ಶಿಕ್ಷಕರು ಇಲ್ಲಿ ನಮ್ಮನ್ನು ಅಸಹ್ಯವಾಗಿ ನೋಡ್ತಾರೆ, ಅಂಗಾಗಗಳನ್ನು ಮುಟ್ತಾರೆ. ವಿರೋಧಿಸಿದ್ರೆ ಹಾಲ್ ಟಿಕೆಟ್ ಕೊಡೋಲ್ಲ ಎಂದು ಹೆದರಿಸ್ತಾರೆ ಎಂದು ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್
‘ಶಿಕ್ಷಕರು ಇಲ್ಲಿ ನಮ್ಮನ್ನು ಅಸಹ್ಯವಾಗಿ ನೋಡ್ತಾರೆ, ಅಂಗಾಗಗಳನ್ನು ಮುಟ್ತಾರೆ. ವಿರೋಧಿಸಿದ್ರೆ ಹಾಲ್ ಟಿಕೆಟ್ ಕೊಡೋಲ್ಲ ಎಂದು ಹೆದರಿಸ್ತಾರೆ. ಹಿಂಗಾಗಿ ಹೆದರಿ ಸುಮ್ಮನಿದ್ದೇವಿ. ಅವರ ಟಾರ್ಚರ್ ನೋಡಿದಾಗ ನಾವು ಸಾಯ್ಬೇಕು ಅನ್ನಿಸ್ತಿದೆ. ಆದರೆ, ಮಮ್ಮಿ, ಪಾಪಾ ನೆನಪಾಗಿ ಸುಮ್ಮನಾಗ್ತೀವಿ. ಇಲ್ಲಿನ ಸರ್‌ಗಳನ್ನು ತೆಗೆದುಹಾಕಿ ಪುಣ್ಯ ಕಟ್ಕೋಳ್ಳಿ. ಈ ನರಕದಿಂದ ನಮ್ಮನ್ನು ಪಾರು ಮಾಡ್ರಿ’.
ಈ ರೀತಿ ಅಂಗಲಾಚಿದ್ದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು. ‘ಕನ್ನಡಪ್ರಭ’ ಸಹೋದರ ಸಂಸ್ಥೆ ‘ಸುವರ್ಣ ನ್ಯೂಸ್’ ಎದುರು ಈ ಮಕ್ಕಳು ಅಂಗಲಾಚಿದ್ದು, ವರದಿ ಬಿತ್ತರಗೊಳ್ಳುತ್ತಿದ್ದಂತೆ ಸಚಿವರು ಸೋಮವಾರ ಶಾಲೆಗೆ ಭೇಟಿ ನೀಡಿದ್ದರು.
‘ಇತ್ತೀಚೆಗಷ್ಟೇ ಹುಮನಾಬಾದ್ ತಾಲೂಕಿನ ವಸತಿ ಶಾಲೆಯೊಂದರಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿ ಜಾಮೀನಿನ ಮೇಲೆ ಹೊರ ಬಂದಿರುವವರೇ ಇಲ್ಲಿ ಪ್ರಾಂಶುಪಾಲರಾಗಿದ್ದಾರೆ. ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್, ಹಿಂದಿ, ಕನ್ನಡ, ಇಂಗ್ಲೀಷ್ ಭಾಷಾ ಶಿಕ್ಷಕರ ದೌರ್ಜನ್ಯ, ಕಿರುಕುಳ ಸಹಿಸಿಕೊಂಡೇ ಅಭ್ಯಾಸ ಮಾಡ್ತಿದ್ದೇವೆ. ಏನಾದ್ರೂ ಪ್ರಶ್ನೆ ಮಾಡಿದರೆ ಹಾಲ್ ಟಿಕೆಟ್ ಕೊಡೋಲ್ಲ ಎಂದು ಧಮ್ಕಿ ಹಾಕ್ತಾರೆ.
ಪ್ರಾಂಶುಪಾಲರು ಹಾಗೂ ಶಿಕ್ಷಕರು ಮೈಮುಟ್ಟಿ ಅಸಭ್ಯ ವರ್ತನೆ ತೋರ್ತಾರೆ. ಪಾಠ ಮಾಡೋದಕ್ಕಿಂತ ಮಾತೇ ಹೆಚ್ಚಿರುತ್ತವೆ. ಕೆಳಗಿನಿಂದ ಮೇಲಿನವರೆಗೆ ಅಸಭ್ಯವಾಗಿ ನೋಡ್ತಾರೆ. ಸರಿಯಾಗಿ ಊಟ ನೀಡಲ್ಲ, ಶುದ್ಧ ಕುಡಿಯುವ ನೀರು ಕೊಡಲ್ಲ. ಅಶುದ್ಧ ನೀರು ಕುಡಿದು ಚರ್ಮರೋಗಕ್ಕೆ ತುತ್ತಾಗುತ್ತಿದ್ದೇವೆ. ಔಷಧಿ ಕೇಳಿದರೆ ಡೇಟ್ ಮುಗಿದ ಔಷಧಿಗಳನ್ನು ಕೊಡುತ್ತಾರೆ’ ಎಂದು ಇಲ್ಲಿನ ವಿದ್ಯಾರ್ಥಿನಿಯರು ಮಾಧ್ಯಮದೆದುರು ಅಳಲು ತೋಡಿಕೊಂಡಿದ್ದಾರೆ.
ವರದಿ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ವೈಯಕ್ತಿಕವಾಗಿ ವಿಚಾರಿಸಿದ್ದೇನೆ. ಊಟ, ವಸತಿ, ಶಿಕ್ಷಣದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಇಲ್ಲಿ ಯಾವುದೇ ತರಹದ ಅವ್ಯವಸ್ಥೆ ಕಂಡು ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ. ಅಂತಹ ಅವ್ಯವಸ್ಥೆ ಏನಾದರೂ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದರು.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.