ಪ್ರಜ್ವಲ್‌ ಕೇಸ್‌: ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತೆ ಹೇಳಿಕೆ

Published : May 04, 2024, 07:51 AM IST
Prajwal Revanna

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಬೆಂಗಳೂರು :  ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಬರಬಾರದು. ಅದಕ್ಕಾಗಿ ಮ್ಯಾಜಿಸ್ಟ್ರೇಟ್ ಮುಂದೆಯೇ ಸೆಕ್ಷನ್ 164 ಅಡಿ ಹೇಳಿಕೆ ಕೊಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಅಲ್ಲದೆ, ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ 41ಎ ಅಡಿ ಈಗಾಗಲೇ ನೋಟಿಸ್‌ ನೀಡಲಾಗಿದೆ. ಈಗ ಮತ್ತೊಂದು ನೋಟಿಸ್‌ ನೀಡಿದ್ದೇವೆ. ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪರ ವಕೀಲರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಅವಕಾಶವಿಲ್ಲ ಕೂಡಲೇ ಬಂದು ಹಾಜರಾಗಬೇಕು ಎಂದು ತಿಳಿಸಿದ್ದೇವೆ. ರೇವಣ್ಣ ಅವರಿಗೂ ಕೂಡ 41ಎ ಅಡಿಯಲ್ಲೇ ನೋಟಿಸ್ ನೀಡಲಾಗಿದೆ. ರೇವಣ್ಣ ಸಹ 24 ಗಂಟೆ ಕಾಲಾವಕಾಶ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್ ನೀಡಿದ್ದು, ಇದಕ್ಕೆ ಸ್ಪಂದಿಸದಿದ್ದರೆ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಜರ್ಮನಿಗೆ ತೆರಳಿರುವುದಾಗಿ ಮಾಹಿತಿ: 

ಪ್ರಜ್ವಲ್ ರೇವಣ್ಣ ಕುರಿತು ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.‌ ಎಲ್ಲ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಗಳಿಗೆ ಫೋಟೋ ಸಮೇತ ನೋಟಿಸ್ ಕಳುಹಿಸಲಾಗಿದೆ‌‌.‌ ನಿಯಮಗಳ ಪ್ರಕಾರವೇ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಅವರು ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೂ ವಶಕ್ಕೆ ಪಡೆಯಲಿದ್ದಾರೆ ಎಂದು ಪರಮೇಶ್ವರ ಹೇಳಿದರು.

ಇನ್ನು ಅವರು ದುಬೈಗೆ ಹೋಗಿರುವುದು ನನಗೆ ಗೊತ್ತಿಲ್ಲ. ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಜರ್ಮನಿಯಿಂದ ಕರೆತರಲು ಕೇಂದ್ರದ ನೆರವು ಬೇಕು. ಎರಡನೇ ನೋಟಿಸ್‌ಗೂ ಸ್ಪಂದಿಸದಿದ್ದರೆ ಮುಂದಿನ ತೀರ್ಮಾನದ ಬಗ್ಗೆ ಎಸ್ಐಟಿ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.

ರಾಜಕೀಯ ಟೀಕೆಗೆ ಉತ್ತರಿಸಲ್ಲ: ಪರಮೇಶ್ವರ್

ಗೃಹಸಚಿವನಾಗಿ ನನಗೆ ಒಂದಷ್ಟು ಜವಾಬ್ದಾರಿಗಳಿವೆ. ಎಚ್.ಡಿ.ಕುಮಾರಸ್ವಾಮಿ ಯಾವ ಆಧಾರದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ‌. ಇದಕ್ಕೆಲ್ಲ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉತ್ತರಿಸುತ್ತಾರೆ. ನಾನು ರಾಜಕೀಯ ಟೀಕೆಗಳಿಗೆ ಉತ್ತರಿಸಲ್ಲ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು