ಆನ್‌ಲೈನ್‌ ವರ್ಕ್‌ ಫ್ರಮ್‌ ಹೋಂ ಹೆಸರಲ್ಲಿ ಕಮಿಷನ್‌ ಆಸೆ ತೋರಿಸಿ ಲಕ್ಷಾಂತರ ರು. ದೋಖಾ

KannadaprabhaNewsNetwork | Updated : May 15 2025, 04:48 AM IST
Follow Us

ಸಾರಾಂಶ

ಆನ್‌ಲೈನ್‌ನಲ್ಲಿ ವರ್ಕ್‌ ಫ್ರಮ್‌ ಹೋಮ್‌ ಪ್ರಾಜೆಕ್ಟ್‌ ಹೆಸರಿನಲ್ಲಿ ಕಮಿಷನ್‌ ಆಸೆ ತೋರಿಸಿ ಬಳಿಕ ಕಮಿಷನ್‌ ಹಣ ವಿತ್‌ ಡ್ರಾ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರು. ಪಡೆದು ವಂಚಿಸುತ್ತಿದ್ದ ಹೊರ ರಾಜ್ಯದ 12 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಆನ್‌ಲೈನ್‌ನಲ್ಲಿ ವರ್ಕ್‌ ಫ್ರಮ್‌ ಹೋಮ್‌ ಪ್ರಾಜೆಕ್ಟ್‌ ಹೆಸರಿನಲ್ಲಿ ಕಮಿಷನ್‌ ಆಸೆ ತೋರಿಸಿ ಬಳಿಕ ಕಮಿಷನ್‌ ಹಣ ವಿತ್‌ ಡ್ರಾ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರು. ಪಡೆದು ವಂಚಿಸುತ್ತಿದ್ದ ಹೊರ ರಾಜ್ಯದ 12 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 400 ಸಿಮ್‌ ಕಾರ್ಡ್‌ಗಳು, 140 ಎಟಿಎಂ ಕಾರ್ಡ್‌ಗಳು, 17 ಚೆಕ್‌ ಪುಸ್ತಕಗಳು, 27 ಮೊಬೈಲ್‌ಗಳು, 22 ಬ್ಯಾಂಕ್‌ ಪಾಸ್‌ ಬುಕ್‌ಗಳು ಹಾಗೂ 15 ಸಾವಿರ ರು. ನಗದು ಜಪ್ತಿ ಮಾಡಲಾಗಿದೆ.

ಉತ್ತರ ಪ್ರದೇಶ ಮೂಲದ ಹರ್ಷವರ್ಧನ್‌ ಓಜಾ (25), ಸೋನು(27), ಆಕಾಶ್‌ ಕುಮಾರ್‌ ಯಾದವ್‌ (23), ಗೋರಖನಾಥ ಯಾದವ್‌ (20), ಆಕಾಶ್‌ ಕುಮಾರ್‌ ಸಿಂಗ್‌(19), ಅಮಿತ್‌ ಯಾದವ್‌ (19), ಗೌರವ್‌ ಪ್ರತಾಪ್‌ ಸಿಂಗ್‌ (22), ಬ್ರಿಜೇಶ್‌ ಸಿಂಗ್‌ (20), ರಾಜ್‌ ಮಿಶ್ರಾ (21), ತುಷಾರ್‌ ಮಿಶ್ರಾ (22), ಗೌತಮ್‌ ಶೈಲೇಶ್‌ (25) ಹಾಗೂ ಬಿಹಾರ ಮೂಲದ ಸಂಜೀವ್‌ ಕುಮಾರ್‌ ಯಾದವ್‌ (25) ಬಂಧಿತರು.

ನಗರದ ಮಹಿಳೆಗೆ 5 ಲಕ್ಷ ರು. ವಂಚನೆ:

