ವಿದೇಶಿ ಬಟ್ಟೆ ವ್ಯಾಪಾರಿ ಬಳಿ ₹18 ಕೋಟಿ ಡ್ರಗ್ಸ್!

Published : Sep 10, 2026, 10:23 AM IST
drugs

ಸಾರಾಂಶ

ಮಾದಕ ವಸ್ತು ಮಾರಾಟ ಜಾಲ ಮೇಲೆ ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿರುವ ರಾಜಧಾನಿ ಪೊಲೀಸರು, ಸಾಫ್ಟ್‌ವೇರ್ ಉದ್ಯೋಗಿ ಸೇರಿದಂತೆ 7 ಮಂದಿಯನ್ನು ಬಂಧಿಸಿ, 24 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಬೆಂಗಳೂರು : ಮಾದಕ ವಸ್ತು ಮಾರಾಟ ಜಾಲ ಮೇಲೆ ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿರುವ ರಾಜಧಾನಿ ಪೊಲೀಸರು, ಸಾಫ್ಟ್‌ವೇರ್ ಉದ್ಯೋಗಿ ಸೇರಿದಂತೆ 7 ಮಂದಿಯನ್ನು ಬಂಧಿಸಿ, 24 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಠಾಣೆಗಳ ಪೊಲೀಸರು ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 10.2 ಕೆಜಿ ಎಂಡಿಎಂಎ, 2.3 ಕೆಜಿ ಹೈಡ್ರೋಗಾಂಜಾ, 10 ಕೆಜಿ ಗಾಂಜಾ ಹಾಗೂ ಮೊಬೈಲ್ ಸೇರಿದಂತೆ ಒಟ್ಟು 12.11 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಆದರೆ ಈ ಡ್ರಗ್ಸ್ ಮಾರುಕಟ್ಟೆಯಲ್ಲಿ ಪ್ರಸುತ್ತ 24.22 ಕೋಟಿ ರು.ಬೆಲೆ ಇದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿದೇಶಿ ಪ್ರಜೆ ಬಳಿ 18 ಕೋಟಿ ಡ್ರಗ್ಸ್

ಹೊರ ರಾಜ್ಯದಿಂದ ಸಿದ್ಧ ಉಡುಪುಗಳಲ್ಲಿ ಕೋಟ್ಯಾಂತರ ರು.ಡ್ರಗ್ಸ್ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬ ಗಿರಿನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ. ರಾಜಾನಕುಂಟೆ ಸಮೀಪದ ಟಿ.ಅಗ್ರಹಾರದ ನಿವಾಸಿ ಪೀಟರ್ ಅಲ್ಫ್ರೆಡ್‌ ಬಂಧಿತನಾಗಿದ್ದು, ಆರೋಪಿಯಿಂದ 18.26 ಕೋಟಿ ರು.ಮೌಲ್ಯದ 9.1 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಗಿರಿನಗರ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಆರೋಪಿಯನ್ನು ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಬಂಧಿಸಿದೆ. 5 ತಿಂಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಪಶ್ವಿಮ ಆಫ್ರಿಕಾದ ಐವಾರಿ ಕೋಸ್ಟಾ ದೇಶದ ಪೀಟರ್, ಆನಂತರ ನಗರಕ್ಕೆ ಬಂದು ನೆಲೆಸಿದ್ದ. ಹಣದ ದುರಾಸೆಯಿಂದ ಬಟ್ಟೆ ವ್ಯಾಪಾರ ನೆಪೆದಲ್ಲಿ ಆತ ಡ್ರಗ್ಸ್ ದಂಧೆ ನಡೆಸುತ್ತಿದ್ದ. ದೆಹಲಿ ಮೂಲದ ಡ್ರಗ್ಸ್ ದಂಧೆಕೋರರಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಆರೋಪಿ ದುಬಾರಿ ಬೆಲೆಗೆ ಮಾರುತ್ತಿದ್ದ.

