ಕನ್ನಡಪ್ರಭ ವಾರ್ತೆ ಮಂಡ್ಯ
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷಕುಮಾರ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ಹಳ್ಳಿಕಾರ್ ಒಡೆಯ ಎಂದು ತನ್ನನ್ನು ತಾನು ಬಿಂಬಿಸಿಕೊಂಡು ಸ್ವಾರ್ಥಕ್ಕಾಗಿ ಹಳ್ಳಿಕಾರ್ ಗೋತಳಿಯ ಹೆಸರನ್ನು ಈಗಲೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ನೋಟಿಸ್ ರವಾನಿಸಲಾಗಿದೆ ಎಂದು ಕಲ್ಲಹಳ್ಳಿ ಎಸ್.ರವಿಕುಮಾರ್ ತಿಳಿಸಿದರು.ಹಳ್ಳಿಕಾರ್, ಕಾಡುಗೊಲ್ಲ ಜನಾಂಗ (ಯಾದವ ಕುಲದವರು) ಅನಾದಿ ಕಾಲದಿಂದಲೂ ಪಾರಂಪಾರಿಕವಾಗಿ ಹಳ್ಳಿಕಾರ್ ಗೋತಳಿಯನ್ನು ಪೋಷಿಸಿ, ಸಂರಕ್ಷಿಸಿಕೊಂಡು ಬರುತ್ತಿರುವ ಲಕ್ಷಾಂತರ ಕುಟುಂಬಗಳು ಇವೆ. ವಿಜಯನಗರ ಅರಸರಾಗಿದ್ದ ಶ್ರೀಕೃಷ್ಣದೇವರಾಯರು ತಳಿಯನ್ನು ವಿಜಯನಗರ ಪೋಷಿಸಿ, ಸಂರಕ್ಷಿಸಿದ್ದರು. ಬ್ರಿಟಿಷ್ ವೈಸ್‌ರಾಯ್ ಮುಖಾಂತರ ಅಂದು ಮೈಸೂರು ಅರಸರಾಗಿದ್ದ ಶ್ರೀ ಚಿಕ್ಕದೇವರಾಜ ಒಡೆಯರವರ ಕಾಲದಲ್ಲಿ ಪೋಷಿಸಿ, ಸಂರಕ್ಷಿಸಿ ಇದಕ್ಕಾಗಿಯೇ ಹಳ್ಳಿಕಾರ್ ಕಾವಲ್ (ಗೋಮಾಳ)ಗಳನ್ನು ಮಾಡುವ ಮುಖಾಂತರ ತಳಿ ಅಭಿವೃದ್ಧಿ ಮಾಡಿದರು ಎಂದರು
ವರ್ತೂರು ಸಂತೋಷ್ ಹಳ್ಳಿಕಾರ್ ಗೋತಳಿಯ ಇತಿಹಾಸವನ್ನೇ ತಿರುಚುವಂತಹ ಪ್ರಯತ್ನ ಮಾಡುತ್ತಿದ್ದು, ಮುಂದಿನ ಪೀಳಿಗೆಯವರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ಬಗ್ಗೆ ತಿಳಿವಳಿಕೆ ಹೇಳಿರುವುದನ್ನು ಪರಿಗಣಿಸದೆ, ತನ್ನ ಉದ್ಧಟತನವನ್ನು ಮುಂದುವರಿಸುತ್ತಿರುವುದರಿಂದ ಕಾನೂನು ತಿಳುವಳಿಕೆ ಪತ್ರವನ್ನು (ಲೀಗಲ್ ನೋಟಿಸ್) ಆತನ ಮನೆ ವಿಳಾಸಕ್ಕೆ ಮಾ.೨ರಂದು ರವಾನಿಸಲಾಗಿದೆ. ೩೦ ದಿನಗಳೊಳಗೆ ಉತ್ತರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.ಮುಂದುವರೆದು ಸಾಮಾಜಿಕ ಜಾಲತಾಣಗಳಲ್ಲಿ Chairman of all India hallikar breed conservation committe ಎಂದು ಸುಳ್ಳು ಮಾಹಿತಿಗಳನ್ನು ಬಿತ್ತರಿಸುತ್ತಿರುವುದರ ವಿರುದ್ಧವಾಗಿಯೂ ಗೂಗಲ್ ಸಂಸ್ಥೆ, ಬೆಂಗಳೂರು ಕಚೇರಿಗೂ ಸಹ ಇದರ ಬಗ್ಗೆ ಸಮಜಾಯಿಷಿ ನೀಡುವಂತೆ ಪತ್ರ ಬರೆದು ನೊಂದಾಯಿತ ಅಂಚೆ ಮೂಲಕ ರವಾನಿಸಲಾಗಿದೆ ಎಂದು ವಿವರಿಸಿದರು.
ಮುಖಂಡರಾದ ಕಿರಣ್ ಪಟೇಲ್, ಪ್ರಜ್ವಲ್, ದೀಕ್ಷಿತ್, ಪ್ರಶಾಂತ್ ಗೋಷ್ಠಿಯಲ್ಲಿದ್ದರು.