ಬೆಂಗಳೂರು ಕೆಫೆ ಬಾಂಬರ್‌ ರಾಜ್ಯದ ಮಲೆನಾಡು ವ್ಯಕ್ತಿ?

KannadaprabhaNewsNetwork |  
Published : Mar 12, 2024, 02:01 AM ISTUpdated : Mar 12, 2024, 08:16 AM IST
ಬಾಂಬ್‌ ಹಾಕಿದವ | Kannada Prabha

ಸಾರಾಂಶ

ರಾಜಧಾನಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಭಾರಿ ಯಶಸ್ಸು ಕಂಡಿದ್ದು, ಕೆಫೆಗೆ ಬಾಂಬ್ ತಂದಿಟ್ಟು ಸ್ಫೋಟಿಸಿದ ವ್ಯಕ್ತಿ ರಾಜ್ಯದ ಮಲೆನಾಡು ಪ್ರದೇಶದವನು ಎಂಬುದು ಖಚಿತಗೊಂಡಿದೆ ಎನ್ನಲಾಗಿದೆ.

ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು 

ರಾಜಧಾನಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಭಾರಿ ಯಶಸ್ಸು ಕಂಡಿದ್ದು, ಕೆಫೆಗೆ ಬಾಂಬ್ ತಂದಿಟ್ಟು ಸ್ಫೋಟಿಸಿದ ವ್ಯಕ್ತಿ ರಾಜ್ಯದ ಮಲೆನಾಡು ಪ್ರದೇಶದವನು ಎಂಬುದು ಖಚಿತಗೊಂಡಿದೆ ಎನ್ನಲಾಗಿದೆ.

ಅಂದು ಬೆಂಗಳೂರಿಗೆ ಹೊರರಾಜ್ಯದಿಂದಲೇ ಬಸ್ಸಿನಲ್ಲಿ ಆಗಮಿಸಿದ್ದ ಶಂಕಿತ ವ್ಯಕ್ತಿ, ಪೂರ್ವಯೋಜನೆಯಂತೆ ತಾನು ಕೃತ್ಯ ಎಸಗಿದ ಬಳಿಕ ಬಸ್ಸಿನಲ್ಲೇ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ. 

ಸದ್ಯ ಆಂಧ್ರಪ್ರದೇಶದ ತಿರುಪತಿ ಅಥವಾ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಆತನ ಇರುವಿಕೆ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ಶಂಕಿತನ ಗುರುತು ಸಿಕ್ಕಿದ ಬೆನ್ನಲ್ಲೇ ಆತನ ಸಂಪರ್ಕ ಜಾಲ ಭೇದಿಸಲು ದೂರವಾಣಿ ಕರೆಗಳ (ಸಿಡಿಆರ್‌) ಪರಿಶೀಲನೆ ಕಾರ್ಯವನ್ನು ತನಿಖಾ ಸಂಸ್ಥೆಗಳು ಆರಂಭಿಸಿವೆ ಎನ್ನಲಾಗಿದೆ.

ನಗರದ ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಸತತ ಮೂರು ದಿನಗಳ ಕಾಲ ಪರಿಶೀಲಿಸಿದಾಗ ಶಂಕಿತನ ಗುರುತು ಪತ್ತೆಯಾಗಿದೆ. 

ಈ ಪತ್ತೆದಾರಿಕೆಯಲ್ಲಿ ಸಿಸಿಬಿ ಸಾಕಷ್ಟು ಬೆವರು ಹರಿಸಿದ್ದು, ಅಂತಿಮವಾಗಿ ಆತನ ನಿಖರ ಮಾಹಿತಿ ಕಲೆ ಹಾಕಿ ಎನ್‌ಐಎಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಶಿವಮೊಗ್ಗ-ಮಂಗಳೂರು ಲಿಂಕ್: ಕಳೆದ ನಾಲ್ಕು ವರ್ಷ ಅವಧಿಯಲ್ಲಿ ನಡೆದಿರುವ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಜಿಲ್ಲೆ ತುಂಗಾ ತೀರದಲ್ಲಿ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ಪರಸ್ಪರ ನಂಟಿದೆ. 

ಈಗ ಕೆಫೆ ಸ್ಫೋಟದಲ್ಲಿ ಕರ್ನಾಟಕದ ಮಲೆನಾಡು ಜಿಲ್ಲೆಯ ವ್ಯಕ್ತಿ ಪಾತ್ರವಹಿಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಮಂಗಳೂರು ಕುಕ್ಕರ್‌ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗಾರ್ಥ ಸ್ಫೋಟದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ರಾಮೇಶ್ವರ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. 

ಹೀಗಾಗಿ ಶಿವಮೊಗ್ಗ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಪ್ರಮುಖ ಹ್ಯಾಂಡ್ಲರ್‌ಗಳೇ ಕೆಫೆ ಕೃತ್ಯದಲ್ಲಿ ಪಾತ್ರವಹಿಸಿರುವ ಶಂಕೆ ವ್ಯಕ್ತವಾಗಿದೆ.

