ಕೆಎಎಸ್‌ ಅಧಿಕಾರಿಯ ಪತ್ನಿ ನೇಣಿಗೆ ಶರಣು

KannadaprabhaNewsNetwork |  
Published : May 12, 2024, 01:19 AM ISTUpdated : May 12, 2024, 06:32 AM IST
death

ಸಾರಾಂಶ

ಜೀವನದಲ್ಲಿ ಜಿಗುಪ್ಸೆಗೊಂಡು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಉಪ ವಿಭಾಗಾಧಿಕಾರಿ (ಕೆಐಎಡಿಬಿ) ಶಿವಕುಮಾರ್‌ ಅವರ ಎರಡನೇ ಪತ್ನಿ ಚೈತ್ರಾಗೌಡ (36) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯನಗರ ಸಮೀಪ ಶನಿವಾರ ನಡೆದಿದೆ.

 ಬೆಂಗಳೂರು :  ಜೀವನದಲ್ಲಿ ಜಿಗುಪ್ಸೆಗೊಂಡು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಉಪ ವಿಭಾಗಾಧಿಕಾರಿ (ಕೆಐಎಡಿಬಿ) ಶಿವಕುಮಾರ್‌ ಅವರ ಎರಡನೇ ಪತ್ನಿ ಚೈತ್ರಾಗೌಡ (36) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯನಗರ ಸಮೀಪ ಶನಿವಾರ ನಡೆದಿದೆ.

ಅಶ್ವತ್ಥ್‌ ನಗರದ ಗೆದ್ದಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬದ ಜತೆ ವಾಸವಾಗಿದ್ದ ಚೈತ್ರಾ ಅವರು, ತಮ್ಮ ಫ್ಲ್ಯಾಟ್‌ನಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಶನಿವಾರ ಬೆಳಗ್ಗೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಅವರ ಸೋದರ ಮಂಜುನಾಥ್‌ ಕರೆ ಮಾಡಿದಾಗ ಪ್ರತಿಕ್ರಿಯಿಸಿಲ್ಲ. ಇದರಿಂದ ಆತಂಕಗೊಂಡು ಕೂಡಲೇ ಚೈತ್ರಾ ಫ್ಲ್ಯಾಟ್‌ಗೆ ಅವರು ತೆರಳಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತೋಟದ ಮನೆಗೆ ತೆರಳಿದ್ದ ಪತಿ:

ಮೊದಲ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆದ ಬಳಿಕ ಎಂಟು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೈತ್ರಾಗೌಡ ಜತೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಐಎಸ್‌ ಅಧಿಕಾರಿ ಶಿವಕುಮಾರ್ ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದೆ. 2006ನೇ ಸಾಲಿನ ಕೆಐಎಸ್ ಅಧಿಕಾರಿ ಆಗಿರುವ ಶಿವಕುಮಾರ್‌, ಪ್ರಸುತ್ತ ಕೆಐಎಡಿಬಿಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದಾರೆ. ಇನ್ನು ಹೈಕೋರ್ಟ್‌ನಲ್ಲಿ ಮೃತ ಚೈತ್ರಾ ವಕೀಲರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೈತ್ರಾ ಅವರು, ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಹ ಅಂತರ ಕಾಯ್ದುಕೊಂಡಿದ್ದರು. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ವಿಶ್ರಾಂತಿಗೆ ಕುಣಿಗಲ್ ಸಮೀಪದ ತಮ್ಮ ತೋಟದ ಮನೆಗೆ ಮಗಳ ಜತೆ ಶುಕ್ರವಾರ ಸಂಜೆ ಶಿವಕುಮಾರ್‌ ತೆರಳಿದ್ದರು. ಹಾಗಾಗಿ ರಾತ್ರಿ ಫ್ಲ್ಯಾಟ್‌ನಲ್ಲಿ ಚೈತ್ರಾ ಒಬ್ಬರೇ ಇದ್ದರು. ಆಗ ಫ್ಯಾನಿಗೆ ಸೀರೆ ಬಿಗಿದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಪತ್ನಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಶಿವಕುಮಾರ್ ಕರೆ ಮಾಡಿದಾಗ ಸ್ವೀಕರಿಸಿಲ್ಲ.