ಟೆಕ್ಕಿ ಗ್ಯಾಂಗ್ ಬಳಿ 4 ಕೋಟಿ ರು. ಡ್ರಗ್ಸ್:

ಇಂದಿರಾನಗರ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಹಾಗೂ ಆತನ ಸ್ನೇಹಿತ ಸಿಕ್ಕಿಬಿದ್ದಿದ್ದಾರೆ. ಮೋಟಪ್ಪನಪಾಳ್ಯದ ನವೀನ್ ಹಾಗೂ ಆತನ ಗೆಳೆಯ ಬಂಧಿತರಾಗಿದ್ದು, ಆರೋಪಿಗಳಿಂದ 4.32 ಕೋಟಿ ರು.ಮೌಲ್ಯದ 2.1 ಕೆಜಿ ಎಡಿಎಂಎ ಜಪ್ತಿಯಾಗಿದೆ. ಇಂದಿರಾನಗರ ಬಳಿಕ ಡ್ರಗ್ಸ್ ಮಾರಾಟಕ್ಕಿಳಿದಿದ್ದಾಗ ಸ್ಪಷ್ಟ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಎನ್‌.ಆನಂದ್ ಸಾರಥ್ಯದ ತಂಡವು ಆರೋಪಿಯನ್ನು ಬಂಧಿಸಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ನವೀನ್ ಉದ್ಯೋಗದಲ್ಲಿದ್ದರೆ, ತನ್ನ ತಂದೆ ಒಡೆತನದ ಶಾಮಿಯಾನ ಅಂಗಡಿಯನ್ನು ಆತನ ಗೆಳೆಯ ನಿರ್ವಹಣೆ ಮಾಡುತ್ತಿದ್ದ. ಒಂದೇ ಪ್ರದೇಶದಲ್ಲಿ ನೆಲೆಸಿದ್ದರಿಂದ ಇಬ್ಬರಿಗೂ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲೇ ಹಣದಾಸೆಗೆ ಬಿದ್ದು ಆರೋಪಿಗಳು ಡ್ರಗ್ಸ್‌ ದಂಧೆಗಿಳಿದಿದ್ದರು. ದೆಹಲಿಯ ಡ್ರಗ್ಸ್ ಪೂರೈಕೆದಾರರಿಂದ ನವೀನ್ ತಂಡ ಡ್ರಗ್ಸ್ ಖರೀದಿಸಿದೆ. ಇವರಿಗೆ ನೈಜೀರಿಯಾ ದೇಶದ ಮಹಿಳೆಯೊಬ್ಬಳು ಡ್ರಗ್ಸ್ ಪೂರೈಸಿದ್ದಳು.

1.64 ಕೋಟಿ ರು. ಡ್ರಗ್ಸ್‌ ಜಪ್ತಿ:

ನಗರದಲ್ಲಿ ವಿದೇಶದಿಂದ ಹೈಡ್ರೋ ಗಾಂಜಾ ತಂದು ಮಾರುತ್ತಿದ್ದ ಕಿಡಿಗೇಡಿಯೊಬ್ಬನನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಮಾನಪುರದ ಸಿಜೋ ಶಾಜಿ ಬಲೆಗೆ ಬಿದ್ದಿದ್ದು, ಆರೋಪಿಯಿಂದ 1.64 ಕೋಟಿ ರು ಬೆಲೆಯ 2.3 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಮತ್ತೊಂದು ದಾಳಿಯಲ್ಲಿ 10 ಲಕ್ಷ ರು. ಬೆಲೆಯ 10 ಕೆಜಿ ಗಾಂಜಾವನ್ನು ಗೋವಿಂದಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೆಂಗಳೂರು : ಕಾಣೆಯಾಗಿದ್ದ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿ ಪತ್ತೆ
ಗದ್ದೆಗೆ ಉರುಳಿ ಬಿದ್ದ ಕೆಎಸ್ಆರ್ಟಿಸಿ ಬಸ್: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