ತಮಿಳುನಾಡಿನಿಂದ ಎಂಟ್ರಿ, ಆಂಧ್ರಕ್ಕೆ ಎಕ್ಸಿಟ್‌: ಮಾ.1ರಂದು ಕುಂದಲಹಳ್ಳಿ ರಾಮೇಶ್ವರಂ ಕೆಫೆಗೆ ಹೊರರಾಜ್ಯದಿಂದಲೇ ಆಗಮಿಸಿ ಶಂಕಿತ ವ್ಯಕ್ತಿ ಬಾಂಬ್ ಇಟ್ಟು ಬಳಿಕ ಹೊರರಾಜ್ಯಕ್ಕೆ ತೆರಳಿದ್ದಾನೆ. 

ಅಂದು ಸಿಲ್ಕ್ ಬೋರ್ಡ್ ಬಳಿ ಶಂಕಿತ ವ್ಯಕ್ತಿ ಬಸ್ಸಿನಲ್ಲಿಳಿದು ಬರುವ ದೃಶ್ಯಾವಳಿ ಪತ್ತೆಯಾಗಿದೆ. ಹೀಗಾಗಿ ತಮಿಳುನಾಡಿನಿಂದ ನಗರಕ್ಕೆ ಬಂದು ತಾನು ಅಂದುಕೊಂಡಂತೆ ಕೆಫೆಯಲ್ಲಿ ಬಾಂಬ್ ಇಟ್ಟು ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಬಳ್ಳಾರಿಗೆ ಆತ ತೆರಳಿದ್ದಾನೆ. 

ಅಲ್ಲಿಂದ ಕಲುಬರಗಿ ಜಿಲ್ಲೆ ಮೂಲಕ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾನೆ. ಆಂಧ್ರಪ್ರದೇಶದ ತಿರುಪತಿ ಅಥವಾ ಹೈದರಾಬಾದ್‌ನಲ್ಲಿ ಆತ ತಲೆಮರೆಸಿಕೊಂಡಿರುವ ಸಾಧ್ಯತೆ ಇದ್ದು, ಇನ್ನೆರಡು ಮೂರು ದಿನಗಳಲ್ಲಿ ಆತನನ್ನು ಎನ್‌ಐಎ ಬಂಧಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

 ಮತೀನ್, ಮುಸಾಬೀರ್ ಹುಸೇನ್‌ ಕೈವಾಡ ಶಂಕೆ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣಗಳಲ್ಲಿ ಶಂಕಿತ ಐಸಿಸ್‌ ಉಗ್ರರಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್‌ ತಾಹ ಹಾಗೂ ಮುಸಾಬೀರ್ ಹುಸೇನ್ ತಲೆಮರೆಸಿಕೊಂಡಿದ್ದಾರೆ. 

ಆ ಎರಡು ಕೃತ್ಯಗಳಲ್ಲಿ ಮತೀನ್ ಹಾಗೂ ಮುಸಾಬೀರ್ ಹ್ಯಾಂಡ್ಲರ್‌ಗಳಾಗಿದ್ದರು. ಹೀಗಾಗಿ ಈಗ ಕೆಫೆ ಬಾಂಬ್‌ ಸ್ಫೋಟದ ಶಂಕಿತನ ಹಿಂದೆ ಸಹ ಈ ಇಬ್ಬರು ಇರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

ಕೆಫೆ ವಿಧ್ವಂಸಕ ಕೃತ್ಯಕ್ಕೆ ಮೂರು ತಿಂಗಳ ಸಂಚು: ರಾಮೇಶ್ವರ ಕೆಫೆ ವಿಧ್ವಂಸಕ ಕೃತ್ಯಕ್ಕೆ ಯೋಜಿತ ರೀತಿಯಲ್ಲಿ ಶಂಕಿತರು ಸಂಚು ರೂಪಿಸಿದ್ದರು. ಇದಕ್ಕಾಗಿ ಮೂರು ತಿಂಗಳು ದುಷ್ಕರ್ಮಿಗಳು ಪೂರ್ವ ಸಿದ್ಧತೆ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಬಾಂಬ್ ಸ್ಫೋಟಕ್ಕೂ ಮುನ್ನ ಕೆಫೆಗೆ ಬಾಂಬರ್ ಸೇರಿದಂತೆ ಸಂಚಿನಲ್ಲಿದ್ದ ಹ್ಯಾಂಡ್ಲರ್‌ಗಳು ತೆರಳಿ ಕೆಫೆಯ ಭದ್ರತೆ ಕುರಿತು ಪರಾಮರ್ಶಿಸಿದ್ದಾರೆ. 

ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ, ಯಾವ ಪ್ರದೇಶದಲ್ಲಿ ಜನರು ಹೆಚ್ಚು ಕೂರುತ್ತಾರೆ ಹೀಗೆ ಪ್ರತಿಯೊಂದರ ಮಾಹಿತಿ ಕಲೆ ಹಾಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೇಪಿಸ್ಟ್‌ ಸೆಂಗರ್‌ ಶಿಕ್ಷೆ ಅಮಾನತಿಗೆ ಸುಪ್ರೀಂ ತಡೆ
ಐದು ದಿನಗಳ ನಂತರ ಟಿಪ್ಪರ್ ಚಾಲಕನ ಮೃತದೇಹ ಪತ್ತೆ