ಕನ್ನಡಪ್ರಭ ವಾರ್ತೆ ಮದ್ದೂರು
ಸಾಲಬಾಧೆಯಿಂದ ಖಿನ್ನತೆಗೆ ಒಳಗಾಗಿದ್ದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಭಾನುವಾರ ಮುಂಜಾನೆ ಜರುಗಿದೆ.
ಗ್ರಾಮದ ಲೇಟ್ ಎಂ.ಜಿ.ಗೂಳಿಗೌಡನ ಪುತ್ರ ಎಂ.ಜಿ.ರವಿಶಂಕರ್ (54) ಆತ್ಮಹತ್ಯೆಗೆ ಶರಣಾದ ರೈತ. ಮೃತರು ಪತ್ನಿ ಎಂ.ಪ್ರೇಮ, ಪುತ್ರಿ ಕೀರ್ತಿ ಹಾಗೂ ಪುತ್ರ ಅಪ್ಪು ಗೌಡರನ್ನು ಅಗಲಿದ್ದಾರೆ. ಗ್ರಾಮದಲ್ಲಿ ಸುಮಾರು 2 ಎಕರೆ ಜಮೀನು ಹೊಂದಿದ್ದ ರವಿಶಂಕರ್ ಜಮೀನಿನಲ್ಲಿ ಭತ್ತ, ತೆಂಗು ಬೆಳೆದಿದ್ದರು.
ಬೆಳೆ ಬೆಳೆಯಲು ನಿಲುವಾಗಿಲು ಕೃಷಿ ಪತ್ತಿನ ಸಹಕಾರ ಸಂಘದಿಂದ 2.50 ಲಕ್ಷ ರು., ಬೆಸಗರಹಳ್ಳಿ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನಿಂದ ಒಂದು ಲಕ್ಷ ರು., ಮಂಡ್ಯದ ಐಡಿಎಫ್‌ಸಿ ಹಣಕಾಸು ಸಂಸ್ಥೆಯಿಂದ ಮೂರು ಲಕ್ಷ ಮತ್ತು ಖಾಸಗಿ ಡೈರಿ ಯಿಂದ 1.50 ಲಕ್ಷ ರು. ಹಾಗೂ ಸ್ಥಳೀಯವಾಗಿ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದರು.
ಕಳೆದ ಮೂರು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದ ಕಾರಣ ನೀರಿನ ಅಭಾವ ಉಂಟಾಗಿ ಬೆಳೆಗಳು ಒಣಗಿ ಸಾಲದ ಭಾದೆ ಹೆಚ್ಚಾದ ಹಿನ್ನೆಲೆಯಲ್ಲಿ ಖಿನ್ನತೆ ಒಳಗಾದ ರವಿಶಂಕರ್ ಭಾನುವಾರ ಬೆಳಗ್ಗೆ ತಮ್ಮ ಮನೆ ಕೊಠಡಿ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಪ್ರೇಮ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.