ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದೊಂದು ವರ್ಷದಿಂದ ರಾಜರಾಜೇಶ್ವರಿ ನಗರ ವ್ಯಾಪ್ತಿಯ ನಿವಾಸಿಗಳ ನಿದ್ರೆಗೆಡಿಸಿದ್ದ ಕುಖ್ಯಾತ ಖದೀಮ ಕೊನೆಗೂ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾನೆ.ತಮಿಳುನಾಡು ಮೂಲದ ಮಣಿ ಅಲಿಯಾಸ್ ನಾಗಮಣಿ ಹಾಗೂ ಕಳವು ಆಭರಣ ವಿಲೇವಾರಿ ಸಹಕರಿಸಿದ ಆತನ ಸ್ನೇಹಿತ ರವಿಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 537.94 ಗ್ರಾಂ ಚಿನ್ನ, 7.840 ಕೆಜಿ ಬೆಳ್ಳಿ ಹಾಗೂ ಬೈಕ್ ಸೇರಿದಂತೆ ಒಟ್ಟು 58.60 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕಳೆದ ವರ್ಷದಿಂದ ಆರ್.ಆರ್.ನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಣಿ ಮನೆಗಳ್ಳತನ ಕೃತ್ಯಗಳು ವರದಿಯಾಗಿದ್ದವು. ಈ ಕೃತ್ಯ ಹಿನ್ನೆಲೆಯಲ್ಲಿ ಆರೋಪಿ ಪತ್ತೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಕೊನೆಗೆ ಬಟ್ಟೆಗಳು ನೀಡಿದ ಸುಳಿವು ಆಧರಿಸಿ ಮಣಿಯನ್ನು ಇನ್ಸ್‌ಪೆಕ್ಟರ್ ಬಿ.ಎಂ.ಶಿವಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ನೇತೃತ್ವದ ತಂಡ ಬಂಧಿಸಿದೆ.ಬಂಧನ ಹೇಗೆ?:
ವೃತ್ತಿಪರ ಕ್ರಿಮಿನಲ್ ಆಗಿರುವ ಮಣಿ ವಿರುದ್ಧ ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಸುಮಾರು 30ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುವುದು ಆತನ ಕೃತ್ಯವಾಗಿತ್ತು. ಕಳೆದ ವರ್ಷದಿಂದ ಆರ್.ಆರ್.ನಗರ ಸುತ್ತಮುತ್ತಲ ಪ್ರದೇಶಗಳ ಮನೆಗಳನ್ನು ಗುರಿಯಾಗಿಸಿಕೊಂಡು ಮಣಿ ಮನೆಗಳ್ಳತನ ಕೃತ್ಯ ಎಸಗುತ್ತಿದ್ದ. ಪ್ರತಿ ಎರಡ್ಮೂರು ತಿಂಗಳಿಗೆ ಆರ್.ಆರ್.ನಗರದ ಮನೆಗಳಿಗೆ ಆತ ಕನ್ನ ಹಾಕುತ್ತಿದ್ದ. ಅದೇ ರೀತಿ ಬಿಇಂಎಲ್ 5ನೇ ಹಂತದ ಮನೆಯ ಬೀಗ ಮುರಿದು ಮಣಿ ಚಿನ್ನಾಭರಣ ದೋಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈ ಸರಣಿ ಕೃತ್ಯಗಳ ಹಿನ್ನೆಲೆಯಲ್ಲಿ ತನಿಖೆ ವೇಳೆ ಮನೆಯೊಂದರ ಸಿಸಿಟಿವಿಯಲ್ಲಿ ಆರೋಪಿ ಅಸ್ಪಷ್ಟ ಚಲನವಲನದ ದೃಶ್ಯಾವಳಿ ಪತ್ತೆಯಾದರೆ, ಮತ್ತೊಂದು ಮನೆಯ ಸಜ್ಜೆಯಲ್ಲಿ ಬಟ್ಟೆ ಸಿಕ್ಕಿದ್ದವು. ಮನೆಗಳ್ಳತನಕ್ಕೂ ಮುನ್ನ ಆ ಮನೆ ಮಹಡಿ ಅಥವಾ ಅಲ್ಲೇ ಸನಿಹದ ಕಟ್ಟಡದಲ್ಲಿ ಉಡುಪು ಹಾಗೂ ಸಲಕರಣೆ ಅಡಗಿಸಿಟ್ಟು ಹೋಗುತ್ತಿದ್ದ. ಈ ಬಟ್ಟೆ ಬದಲಾವಣೆಯಿಂದ ಆತ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ. ಕೃತ್ಯ ಎಸಗುವಾಗ ಹಾಗೂ ಅಲ್ಲಿಗೆ ಬರುವಾಗ ಬೇರೆ ಬೇರೆ ಉಡುಪು ಧರಿಸುತ್ತಿದ್ದುರಿಂದ ಮಣಿ ಮೇಲೆ ಅನುಮಾನ ಬರುತ್ತಿರಲಿಲ್ಲ. ಆಗ ಮನೆಯಲ್ಲಿ ಪತ್ತೆಯಾದ ಬಟ್ಟೆ ಆಧರಿಸಿ ತನಿಖೆ ನಡೆಸಿದಾಗ ಮಣಿ ಸುಳಿವು ಸಿಕ್ಕಿತು. ಆತನ ಕೃತ್ಯಗಳ ಅವಲೋಕಿಸಿದಾಗ ಮುಂದೆ ಈ ಪ್ರದೇಶ ಗುರಿಯಾಗಿರಬಹುದು ಎಂದು ಊಹಿಸಿ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದವು. ಆಗ ಮನೆಯೊಂದರ ಸಜ್ಜೆ ಮೇಲೆ ಒಂದು ಜೊತೆ ಬಟ್ಟೆ ಸಿಕ್ಕಿದ್ದವು. ಈ ಸುಳಿವಿನ ಮೇರೆಗೆ ಆ ಮನೆ ಬಳಿ ಪಹರೆ ನಡೆಸಲಾಯಿತು. ಪೂರ್ವಯೋಜಿತದಂತೆ ಮಣಿ ಮನೆಗಳ್ಳತನಕ್ಕೆ ಬಂದಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈತನಿಗೆ ಚಿನ್ನಾಭರಣ ಅಂಗಡಿ ಕೆಲಸಗಾರ ರವಿ ಸಾಥ್ ಕೊಟ್ಟಿದ್ದ. ಕದ್ದ ಆಭರಣಗಳ ವಿಲೇವಾರಿ ಮಾಡಿದರೆ ಇಂತಿಷ್ಟು ಹಣವನ್ನು ಸ್ನೇಹಿತನಿಗೆ ಮಣಿ ಕೊಡುತ್ತಿದ್ದ. ಹೀಗಾಗಿ ಹಣದಾಸೆಗೆ ಮನೆಗಳ್ಳತನಕ್ಕೆ ರವಿ ನೆರವು ಕೊಟ್ಟಿದ್ದ ಎನ್ನಲಾಗಿದೆ.