ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ ; ಬಂಧಿತರ ಸಂಖ್ಯೆ 35ಕ್ಕೆ ಏರಿಕೆ..!

KannadaprabhaNewsNetwork |  
Published : Sep 11, 2024, 01:01 AM ISTUpdated : Sep 11, 2024, 05:11 AM IST
ಹೆಣ್ಣು ಭ್ರೂಣ ಹತ್ಯೆ | Kannada Prabha

ಸಾರಾಂಶ

ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಎರಡು ಸ್ಕ್ಯಾನಿಂಗ್ ಯಂತ್ರ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

 ಮಂಡ್ಯ : ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಎರಡು ಸ್ಕ್ಯಾನಿಂಗ್ ಯಂತ್ರ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆದಿರುವ ಮೂರು ಪ್ರತ್ಯೇಕ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಪಾಂಡವಪುರ ತಾಲ್ಲೂಕಿನ ಹಿರೇಮರಳಿ ಗ್ರಾಮದ ನವೀನ್. ಸ್ಕ್ಯಾನಿಂಗ್ ಸೆಂಟರ್ ಇಟ್ಟುಕೊಂಡಿದ್ದ ಕೆ.ಆರ್.ನಗರದ ಶಂಕರ, ಪಾಂಡವಪುರ ಹರಳಹಳ್ಳಿ ಗ್ರಾಮದ ಜಬ್ಬರ್ ಬಾಬು ಬಂಧಿತ ಆರೋಪಿಗಳು. ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಕಿಂಗ್‌ಪಿನ್‌ಗಳಾಗಿದ್ದ ಪಾಂಡವಪುರ ತಾಲೂಕು ಎಂ.ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಗ್ರಾಮದ ವೀರೇಶ್ ಅವರನ್ನು ಸೆ.೩ರಂದು ಪೊಲೀಸರು ಬಂಧಿಸಿದ್ದರು. ಅವರ ಬಂಧನದ ಸಮಯದಲ್ಲೇ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಇನ್ನಷ್ಟು ಜನರ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು ಈಗ ಮತ್ತೆ ಮೂವರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಂಗ್‌ಪಿನ್‌ಗಳು ಸೆರೆಸಿಕ್ಕ ಒಂದು ವಾರದಲ್ಲೇ ಮತ್ತೆ ಮೂವರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿಗಳಿಂದ ಎರಡು ಸ್ಕ್ಯಾನಿಂಗ್ ಯಂತ್ರ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಪಾಂಡವಪುರ ಪ್ರಕರಣದಲ್ಲಿ ೧೯ ಮಂದಿ ಆರೋಪಿಗಳ ಪೈಕಿ 12 ಮಂದಿ, ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ 7 ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿತ್ತು. ಒಟ್ಟಾರೆ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಇದುವರೆಗೆ ೩೫ ಮಂದಿಯನ್ನು ಬಂಧಿಸಲಾಗಿದೆ.

ಆಯತಪ್ಪಿ ಬಿದ್ದು ಬೈಕ್ ಸವಾರ ಸಾವು

ಮದ್ದೂರು:ಬೈಕ್‌ನಿಂದ ಆಯಾತಪ್ಪಿ ಬಿದ್ದು ಬೆಂಗಳೂರು ಮೂಲದ ಮೆಕಾನಿಕ್ ಮೃತಪಟ್ಟಿರುವ ಘಟನೆ ತಾಲೂಕಿನ ಅಗರಲಿಂಗನ ದೊಡ್ಡಿ ಗ್ರಾಮದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಜರುಗಿದೆ.

ಬೆಂಗಳೂರು ಬನಶಂಕರಿ ಲೇಔಟ್‌ನ ಮೂರನೇ ಹಂತದ ನಿವಾಸಿ ಲೇ.ಉಮೇಶ್ ಪುತ್ರ ಮಂಜುನಾಥ್ (25) ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಕೊನೆ ಉಸಿರೆಳೆದಿದ್ದಾನೆ.ವೃತ್ತಿಯಲ್ಲಿ ಮೋಟಾರ್ ವಾಹನಗಳ ಮೆಕಾನಿಕ್ ಆಗಿದ್ದ ಮಂಜುನಾಥ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಡಿಕೇರಿಗೆ ತಮ್ಮ ಬೈಕಿನಲ್ಲಿ ತೆರಳುತ್ತಿದ್ದರು. ಅಗರಲಿಂಗನ ದೊಡ್ಡಿ ಗ್ರಾಮದ ಬಳಿಯ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮವಾಗಿ ಅಪಘಾತ ಸಂಭವಿಸಿದೆ.

ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV

Recommended Stories

ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ನಾಯಿ ರಕ್ಷಣೆಗೆ ರಸ್ತೆ ಬದಿ ನಿಂತಿದ್ದ ಯುವತಿ ಮೈಮುಟ್ಟಿ ಇಂಜಿನಿಯರ್‌ ದುರ್ವರ್ತನೆ : ಬಂಧನ