ಕೂಡಲೇ ಫ್ಲ್ಯಾಟ್‌ ಹೋಗಿ ಚೈತ್ರಾಳನ್ನು ವಿಚಾರಿಸುವಂತೆ ಬಾಮೈದನಿಗೆ ಅವರು ಸೂಚಿಸಿದ್ದಾರೆ. ಆಗ ಅಕ್ಕನಿಗೆ ತಮ್ಮ ಸಹ ಕರೆ ಮಾಡಿದಾಗಲೂ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡು ತಕ್ಷಣವೇ ಸೋದರಿ ಫ್ಲ್ಯಾಟ್‌ಗೆ ಮೃತರ ಸೋದರರಾದ ಮಂಜುನಾಥ್ ಹಾಗೂ ವಿಶಾಲ್ ಆಗಮಿಸಿದ್ದರು. ಆಗ ಬಾಗಿಲು ಬಿಡಿದಾಗ ತೆರೆದಿಲ್ಲ. ಕೊನೆಗೆ ಕಿಟಕಿ ತೆರೆದು ಮೃತರ ಸೋದರರು ಇಣುಕಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷಮಿಸಿ ಬಿಡಿ...!

ಮೃತರ ಫ್ಲ್ಯಾಟ್‌ನಲ್ಲಿ ಮರಣ ಪತ್ರ (ಡೆತ್‌ ನೋಟ್‌) ಪತ್ತೆಯಾಗಿದೆ. ಇದರಲ್ಲಿ ‘ನನ್ನ ಕ್ಷಮಿಸಿ ಬಿಡಿ. ನಾನು ತುಂಬಾ ಡಿಪ್ರೆಷನ್‌ನಿಂದ ಬಳಲುತ್ತಿದ್ದೇನೆ. ಬದುಕು ಸಾಧ್ಯವಾಗುತ್ತಿಲ್ಲ. ನನ್ನ ಪತಿ ಶಿವಕುಮಾರ್ ಒಳ್ಳೆಯವರು. ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಮೃತರು ಬರೆದಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ ಮಾರ್ಚ್‌ ತಿಂಗಳಲ್ಲಿನಲ್ಲೇ ಡೆತ್‌ ನೋಟ್‌ ಅನ್ನು ಚೈತ್ರಾ ಬರೆದಿರುವುದು ಸಹ ಶಂಕೆಗೆ ಕಾರಣವಾಗಿದೆ. ಕುಟುಂಬದವರ ಆಕ್ರಂದನ

ಚೈತ್ರಾ ಸಾವಿನ ಸುದ್ದಿ ತಿಳಿದು ಮನೆಗೆ ಆಗಮಿಸಿದ ಮೃತರ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರ ಅಕ್ರಂದನ ಮುಗಿಲು ಮುಟ್ಟಿತು. ಒಳ್ಳೆಯ ಸ್ನೇಹದಿಂದ ಎಲ್ಲಾರೊಂದಿಗೂ ಚೈತ್ರಾ ಬೆರೆಯುತ್ತಿದ್ದರು. ಆಕೆ ಆತ್ಮಹತ್ಯೆ ನಿರ್ಧಾರ ಆಘಾತ ತಂದಿದೆ ಎಂದು ಮೃತರ ಸ್ನೇಹಿತರು ಹೇಳಿದರು.

ಮೊದಲ ಪತ್ನಿ ಪೊಲೀಸ್ ಅಧಿಕಾರಿ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಮೊದಲ ಪತ್ನಿ ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೊದಲ ಪತ್ನಿಯಿಂದ ಅವರು ವಿಚ್ಛೇದನ ಪಡೆದಿದ್ದರು. ಆನಂತರ ತಮಗಿಂತ ವಯಸ್ಸಿನಲ್ಲಿ ಕಿರಿಯಳಾದ ಚೈತ್ರಾ ಅವರೊಂದಿಗೆ ಶಿವಕುಮಾರ್ ಎರಡನೇ ವಿವಾಹವಾಗಿದ್ದರು ಎಂದು ಮೂಲಗಳು ಹೇಳಿವೆ.

ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮೃತರ ಪತಿ ಶಿವಕುಮಾರ್‌ ಅವರು ಫಾರ್ಮ್‌ ಹೌಸ್‌ಗೆ ತೆರಳಿದ್ದರು. ಹೀಗಾಗಿ ಶುಕ್ರವಾರ ರಾತ್ರಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಮನೆಯಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ.

-ಸೈದುಲು ಅಡಾವತ್, ಡಿಸಿಪಿ, ಬೆಂಗಳೂರು ಉತ್ತರ ವಿಭಾಗ

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!