ಬೆಂಗಳೂರು : ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆಯೊಬ್ಬಳಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ ಆರೋಪದಡಿ ಅಪರಾಧ ತನಿಖಾ ದಳ (ಸಿಐಡಿ) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹಾಸನ ಜಿಲ್ಲೆಯ 44 ವರ್ಷದ ಸಂತ್ರಸ್ತೆಯು (2ನೇ ದೂರುದಾರೆ) ನೀಡಿದ ದೂರು ಆಧರಿಸಿ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುರುವಾರವಷ್ಟೇ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಂತ್ರಸ್ತೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?:
‘ನಾನು ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಯಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಸಿಕೊಡಲು ಶಾಸಕರು, ಸಂಸದರನ್ನು ಭೇಟಿಯಾಗುತ್ತಿದ್ದೆ. ಒಂದು ದಿನ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸುವ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣರ ಬಳಿ ಮನವಿ ಮಾಡಲು ತೆರಳಿದ್ದೆ. ಅಂದು ಸಂಸದರ ಕಚೇರಿ ಮತ್ತು ವಸತಿ ಗೃಹದಲ್ಲಿ ತುಂಬಾ ಜನರು ಇದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನೀವು ವಸತಿ ಗೃಹದ ಮಹಡಿಯಲ್ಲಿ ಇರುವಂತೆ ನನಗೆ ಸೂಚಿಸಿದರು. ಅದರಂತೆ ನಾನು ಮಹಡಿಗೆ ತೆರಳಿದೆ. ಅಲ್ಲಿ ಕೆಲ ಮಹಿಳೆಯರು ಇದ್ದರು.’
ಕೈ ಹಿಡಿದು ಎಳೆದು ರೂಮ್ ಬಾಗಿಲು ಲಾಕ್:‘ಸ್ವಲ್ಪ ಸಮಯದ ಬಳಿಕ ಮಹಡಿಗೆ ಬಂದ ಪ್ರಜ್ವಲ್ ರೇವಣ್ಣ ಅಲ್ಲಿಂದ ಬೇರೆ ಮಹಿಳೆಯರ ಅಹವಾಲು ಆಲಿಸಿ ಕಳುಹಿಸಿದರು. ಬಳಿಕ ನಾನು ಒಬ್ಬನೇ ಇದ್ದಿದ್ದರಿಂದ ನನ್ನನ್ನು ರೂಮ್‌ಗೆ ಕರೆದರು. ನಾನು ಒಳಗೆ ಹೋಗುತ್ತಿದ್ದಂತೆ ಕೈ ಹಿಡಿದು ಎಳೆದುಕೊಂಡು ರೂಮ್‌ನ ಬಾಗಿಲು ಹಾಕಿದರು. ಆಗ ಏಕೆ ಬಾಗಿಲು ಹಾಕುತ್ತೀರಿ ಎಂದು ನಾನು ಕೇಳಿದೆ. ಆಗ ಅವರು ಏನೂ ಆಗುವುದಿಲ್ಲ ಎಂದು ನನ್ನನ್ನು ಬೆಡ್ ಮೇಲೆ ಕೂರಿಸಿಕೊಂಡರು.’
