ಚೈಲ್ಡ್‌ ಪೋರ್ನ್‌ ವೀಕ್ಷಣೆ - ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್‌ 67(ಬಿ) ಅಡಿ ಅಪರಾಧವಲ್ಲ: ಹೈಕೋರ್ಟ್‌ ಆದೇಶ

KannadaprabhaNewsNetwork | Updated : Jul 18 2024, 05:00 AM IST

ಸಾರಾಂಶ

ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಪೋಟೋ/ವಿಡಿಯೋ ದೃಶ್ಯ (ಚೈಲ್ಡ್‌ ಪೋರ್ನೋಗ್ರಫಿ) ವೀಕ್ಷಿಸಿದ ವ್ಯಕ್ತಿಯ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್‌ 67(ಬಿ) ಅಡಿ ಅಪರಾಧ ಹೊರಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ.

 ಬೆಂಗಳೂರು :  ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಪೋಟೋ/ವಿಡಿಯೋ ದೃಶ್ಯ (ಚೈಲ್ಡ್‌ ಪೋರ್ನೋಗ್ರಫಿ) ವೀಕ್ಷಿಸಿದ ವ್ಯಕ್ತಿಯ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್‌ 67(ಬಿ) ಅಡಿ ಅಪರಾಧ ಹೊರಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ.

ವೆಬ್‌ಸೈಟ್‌ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋ ವೀಕ್ಷಿಸಿದ ಆರೋಪದ ಮೇಲೆ ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಇಎನ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಬೆಂಗಳೂರಿನ ಹೊಸಕೋಟೆಯ ವಾಸಿ ಎನ್‌.ಇನಾಯತ್‌ ಉಲ್ಲಾ ಎಂಬಾತ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಪೀಠ ಆದೇಶ ಮಾಡಿದೆ. ಅಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67(ಬಿ) ಅಡಿಯಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿ ಆದೇಶಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67(ಬಿ) ಪ್ರಕಾರ ವಿದ್ಯುನ್ಮಾನ ರೂಪದಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ಪ್ರಸಾರ/ ಪ್ರಕಟಣೆ ಮಾಡುವುದು, ಬೇರೆಯವರಿಗೆ ರವಾನಿಸುವುದು ಅಪರಾಧವಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಅಶ್ಲೀಲ ದೃಶ್ಯಗಳನ್ನು ನೋಡಿದ್ದಾರೆ. ಹಾಗಾಗಿ ಅದು ಆರೋಪಿಸಲಾದ ಐಟಿ ಕಾಯ್ದೆ ಸೆಕ್ಷನ್‌ 67(ಬಿ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಆದೇಶಿಸಿದೆ.

ಅರ್ಜಿದಾರರು ಬಹುಶಃ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ದಾಸರಾಗಿರಬಹುದು. ಹಾಗಾಗಿ ಅವರು ಅದನ್ನು ನೋಡಿದ್ದಾರೆನಿಸುತ್ತದೆ. ಅದು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣ ಮುಂದುವರಿಸಲಾಗದು. ಒಂದೊಮ್ಮೆ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ: ಅರ್ಜಿದಾರ ಆರೋಪಿ 2022ರ ಮಾ.23ರಂದು ಮಧ್ಯಾಹ್ನ ವೆಬ್‌ಸೈಟ್‌ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋ (ಚೈಲ್ಡ್‌ ಪೋರ್ನೋಗ್ರಫಿ) ನೋಡುತ್ತಿದ್ದರು ಎಂದು ಆರೋಪಿಸಿ ಅಪರಿಚಿತರು 2023ರ ಮೇ 3ರಂದು ಪತ್ರ ಬರೆದು, ಸಿ.ಡಿ. ಕಳುಹಿಸಿಕೊಟ್ಟಿದ್ದರು. ಅದನ್ನು ಪರಿಗಣಿಸಿದ್ದ ಬೆಂಗಳೂರು ಜಿಲ್ಲಾ ಸಿಇಎನ್‌ ಠಾಣಾ ಪೊಲೀಸರು ಅರ್ಜಿದಾರರ ವಿರುದ್ಧ ಐಟಿ ಕಾಯ್ದೆ- 67(ಬಿ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

Share this article