ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಸಂಭ್ರಮದ ವೇಳೆ ನಗರದಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯಗಳಾಗಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಮತ್ತು ದಾರಿ ಹೋಕರೆ ಪಟಾಕಿಯಿಂದ ಹೆಚ್ಚು ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 51 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ 27 ಮಕ್ಕಳಿದ್ದಾರೆ. ಆರು ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಉಳಿದವರು ಹೊರ ರೋಗಿಗಳಾಗಿ ಮತ್ತು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 51 ಜನರಲ್ಲಿ 38 ಜನರು ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಉಳಿದವರು ಬೇರೆಯವರು ಸಿಡಿಸಿದ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ.
ಇನ್ನು ಮಿಂಟೊ ಆಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆ ಪಡೆದ 13 ಜನರಲ್ಲಿ 6 ಮಕ್ಕಳಿದ್ದು, ಇಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಶಂಕರ ಆಸ್ಪತ್ರೆಯಲ್ಲಿ 13, ಅಗರ್‌ವಾಲ್ ಆಸ್ಪತ್ರೆಯಲ್ಲಿ ಮೂವರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 50 ಜನ ಕಣ್ಣಿನ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಿದೇಶಿ ಪ್ರಜೆಗೆ ಗಾಯ : ರಸ್ತೆಯಲ್ಲಿ ನಡೆದಕೊಂಡು ಹೋಗುತ್ತಿದ್ದ 67 ವರ್ಷದ ವಿದೇಶಿ ವ್ಯಕ್ತಿಯ ಕಣ್ಣಿಗೆ ಪಟಾಕಿಯ ಕಿಡಿ ಕಣ್ಣಿಗೆ ತಾಗಿ ಗಾಯಗೊಂಡಿದ್ದಾರೆ. ಅವರ ಕಣ್ಣಿನ ರೆಟಿನಾ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹತ್ತು ವರ್ಷದ ಬಾಲಕ ಪಟಾಕಿ ಹಚ್ಚುವಾಗ ಕಿಡಿ ಸಿಡಿತದಿಂದ ಅವರ ಕಣ್ಣಿನ ರೆಪ್ಪೆ, ಕೂದಲು ಸುಟ್ಟಿದ್ದು, ಕಾರ್ನಿಯಾಗೆ ಪಟಾಕಿ ಕಣಗಳು ಸೇರಿ ಹಾನಿಯಾಗಿದೆ. ಕಣ್ಣು ಊದಿಕೊಂಡಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಇವರಿಬ್ಬರೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಮೂರು ಮಕ್ಕಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ ಐದು ಜನ ಮಕ್ಕಳು ಹಾಗೂ 8 ಮಂದಿ ವಯಸ್ಕರು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಒಬ್ಬ ರೋಗಿಗೆ ಗಂಭಿರ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.