ಪ್ರತ್ಯೇಕವಾಗಿ ನಾಲ್ವರ ಸೆರೆ: ₹1 ಕೋಟಿಯ ಚಿನ್ನ ಜಪ್ತಿ

KannadaprabhaNewsNetwork | Updated : Mar 19 2024, 01:03 PM IST

ಸಾರಾಂಶ

ವಿದೇಶಿದಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ಸುಮಾರು ₹1 ಕೋಟಿ ಮೌಲ್ಯದ ಬಂಗಾರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶಿದಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ಸುಮಾರು ₹1 ಕೋಟಿ ಮೌಲ್ಯದ ಬಂಗಾರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ.

ಕೆಐಎಗೆ ಮದೀನಾ ಹಾಗೂ ಬಹರೈನ್‌ನಿಂದ ಬಂದಿಳಿದ ಇಬ್ಬರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿ ಆರೋಪಿಗಳಿಂದ ₹74 ಲಕ್ಷದ 1.167 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. 

ಅದೇ ರೀತಿ ಕುವೈತ್‌ನಿಂದ ಆಗಮಿಸಿದ ಮತ್ತೊಬ್ಬ ಪ್ರಯಾಣಿಕನಿಂದ ₹12.51 ಲಕ್ಷದ 196.73 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಈತ ಬಟ್ಟೆಯಲ್ಲಿ ಚಿನ್ನ ಅಡಗಿಸಿ ಸಾಗಿಸುತ್ತಿದ್ದ. 

ಕೌಲಾಂಪುರದಿಂದ ಬೆಂಗಳೂರಿಗೆ ಮರಳಿದ ವ್ಯಕ್ತಿ ಬಳಿ ₹12.55 ಲಕ್ಷದ 197.43 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಈತ ಸಹ ಬಟ್ಟೆಯಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಹೇಳಿದೆ.

ಬ್ಯಾಂಕ್‌ಗೆ ₹75 ಲಕ್ಷ ವಂಚನೆ: ಐವರಿಗೆ ಸಿಬಿಐ ಕೋರ್ಟ್‌ ಶಿಕ್ಷೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಯಾಂಕ್‌ಗೆ ₹62 ಲಕ್ಷ ವಂಚಿಸಿದ ಪ್ರಕರಣದಲ್ಲಿ ನಗರದ ಸಿಂಡಿಕೇಟ್‌ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಸೇರಿದಂತೆ ಐವರಿಗೆ ಐದು ವರ್ಷ ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಜಿ.ಸತ್ಯಬಾಬು, ಖಾಸಗಿ ವ್ಯಕ್ತಿಗಳಾದ ಭಾರತಿ, ನಳಿನಾಕ್ಷಿ, ರಮೇಶ್‌ ಮತ್ತು ಪಿನ್ಸ್‌ನೇಶನ್‌ಗೆ ಶಿಕ್ಷೆ ವಿಧಿಸಿದೆ.

ಬ್ಯಾಂಕ್‌ನ ಜಾಲಹಳ್ಳಿ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ಸತ್ಯಬಾಬು ಅವರು ಇತರೆ ಆರೋಪಿಗಳೊಂದಿಗೆ ಸೇರಿ ಬ್ಯಾಂಕ್‌ನ ಎಂಎಸ್‌ಇ ಯೋಜನೆಯಡಿಯಲ್ಲಿ ಅಕ್ರಮವಾಗಿ ವಿವಿಧ ಸಾಲಗಳನ್ನು ಮಂಜೂರು ಮಾಡಿದ್ದರು. 

ಇದರಿಂದ ಬ್ಯಾಂಕ್‌ಗೆ ₹76 ಲಕ್ಷ ನಷ್ಟವಾಗಿತ್ತು. ಈ ಬಗ್ಗೆ ಬ್ಯಾಂಕ್‌ ಸಿಬಿಐಗೆ ದೂರು ನೀಡಿತ್ತು. ಸಿಬಿಐ ತನಿಖೆ ನಡೆಸಿದಾಗ ಆರೋಪ ಸಾಬೀತಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಹ ಸಲ್ಲಿಕೆ ಮಾಡಲಾಯಿತು ಎಂದು ಸಿಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಚಾರಣೆಯ ನಂತರ ನ್ಯಾಯಾಲಯ, ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಐದು ವರ್ಷಗಳ ಕಾಲ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ: ವಸ್ತುಗಳು ಆಹುತಿಕನ್ನಡಪ್ರಭ ವಾರ್ತೆ ಬೆಂಗಳೂರುಗೋದಾಮಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಭಾರೀ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಗವಿಸಿದ್ದೇಶ್ವರ ದೇವಸ್ಥಾನ ಸಮೀಪದ ಗೋದಾಮಿನಲ್ಲಿ ಸೋಮವಾರ ಮುಂಜಾನೆ 4ರ ಸುಮಾರಿಗೆ ಈ ಘಟನೆ ನಡೆದಿದ್ದು, ಪ್ರಾಣಹಾನಿ ಸಂಭವಿಸಿಲ್ಲ.

ಮುಂಜಾನೆ ಗೋದಾಮಿನಲ್ಲಿ ಮೊದಲಿಗೆ ದಟ್ಟ ಹೊಗೆ ಆವರಿಸಿ, ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಐದಾರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.ಬೆಂಕಿಯಿಂದಾಗಿ ಭಾರೀ ಪ್ರಮಾಣದ ವಸ್ತುಗಳು ಸುಟ್ಟು ಬೂದಿಯಾಗಿವೆ. 

ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋದಾಮಿನ ಮಾಲಿಕರು ಈವರೆಗೂ ಯಾವುದೇ ದೂರು ನೀಡಿಲ್ಲ. ಹೀಗಾಗಿ ನಷ್ಟದ ಪ್ರಮಾಣದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಕೊತ್ತನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

Share this article