;Resize=(412,232))
ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ನಟಿ ರನ್ಯಾ ರಾವ್‌ಗೆ ಇದೀಗ ಗೆಳೆಯ ತರುಣ್ ರಾಜ್ ಕಂಟಕವಾಗಿ ಪರಿಣಮಿಸಿದ್ದಾನೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ಈ ತರುಣ್ ರಾಜ್ ನನಗೂ ಚಿನ್ನ ಕಳ್ಳ ಸಾಗಣೆಗೂ ಸಂಬಂಧವಿಲ್ಲ. ದುಬೈನಲ್ಲಿ ರನ್ಯಾರಾವ್‌ಗೆ ನಾನು ಚಿನ್ನದ ಬಿಸ್ಕೆಟ್ ನೀಡಿದ್ದೆ. ಬಳಿಕ ಆಕೆ ಅದನ್ನು ಭಾರತಕ್ಕೆ ತಂದಿದ್ದಾಳೆ. ಇದನ್ನು ಬಿಟ್ಟು ಭಾರತದಲ್ಲಿ ನಾನು ಆಕೆ ಜೊತೆ ಯಾವುದೇ ವ್ಯವಹಾರ ಮಾಡಿಲ್ಲ. ಹೀಗಾಗಿ ನನಗೆ ಭಾರತದ ಯಾವುದೇ ಕಾನೂನುಗಳು ಅನ್ವಯವಾಗುವುದಿಲ್ಲ. ಹೀಗಾಗಿ ನನ್ನನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.
ಇದಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರನ್ಯಾ ರಾವ್ ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಮಾಡಿದ್ದಾರೆ. ವ್ಯವಸ್ಥಿತ ಜಾಲದ ಮುಖಾಂತರ ಭಾರತಕ್ಕೆ ಚಿನ್ನಕಳ್ಳ ಸಾಗಣೆ ಮಾಡಲಾಗಿದೆ. ಈ ಜಾಲದಲ್ಲಿ ಎರಡನೇ ಆರೋಪಿ ತರುಣ್ ರಾಜ್ ಕೂಡ ಭಾಗಿಯಾಗಿದ್ದಾನೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಪ್ರಕರಣದಲ್ಲಿ ದುಬೈ ಅಥವಾ ಭಾರತದ ಕಾನೂನಿನ ಪ್ರಶ್ನೆ ಬರುವುದಿಲ್ಲ. ಚಿನ್ನಕಳ್ಳ ಸಾಗಣೆ ಇಡೀ ಜಗತ್ತಿನಾದ್ಯಂತ ನಡೆಯುತ್ತಿದೆ. ಭಾರತ ಅಥವಾ ದುಬೈಗೆ ಮಾತ್ರ ಇದು ಸೀಮಿತವಾಗಿಲ್ಲ. ಚಿನ್ನಕಳ್ಳ ಸಾಗಣೆ ಮಾಡಿದವರು ಮಾತ್ರ ಅಪರಾಧಿಗಳಾಗುವುದಿಲ್ಲ. ಅದಕ್ಕೆ ಸಹಕರಿಸಿದವರೂ ಅಪರಾಧಿಗಳಾಗುತ್ತಾರೆ. ಈ ಹಿನ್ನೆಲೆಯಲ್ಲಿ ತರುಣ್ ರಾಜ್ ದೋಷಿಯಾಗಲಿದ್ದು, ಆತನನ್ನು ಪ್ರಕರಣದಿಂದ ಕೈಬಿಡಬಾರದು ಎಂದು ಕೋರಿದ್ದಾರೆ.
ನಟಿ ರನ್ಯಾ ರಾವ್ 2025ರ ಮಾರ್ಚ್ 3ರಂದು ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಮಾಡಿಕೊಂಡು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಆಕೆಯನ್ನು ಬಂಧಿಸಿದ್ದರು. ಆಕೆಯಿಂದ ಬರೋಬ್ಬರಿ 12.56 ಕೋಟಿ ರು. ಮೌಲ್ಯದ 14 ಕೆ.ಜಿ. 213 ಗ್ರಾಂ ಚಿನ್ನ ಜಪ್ತಿ ಮಾಡಿದ್ದರು.
ಬಳಿಕ ಆಕೆಯ ನಿವಾಸದ ಮೇಲೆ ದಾಳಿ ಮಾಡಿ 2.67 ಕೋಟಿ ರು. ದಾಖಲೆ ಇಲ್ಲದ ನಗದು ಮತ್ತು 2.06 ಕೋಟಿ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆಗೆ ಸಹಕರಿಸಿದ್ದ ಆಕೆಯ ಸ್ನೇಹಿತರಾದ ತರುಣ್ ರಾಜ್ ಮತ್ತು ಸಾಹಿಲ್ ಸಕಾರಿಯಾ ಜೈನ್, ಭರತ್ ಕುಮಾರ್‌ಜೈನ್‌ನನ್ನು ಬಂಧಿಸಿದ್ದರು.
ಈ ನಾಲ್ವರು ಆರೋಪಿಗಳು ಒಂದು ವರ್ಷದ ಅವಧಿಯಲ್ಲಿ ವಿದೇಶದಿಂದ ಸುಮಾರು 325 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಒಟ್ಟು 271 ಕೋಟಿ ರು. ದಂಡ ಪಾವತಿಸುವಂತೆ ನಾಲ್ವರಿಗೂ ಡಿಆರ್‌ಐ ನೋಟಿಸ್ ಜಾರಿಗೊಳಿಸಿತ್ತು.
ಇದು ಗಂಭೀರ ಪ್ರಕರಣವಾಗಿದ್ದರಿಂದ ಈ ನಾಲ್ವರ ವಿರುದ್ಧ ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿದ್ದರು. ಹೀಗಾಗಿ 14 ತಿಂಗಳ ಕಾಲ ಆರೋಪಿಗಳ ಜೈಲುವಾಸಿಗಳಾಗಿದ್ದರು. ಕಳೆದ ಏಪ್ರಿಲ್‌ನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.