್ಧಪಡಿಸಿ ಯುವತಿ ಸೇರಿ ನಾಲ್ವರಿಗೆ ಕಳುಹಿಸಿ ₹1.53 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಹೈಕೋರ್ಟ್ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸಿದ್ಧಪಡಿಸಿ ಯುವತಿ ಸೇರಿ ನಾಲ್ವರಿಗೆ ಕಳುಹಿಸಿ ₹1.53 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಆರ್‌ಎಸ್ ಅಗ್ರಹಾರ ನಿವಾಸಿ ವಿಜೇತ್ ಅಲಿಯಾಸ್ ವಿಜೇತ್ ರಾಜೇಗೌಡ (32) ಮತ್ತು ನೆಮಮಂಗಲ ತಾಲೂಕು ಚಿನ್ನಮಂಗಲ ನಿವಾಸಿ ಲೋಹಿತ್ (30) ಬಂಧಿತರು. ಹೈಕೋರ್ಟ್ ಲೀಗಲ್ ಸೆಲ್ ಜಂಟಿ ರಿಜಿಸ್ಟ್ರಾರ್ ಎಂ.ರಾಜೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಟ್ರಿಮೊನಿಯಲ್ಲಿ ಯುವತಿ ಪರಿಚಯ:
ಆರೋಪಿಗಳ ಪೈಕಿ ಲೋಹಿತ್ ಐಟಿಐ ವ್ಯಾಸಂಗ ಮಾಡಿದ್ದು, ವಿಜೀತ್ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾನೆ. ಆರೋಪಿ ವಿಜೇತ್ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗೆ ತನ್ನ ಪ್ರೊಫೈಲ್ ಹಾಕಿ, ಅದರಲ್ಲಿ ತಾನು ಸಿವಿಲ್ ಇಂಜಿನಿಯರ್ ಎಂದು ಉಲ್ಲೇಖಿಸಿದ್ದ. ಈ ಪ್ರೊಫೈಲ್ ನೋಡಿದ್ದ ಯುವತಿಯೊಬ್ಬಳು ಆತನನ್ನು ಮದುವೆಯಾಗಲು ಆಸಕ್ತಿ ತೋರಿದ್ದರು. ಬಳಿಕ ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾರೆ.
ಇಡಿ ದಾಳಿ ಎಂದು ಕಥೆ ಕಟ್ಟಿದ:
ಈ ನಡುವೆ ಆರೋಪಿ ವಿಜೇತ್ ತನ್ನ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಈ ಹಿಂದೆ ದಾಳಿ ಮಾಡಿ 1.50 ಕೋಟಿ ರು. ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ಹೈಕೋರ್ಟ್‌ನಲ್ಲಿದ್ದು, ನಾಯ್ಯಾಲಯವು ಈ ಇಡಿ ದಾಳಿಯಲ್ಲಿ ಯಾವುದೇ ಹುರುಳಿಲ್ಲ. ಕೂಡಲೇ ಹಣವನ್ನು ವಾಪಾಸ್ ನೀಡುವಂತೆ ಆದೇಶಿಸಿದೆ ಮತ್ತು ಅನಗತ್ಯ ದಾಳಿ ಮಾಡಿದ ಇಡಿ ಅಧಿಕಾರಿಗಳಿಗೆ ದಂಡ ವಿಧಿಸಿದೆ ಎಂದು ಹೈಕೋರ್ಟ್‌ನ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸಿದ್ಧಪಡಿಸಿ ಯುವತಿಗೆ ಕಳುಹಿಸಿದ್ದಾನೆ. ಇದು ನಿಜವೆಂದ ಯುವತಿ ಭಾವಿಸಿದ್ದಾಳೆ.
ಬಳಿಕ ಆರೋಪಿ ವಿಜೇತ್, ಇಡಿ ಜಪ್ತಿ ಮಾಡಿರುವ ಹಣ ಸದ್ಯದಲ್ಲೇ ನನ್ನ ಖಾತೆಗೆ ಬರಲಿದೆ. ಹೀಗಾಗಿ ಕೆಲ ತಿಂಗಳ ಮಟ್ಟಿಗೆ ಹಣ ಕೊಡುವಂತೆ ಯುವತಿಗೆ ಕೇಳಿದ್ದೇನೆ. ಈತನ ಮಾತು ನಂಬಿದ ಯುವತಿ ವಿವಿಧ ಹಂತಗಳಲ್ಲಿ ಆರೋಪಿ ವಿಜೇತ್ ಖಾತೆಗೆ ₹50 ಲಕ್ಷ ಹಣ ಹಾಕಿದ್ದಾಳೆ. ಬಳಿಕ ಮತ್ತಷ್ಟು ಹಣ ಬೇಕು ಎಂದು ಆರೋಪಿ ಕೇಳಿದ್ದಾನೆ. ಆಗ ಯುವತಿ ಪರಿಚಿತ ಮೂವರು ಇಂಜಿನಿಯರ್‌ಗಳಿಂದ ಆರೋಪಿ ಖಾತೆಗೆ ಹಣ ಹಾಕಿಸಿದ್ದಾಳೆ. ನಾಲ್ವರು ಸೇರಿ ಆರೋಪಿಗೆ ಒಟ್ಟು ₹1.53 ಕೋಟಿ ಹಣ ಕೊಟ್ಟಿದ್ದಾರೆ.
ಹಣ ಪಡೆದು ಬಳಿಕ ಪ್ರೊಫೈಲ್ ಡಿಲಿಟ್
ಹಣದ ಪಡೆದ ಬಳಿಕ ಆರೋಪಿ ವಿಜೇತ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತನ್ನ ಪ್ರೊಫೈಲ್ ಡಿಲೀಟ್ ಮಾಡಿದ್ದಾನೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಯುವತಿಯ ಸಂಪರ್ಕ ಕಡಿದುಕೊಂಡಿದ್ದಾನೆ. ವಿಜೇತ್‌ನ ಈ ವಂಚನೆಗೆ ಸ್ನೇಹಿತ ಲೋಹಿತ್ ಸಾಥ್ ನೀಡಿದ್ದಾನೆ. ಬಳಿಕ ತಾವು ವಂಚನೆಗೆ ಒಳಗಾಗಿರುವುದು ಯುವತಿ ಸೇರಿ ನಾಲ್ವರಿಗೂ ಅರಿವಿಗೆ ಬಂದಿದೆ. ಈ ಸಂಬಂಧ ಹೈಕೋರ್ಟ್‌ನ ಲೀಗಲ್ ಸೆಲ್ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದರು. ಈ ಸಂಬಂಧ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.