ಆರೋಪಿಗಳು ಕಳೆದ ಜನವರಿಯಲ್ಲಿ ಆಡುಗೋಡಿ ಸಮೀಪದ ಎಲ್‌.ಆರ್‌. ನಗರದ 43 ವರ್ಷದ ಮಹಿಳೆಯನ್ನು ಮೊಬೈಲ್‌ ಸಂದೇಶದ ಮುಖಾಂತರ ಸಂಪರ್ಕಿಸಿ, ವರ್ಕ್‌ ಫ್ರಮ್‌ ಹೋಮ್‌ ಪ್ರಾಜೆಕ್ಟ್‌ ಹೆಸರಿನಲ್ಲಿ ಕಮಿಷನ್‌ ಆಸೆ ತೋರಿಸಿದ್ದರು. ಬಳಿಕ ಆನ್‌ಲೈನ್‌ನಲ್ಲಿ ಪ್ರಾಜೆಕ್ಟ್‌ವೊಂದರ ಕೆಲಸ ಮಾಡಿಸಿ ಕಮಿಷನ್‌ ಹಣ ವಿತ್‌ ಡ್ರಾ ಮಾಡಲು ಆ್ಯಪ್‌ವೊಂದರಲ್ಲಿ ರಿಜಿಸ್ಟರ್ ಮಾಡಿಸಿ ಲಕ್ಷ ರು. ಹಾಕಿಸಿಕೊಂಡು ಬಳಿಕ ವಂಚಿಸಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಹೊರರಾಜ್ಯದ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಖಾತೆದಾರನಿಗೆ ಗಾಳ:

ಪ್ರಕರಣದ ತನಿಖೆಗಿಳಿದ ಆಡುಗೋಡಿ ಪೊಲೀಸರು, ದೂರದಾರೆ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿದ್ದ ಉತ್ತರಪ್ರದೇಶದ ಫೆಡರಲ್‌ ಬ್ಯಾಂಕ್‌ನ ಖಾತೆದಾರನ ಕೆವೈಸಿ ಮಾಹಿತಿ ಸಂಗ್ರಹಿಸಿ, ಖಾತೆದಾರನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಬಳಿಕ ಖಾತೆದಾರ ಠಾಣೆಗೆ ವಿಚಾರಣೆಗೆ ಹಾಜರಾಗಿ ಆ ಖಾತೆಯು ತನ್ನದೆಂದು, ಆ ಖಾತೆಯನ್ನು ಮುಂಬೈನ ಲೇಬರ್‌ ಕಾಂಟ್ರ್ಯಾಕ್ಟರ್‌ ಸೋನು ಎಂಬಾತ ತೆರೆಸಿದ್ದು, ಆ ಖಾತೆಯ ಪಾಸ್‌ ಬುಕ್‌, ಎಟಿಎಂ ಕಾರ್ಡ್‌, ಸಿಮ್‌ ಕಾರ್ಡ್‌ ಆತನೇ ಇರಿಸಿಕೊಂಡಿರುವುದಾಗಿ ಹೇಳಿದ್ದಾನೆ.

ಒಂದು ಬ್ಯಾಂಕ್‌ ಖಾತೆಗೆ 1,500 ರು. ಕಮಿಷನ್‌:

ಬಳಿಕ ಪೊಲೀಸರ ತಂಡ ಆ ಖಾತೆದಾರನೊಂದಿಗೆ ಮುಂಬೈಗೆ ತೆರಳಿ ಲೇಬರ್‌ ಕಾಂಟ್ರ್ಯಾಕ್ಟರ್ ಸೋನುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಉತ್ತರ ಪ್ರದೇಶದ ಹರ್ಷವರ್ಧನ್‌ ಹಾಗೂ ಇತರೆ ಇಬ್ಬರ ಸೂಚನೆ ಮೇರೆಗೆ ತನ್ನ ಬಳಿ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸ್ವಲ್ಪ ಹಣ ಕೊಟ್ಟು ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಸಿ, ಪಾಸ್‌ಬುಕ್‌, ಎಟಿಎಂ ಕಾರ್ಡ್‌, ಸಿಮ್‌ ಕಾರ್ಡ್‌ಗಳನ್ನು ಪಡೆದು ಹರ್ಷವರ್ಧನ್‌ ಹಾಗೂ ಇತರರಿಗೆ ನೀಡಿದ್ದಾಗಿ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಅವರಿಂದ ಪ್ರತಿ ಖಾತೆಗೆ 1,500 ರು. ಕಮಿಷನ್‌ ಪಡೆದಿದ್ದಾಗಿ ತಿಳಿಸಿದ್ದಾನೆ. ಇದೇ ರೀತಿ 22 ಬ್ಯಾಂಕ್‌ ಖಾತೆಗಳನ್ನು ತೆರೆಸಿ ದಾಖಲೆಗಳನ್ನು ನೀಡಿದ್ದಾಗಿ ಸೋನು ಮಾಹಿತಿ ನೀಡಿದ್ದಾನೆ.