ಹೇಳಿದ ಹಾಗೆ ಕೇಳು:‘ನಿನ್ನ ಗಂಡ ಜೋರು, ಕಡಿಮೆ ಮಾತನಾಡಲು ಹೇಳು. ಇಲ್ಲವಾದರೆ ಅವನನ್ನು ಬಿಡುವುದಿಲ್ಲ. ಅವನಿಂದ ನಮ್ಮ ಅಮ್ಮನ ಎಂಎಲ್‌ಎ ಟಿಕೆಟ್ ತಪ್ಪಿತು. ನಿನ್ನ ಗಂಡ ರಾಜಕೀಯವಾಗಿ ಬೆಳಯಬೇಕು ಎಂದರೆ ನಾನು ಹೇಳಿದ ಹಾಗೆ ಮಾಡು ಎನ್ನುತ್ತಾ ನನ್ನನ್ನು ಮಂಚದ ಮೇಲೆ ಮಲಗಿ ಬಟ್ಟೆ ಬಿಚ್ಚು ಎಂದರು. ನಾನು ಬಿಚ್ಚುವುದಿಲ್ಲ ಎಂದರೂ ಬಿಚ್ಚುವಂತೆ ಒತ್ತಾಯ ಮಾಡಿದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನನ್ನ ಬಳಿ ಗನ್ ಇದೆ:
‘ಈ ವೇಳೆ ನಾನು ಕೂಗುತ್ತೇನೆ ಎಂದು ಹೇಳಿದಾಗ, ನನ್ನ ಬಳಿ ಗನ್ ಇದೆ. ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ, ನಿನ್ನನ್ನು ಮತ್ತು ನಿನ್ನ ಗಂಡನನ್ನು ಬಿಡುವುದಿಲ್ಲ. ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದರು. ಬಳಿಕ ನನ್ನನ್ನು ಬಲಾತ್ಕಾರ ಮಾಡಲು ಪ್ರಯತ್ನಿಸಿದರು. ನಾನೇ ಎಷ್ಟೇ ಪ್ರತಿರೋಧ ಒಡ್ಡಿದರೂ ಬಿಗಿಯಾಗಿ ನನ್ನ ಕೈ ಹಿಡಿದು ಕೂಗಬೇಡ ಎಂದು ಬೆದರಿಸಿದರು. ಆಗ ನಾನು ಭಯಪಟ್ಟೆ. ಆಗ ಅವರು ಮೊಬೈಲ್ ತೆಗೆದರು. ಇದರಿಂದ ಹೆದರಿ ಅವರು ಹೇಳಿದಂತೆ ನಾನು ಕೇಳಿದೆ. ಅವರು ಹೇಳಿದಂತೆ ನಡೆದುಕೊಂಡೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ಚಿತ್ರೀಕರಣ:‘ನನ್ನನ್ನು ಬಲಾತ್ಕಾರ, ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ನೀನೇನಾದರೂ ಈ ವಿಚಾರವನ್ನು ಬಾಯಿ ಬಿಟ್ಟರೆ, ನಿನ್ನ ವಿಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ. ಈ ವಿಡಿಯೊದಲ್ಲಿ ನನ್ನ ಮುಖ ಇಲ್ಲ. ನಿನ್ನದೇ ಮಾನ-ಮರ್ಯಾದೆ ಹೋಗುತ್ತದೆ ಎಂದು ಹೇಳಿ ಭಯಪಡಿಸಿದರು. ಈ ವಿಡಿಯೊವನ್ನು ಹೀಗೇ ಇರಿಸಿಕೊಂಡಿರುತ್ತೇನೆ. ನಾನು ಕರೆದಾಗಲೆಲ್ಲಾ ನೀನು ನನ್ನ ಜತೆ ಮಲಗಬೇಕು. ಇಲ್ಲವಾದರೆ, ವಿಡಿಯೋವನ್ನು ಬಹಿರಂಗಪಡಿಸುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದರು.’
ಮುಂದುವರೆದು, ‘ನಿನ್ನ ಗಂಡ ನನ್ನ ಜತೆ ಇರುತ್ತಾನೆ. ಅವನನ್ನೂ ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿದರು. ಪದೇ ಪದೇ ನನಗೆ ಕರೆ ಮಾಡಿ, ವಿಡಿಯೋ ಕರೆ ಮಾಡಿ, ನಿನ್ನ ದೇಹವನ್ನು ನಗ್ನವಾಗಿ ತೋರಿಸು, ಬಟ್ಟೆ ಬಿಚ್ಚು ಎಂದು ಪೀಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ದೈಹಿಕವಾಗಿ ಅನೇಕ ಬಾರಿ ನನ್ನನ್ನು ಬಲಾತ್ಕಾರ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಜ್ವಲ್ ಮೇಲೆ ಕ್ರಮ ಆಗಬೇಕು:‘ಪ್ರಜ್ವಲ್ ರೇವಣ್ಣ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ನನ್ನ ಮೇಲೆ ಬಲಾತ್ಕಾರ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳುಮಾಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
‘ಇಷ್ಟು ದಿನ ನಾನು ಪ್ರಜ್ವಲ್ ರೇವಣ್ಣ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡು ನನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯದ ಸಂಬಂಧ ದೂರು ನೀಡುತ್ತಿದ್ದೇನೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.