ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾಮರಾಜಪೇಟೆಯ ರಾಯನ್ ಸರ್ಕಲ್‌ನಲ್ಲಿರುವ ಹಳೇ ಕಚೇರಿಯನ್ನು ಎರಡು ವಾರಗಳಲ್ಲಿ ಖಾಲಿ ಮಾಡಿ ಶಾಂತಿನಗರದಲ್ಲಿರುವ ಬಿಎಂಟಿಸಿಯ ಟಿಟಿಎಂಸಿ ಕಟ್ಟಡಕ್ಕೆ ಸಿಸಿಬಿ ಅಧಿಕಾರಿಗಳು ಸ್ಥಳಾಂತರವಾಗಲಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ಚುರುಕಿನಿಂದ ಸಾಗಿದೆ. ಇನ್ನು ಹಳೇ ಕಟ್ಟಡವನ್ನು ತೆರವುಗೊಳಿಸದೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಡಿ ಎಂದು ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.
ಆಯುಕ್ತರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, ಅಳೆದುತೂಗಿ ಅಂತಿಮವಾಗಿ ಶಾಂತಿನಗರದ ಟಿಎಂಸಿ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿಯನ್ನು ತೆರೆಯಲು ನಿರ್ಧರಿಸಿದ್ದಾರೆ. ಇದಕ್ಕೆ ಆಯುಕ್ತರು ಸಮ್ಮತಿಸಿದ್ದಾರೆ.ಸಿಸಿಬಿಗೆ ಹೊಸ ಕಟ್ಟಡ ನಿರ್ಮಾಣ ಸಂಬಂಧ ಹಲವು ವರ್ಷಗಳಿಂದ ಪ್ರಯತ್ನ ನಡೆದಿದ್ದು, ಈಗ ಹಳೇ ಕಟ್ಟಡ ತೆರವು ಬಳಿಕ ಸಿಸಿಬಿ ನೂತನ ಕಾರ್ಯಾಲಯ ಕಾಣುವ ನಿರೀಕ್ಷೆ ಮೂಡಿಸಿದೆ.ಸಿಸಿಬಿ ಕಚೇರಿ ಸ್ಥಿತಿ ಕಂಡು ಮರುಗಿದ್ದ ದಯಾನಂದ್
ಆಗ ಸಿಸಿಬಿಗೆ ಹೊಸ ಕಟ್ಟಡದ ನಿರ್ಮಾಣ ವಿಚಾರವನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಆದರೆ ಈ ಮಾತಿಗೆ ಆಯುಕ್ತರು, ಮೊದಲು ಹಳೆ ಕಟ್ಟಡವನ್ನು ತೆರವುಗೊಳಿಸಿ ಆಮೇಲೆ ಹೊಸ ಕಟ್ಟಡದ ಪ್ರಸ್ತಾಪ ಮಾಡುವಂತೆ ಹೇಳಿದ್ದರು. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಕಚೇರಿಯನ್ನು ಖಾಲಿ ಮಾಡಲು ಮುಂದಾದ ಅಧಿಕಾರಿಗಳು, ಮೊದಲು ವಿಜಯನಗರದ ಬಿಎಸ್‌ಎನ್ಎಲ್ ಸೇರಿದಂತೆ ಕೆಲವು ಕಟ್ಟಡಗಳನ್ನು ಪರಿಶೀಲಿಸಿದರು. ಆದರೆ ಅಂತಿಮವಾಗಿ ಗುಪ್ತದಳದ ಕಚೇರಿ ಸ್ಥಳಾಂತರ ಬಳಿಕ ಶಾಂತಿನಗರದ ಟಿಎಂಸಿಯಲ್ಲಿ ಖಾಲಿಯಾಗಿದ್ದ ಕಟ್ಟಡಕ್ಕೆ ಸಿಸಿಬಿ ಕಚೇರಿ ತೆರೆಯಲು ನಿರ್ಧರಿಸಲಾಗಿದೆ.ನಾನೇ ಕಟ್ಟಡ ನಿರ್ಮಿಸಿ ಕೊಡುವೆ ಎಂದಿದ್ದ ರೆಡ್ಡಿ!
ಈ ಹಿಂದೆ ವಂಚನೆ ಯತ್ನ ಪ್ರಕರಣ ಸಂಬಂಧ ಬಳ್ಳಾರಿ ಗಣಿಧಣಿ ಹಾಗೂ ಈಗಿನ ಗಂಗಾವತಿ ಕ್ಷೇತ್ರದ ಶಾಸಕ ಜೆ.ಜನಾರ್ಧನ ರೆಡ್ಡಿ ಅವರನ್ನು ಸಿಸಿಬಿ ಬಂಧಿಸಿತ್ತು. ಆಗ ಸಿಸಿಬಿ ಕಚೇರಿಯ ಅವಸ್ಥೆ ನೋಡಿದ್ದ ರೆಡ್ಡಿ ಅವರು, ನಾನೇ ಸ್ವಂತ ದುಡ್ಡಿನಲ್ಲಿ ಸಿಸಿಬಿಗೆ ಹೊಸ ಕಟ್ಟಡ ಕಟ್ಟಿಸಿ ಕೊಡುವೆ ಎಂದು ವ್ಯಂಗ್ಯವಾಗಿ ಹೇಳಿದ್ದರು.