ಬಳಿಕ ಪೊಲೀಸರ ತಂಡ ಸೋನುನನ್ನು ಕರೆದುಕೊಂಡು ಉತ್ತರಪ್ರದೇಶಕ್ಕೆ ತೆರಳಿ ಪ್ರಮುಖ ಆರೋಪಿ ಹರ್ಷವರ್ಧನ್‌ ಓಜಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ವಂಚನೆಯಲ್ಲಿ ತನ್ನ ಹಲವು ಸ್ನೇಹಿತರು ಭಾಗಿಯಾಗಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ.

ಒಂದೇ ಮನೆಯಲ್ಲಿ 10 ಮಂದಿ ಬಂಧನ:

ಬಳಿಕ ಆರೋಪಿ ಹರ್ಷವರ್ಧನ್‌ ನೀಡಿದ ಮಾಹಿತಿ ಮೇರೆಗೆ ಈ ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಪ್ರಯಾಗ್‌ ರಾಜ್‌ನ ಕಮಲಾನಗರದ ಬಾಡಿಗೆ ಮನೆಯೊಂದರಲ್ಲಿ ಬಂಧಿಸಲಾಗಿದೆ. ಈ ವೇಳೆ ಆರೋಪಿಗಳು ಆನ್‌ಲೈನ್‌ ವಂಚನೆಗೆ ಬಳಸುತ್ತಿದ್ದ ಸಿಮ್‌ ಕಾರ್ಡ್‌ಗಳು, ಮೊಬೈಲ್‌ಗಳು, ಬ್ಯಾಂಕ್‌ ಪಾಸ್‌ಬುಕ್‌, ಚೆಕ್‌ ಬುಕ್‌ ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ 12 ಆರೋಪಿಗಳನ್ನು ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಗೆ ವಂಚನೆ:

ಆರೋಪಿಗಳು ದೂರುದಾರ ಮಹಿಳೆಯ ಮೊಬೈಲ್‌ಗೆ ವರ್ಕ್‌ ಫ್ರಮ್‌ ಹೋಮ್‌ ಪ್ರಾಜೆಕ್ಟ್‌ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ಪ್ರಾಜೆಕ್ಟ್‌ ಕೆಲಸ ಮುಗಿಸಿಕೊಟ್ಟಲ್ಲಿ ಕಮಿಷನ್‌ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಒಪ್ಪಿದ ಮಹಿಳೆ ಆನ್‌ಲೈನ್ ಪ್ರಾಜೆಕ್ಟ್‌ ವರ್ಕ್‌ ಮುಗಿಸಿದ್ದಾರೆ. ಬಳಿಕ ಪ್ರಾಜೆಕ್ಟ್ ವರ್ಕ್‌ ಕ್ರೆಡಿಟ್‌ ಸ್ಕೋರ್‌ ಬ್ಯಾಲೆನ್ಸ್‌ ಶೀಟ್‌ ನೆಗೆಟೀವ್‌ ತೋರಿಸುವುದಾಗಿ ತಿಳಿಸಿ, ಕಮಿಷನ್‌ ಹಣ ಡ್ರಾ ಮಾಡಲು ಲಿಂಕ್‌ವೊಂದನ್ನು ಕಳುಹಿಸಿ ರಿಜಿಸ್ಟರ್‌ ಮಾಡಿಸಿದ್ದಾರೆ. ಬಳಿಕ ಮಹಿಳೆ ಖಾತೆಗೆ 800 ರು. ಕಮಿಷನ್‌ ಹಣ ಬಂದಿದೆ. ಉಳಿದ ಕಮಿಷನ್‌ ಹಣ ಡ್ರಾ ಮಾಡಲು 10 ಸಾವಿರ ರು. ಪಾವತಿಸುವಂತೆ ಸೂಚಿಸಿದ್ದಾರೆ. 

