ಬಿಎಂಟಿಸಿ ಬಸ್‌ಗೆ ವಿದ್ಯಾರ್ಥಿನಿ ಬಲಿ

KannadaprabhaNewsNetwork | Published : Feb 3, 2024 1:45 AM

ಸಾರಾಂಶ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿದ್ಯಾರ್ಥಿನಿ ಬಲಿ ಆಗಿದ್ದಾಳೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶ್ವರ ನಿವಾಸಿ ಕುಸುಮಿತಾ(21) ಮೃತ ವಿದ್ಯಾರ್ಥಿನಿ. ಮಹಾಕವಿ ಕುವೆಂಪು ರಸ್ತೆಯ ದೇವಯ್ಯ ಪಾರ್ಕ್‌ ಬಳಿ ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ.

ಮೃತ ಕುಸುಮಿತಾ ರಾಜರಾಜೇಶ್ವರಿನಗರದ ಜೆಎಸ್‌ಎಸ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2ನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು. ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೊರಟ್ಟಿದ್ದಳು. ಮಹಕಾವಿ ಕುವೆಂಪು ರಸ್ತೆಯಲ್ಲಿ ನವರಂಗ್‌ ಥಿಯೇಟರ್‌ ಕಡೆಗೆ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್‌, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಕುಸುಮಿತಾಳನ್ನು ಸುಮಾರು 15 ಅಡಿಗಳಷ್ಟು ದೂರಕ್ಕೆ ಬಸ್‌ ಎಳೆದೊಯ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕುಸುಮಿತಾಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕುಸುಮಿತಾ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಿಎಂಟಿಸಿ ಬಸ್‌ ಹಾಗೂ ಅದರ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

ಬಿಎಂಟಿಸಿ ಬಸ್‌ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬಿಎಂಟಿಸಿ ಬಸ್‌ ಜಪ್ತಿ ಮಾಡಿದ್ದು, ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೋಷಕರ ಆಕ್ರಂದನ

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮೃತ ವಿದ್ಯಾರ್ಥಿನಿ ಕುಸುಮಿತಾಳ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗಳು ನಿತ್ಯ ಮೆಟ್ರೋ ರೈಲಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ತಡವಾದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಆದರೆ, ಬಿಎಂಟಿಸಿ ಬಸ್‌ ನಮ್ಮ ಮಗಳನ್ನು ಬಲಿ ಪಡೆದಿದೆ. ಇನ್ನು ಯಾರಿಗೂ ಈ ರೀತಿ ಆಗಬಾರದು ಎಂದು ಮೃತ ವಿದ್ಯಾರ್ಥಿನಿ ತಂದೆ ಹರಿಪ್ರಕಾಶ್‌ ಕಣ್ಣೀರಿಟ್ಟರು.

ಬಸ್‌ ಹಿಂದಿಕ್ಕುವ ಭರದಲ್ಲಿ

ಬೈಕ್‌ ಸ್ಕಿಡ್‌: ಬಿಎಂಟಿಸಿ

ವಿದ್ಯಾರ್ಥಿನಿ ಕುಸುಮಿತಾ ಅವರು ಬಿಎಂಟಿಸಿ ಬಸ್‌( ಕೆ.ಎ.57 ಎಫ್‌ 3350)ಅನ್ನು ಹಿಂದಿಕ್ಕಲು ಪ್ರಯತ್ನಿಸುವಾಗ ಎದುರು ಬದಿಯಲ್ಲಿ ಆಟೋರಿಕ್ಷಾ ಇದ್ದ ಪರಿಣಾಮ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಆಯತಪ್ಪಿ ಬಸ್‌ನ ಎಡಭಾಗದ ಹಿಂಬದಿ ಚಕ್ರಕ್ಕೆ ಬಿದ್ದಿದ್ದಾರೆ. ವಿದ್ಯಾರ್ಥಿನಿ ಬಸ್‌ ಹಿಂದಿಕ್ಕಲು ಪ್ರಯತ್ನಿಸುತ್ತಿರುವುದು ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಬಿಎಂಟಿಸಿ ವಿಡಿಯೋ ತುಣುಕನ್ನು ಹಂಚಿಕೊಂಡಿದೆ. ಅಂದರೆ, ಈ ಅಪಘಾತದಲ್ಲಿ ಬಿಎಂಟಿಸಿ ಬಸ್‌ ಚಾಲಕನ ತಪ್ಪಿಲ್ಲ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದೆ.

Share this article