ಅದರಂತೆ ಮಹಿಳೆ ಹಣ ಪಾವತಿಸಿದ್ದಾರೆ. ಬಳಿಕ ಮಹಿಳೆ ಖಾತೆಗೆ 20 ಸಾವಿರ ರು. ಜಮೆಯಾಗಿದೆ. ಬಳಿಕ ಆರೋಪಿಗಳು ಸ್ಕೋರ್‌ ಬ್ಯಾಲೆನ್ಸ್‌ ಶೀಟ್‌ನಲ್ಲಿ 10.83 ಲಕ್ಷ ರು. ತೋರಿಸಿ, ಈ ಹಣವನ್ನು ವಿತ್‌ ಡ್ರಾ ಮಾಡಲು 5 ಲಕ್ಷ ರು. ಪಾವತಿಸಬೇಕು ಎಂದಿದ್ದು, ಅದರಂತೆ ಮಹಿಳೆ ವಿವಿಧ ಹಂತಗಳಲ್ಲಿ ಆರೋಪಿಗಳು ನೀಡಿದ ಬ್ಯಾಂಕ್‌ ಖಾತೆಗಳಿಗೆ 5 ಲಕ್ಷ ರು. ಪಾವತಿಸಿದ್ದಾರೆ. ನಂತರವೂ ಆರೋಪಿಗಳು 3.24 ಲಕ್ಷ ರು. ಹಣ ಜಮೆ ಮಾಡುವಂತೆ ಸೂಚಿಸಿದಾಗ ಅನುಮಾನಗೊಂಡ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು.

ಪ್ರಮುಖ ಆರೋಪಿ ಬಿಟೆಕ್‌ ಪದವೀಧರ:

ಪ್ರಕರಣದ ಪ್ರಮುಖ ಆರೋಪಿ ಹರ್ಷವರ್ಧನ್‌ ಓಜಾ ಬಿಟೆಕ್‌ ಪದವೀಧರನಾಗಿದ್ದಾನೆ. ಈತ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಿರುದ್ಯೋಗಿ ಯುವಕರ ತಂಡ ಕಟ್ಟಿಕೊಂಡು ಆನ್‌ಲೈನ್‌ ವಂಚನೆಗಿಳಿದಿದ್ದ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಕಮಲಾನಗರದಲ್ಲಿ ಬಾಡಿಗೆ ಮನೆಯಲ್ಲಿ ಕಾಲ್‌ ಸೆಂಟರ್‌ ಮಾದರಿಯಲ್ಲಿ ಕಚೇರಿ ತೆರೆದು, ನಿರುದ್ಯೋಗಿ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ. ಈ ಯುವಕರು ಸಾರ್ವಜನಿಕರಿಗೆ ಕರೆ ಮಾಡಿ ವರ್ಕ್‌ ಫ್ರಮ್‌ ಹೋಂ ಹೆಸರಿನಲ್ಲಿ ಕಮಿಷನ್‌ ಆಸೆ ತೋರಿಸಿ, ಹಣ ವಿತ್‌ ಡ್ರಾ ನೆಪದಲ್ಲಿ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು. ಈ ಯುವಕರಿಗೆ ಪ್ರಮುಖ ಆರೋಪಿ ಹರ್ಷವರ್ಧನ್‌ ವೇತನ ನೀಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಕೂಲಿ ಕಾರ್ಮಿಕರ ಖಾತೆ ಬಳಕೆ:

ಆರೋಪಿಗಳು ಕೂಲಿ ಕಾರ್ಮಿಕರಿಗೆ ಹಣದಾಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಸಿ, ಪಾಸ್‌ ಬುಕ್‌, ಚೆಕ್‌ ಬುಕ್‌, ಎಟಿಎಂ ಕಾರ್ಡ್‌, ಸಿಮ್‌ ಕಾರ್ಡ್‌ ಪಡೆಯುತ್ತಿದ್ದರು. ಸಾರ್ವಜನಿಕರಿಂದ ಹಣ ಪಡೆಯುವಾಗ ಈ ಕಾರ್ಮಿಕರ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಬಳಿಕ ಎಟಿಎಂ ಹಾಗೂ ಬ್ಯಾಂಕ್ ದಾಖಲೆ ಬಳಸಿ ಆ ಹಣ ವಿತ್‌ ಡ್ರಾ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್‌ ವರ್ಕ್‌ ಹೋಮ್‌ ಪ್ರಾಜೆಕ್ಟ್ ಹೆಸರಿನಲ್ಲಿ ಕಮಿಷನ್‌ ಆಸೆ ತೋರಿಸಿ ನೂರಾರು ಮಂದಿಗೆ ವಂಚಿಸಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.