ಏರಿಯಾದಲ್ಲಿ ಹವಾ ಸೃಷ್ಟಿಸಲು ಯತ್ನಿಸಿದ್ದೇ ಶರತ್‌ ಹತ್ಯೆಗೆ ಕಾರಣ; 6 ಮಂದಿಯ ಬಂಧನ

KannadaprabhaNewsNetwork |  
Published : Mar 12, 2024, 02:02 AM IST
ಮರ್ಡರ್‌ | Kannada Prabha

ಸಾರಾಂಶ

ಫ್ಲವರ್ ಗಾರ್ಡನ್‌ನಲ್ಲಿ ಶಿವರಾತ್ರಿ ಹಬ್ಬದ ದಿನ ನಡೆದಿದ್ದ ರೌಡಿ ಶಿವ ಅಲಿಯಾಸ್ ಶರತ್ ಕೊಲೆ ಪ್ರಕರಣ ಸಂಬಂಧ ಇಬ್ಬರು ರೌಡಿಗಳು ಸೇರಿದಂತೆ ಆರು ಮಂದಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಫ್ಲವರ್ ಗಾರ್ಡನ್‌ನಲ್ಲಿ ಶಿವರಾತ್ರಿ ಹಬ್ಬದ ದಿನ ನಡೆದಿದ್ದ ರೌಡಿ ಶಿವ ಅಲಿಯಾಸ್ ಶರತ್ ಕೊಲೆ ಪ್ರಕರಣ ಸಂಬಂಧ ಇಬ್ಬರು ರೌಡಿಗಳು ಸೇರಿದಂತೆ ಆರು ಮಂದಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂಜನಪ್ಪ ಗಾರ್ಡನ್‌ನ ರೌಡಿಗಳಾದ ಚಂದ್ರಶೇಖರ್‌ ಮತ್ತು ಸ್ಟೀಫನ್‌ ಹಾಗೂ ಇವರ ಸಹಚರರಾದ ತಮಿಳುನಾಡಿನ ಶಿಬು, ಬಾಗಲೂರಿನ ಶೇಖರ್‌, ಮಣಿಕಂಠ ಹಾಗೂ ಕಿರಣ್ ಬಂಧಿತರಾಗಿದ್ದು, ಆರೋಪಿಗಳಿಂದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶಿವ ಅಲಿಯಾಸ್‌ ಶರತ್‌ ಮೇಲೆ ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಬಾಗಲೂರು ಬಳಿ ಹಂತಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಿನಿಂದ ಬಂದು ಸ್ಕೆಚ್‌:

ತನ್ನ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ಫ್ಲವರ್‌ ಗಾರ್ಡನ್‌ನಲ್ಲಿ ನೆಲೆಸಿದ್ದ ಶರತ್‌, ಹಲವು ವರ್ಷಗಳಿಂದ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ. ಈತನ ಮೇಲೆ ಕೊಲೆ ಮತ್ತು ಹಲ್ಲೆ ಸೇರಿದಂತೆ ಐದಾರು ಪ್ರಕರಣಗಳು ದಾಖಲಾಗಿದ್ದವು. ಈ ಕ್ರಿಮಿನಲ್‌ ಚರಿತ್ರೆಯ ಹಿನ್ನೆಲೆಯಲ್ಲಿ ಆತನ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.

ಈ ಮೊದಲು ಫ್ಲವರ್ ಗಾರ್ಡನ್‌ನಲ್ಲೇ ಆರೋಪಿಗಳು ಸಹ ನೆಲೆಸಿದ್ದರು. ಆದರೆ ಸ್ಥಳೀಯವಾಗಿ ಹವಾ ಸೃಷ್ಟಿಸುವ ವಿಷಯದಲ್ಲಿ ರೌಡಿ ಚಂದ್ರಶೇಖರ್ ಹಾಗೂ ಶರತ್‌ ಗುಂಪಿನ ಮನಸ್ತಾಪ ಬೆಳೆದಿತ್ತು. ಬಳಿಕ ಶರತ್‌ ಕಿರುಕುಳ ಸಹಿಸಲಾರದೆ ಫ್ಲವರ್ ಗಾರ್ಡನ್‌ ತೊರೆದು ಬೇರೆಡೆ ಶಿಬು, ಮಣಿ, ಶೇಖರ್‌, ಕಿರಣ್ ಹಾಗೂ ಚಂದ್ರಶೇಖರ್ ವಾಸ್ತವ್ಯ ಬದಲಾಯಿಸಿದ್ದರು. ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಚಂದ್ರಶೇಖರ್ ಮತ್ತು ಶರತ್ ಮಧ್ಯೆ ಮತ್ತೆ ಜಗಳವಾಗಿತ್ತು ಎಂದು ತಿಳಿದು ಬಂದಿದೆ.

ರೇಖಾ ಕದಿರೇಶ್‌ ಹಂತಕನ ಸಾಥ್‌:

ಶರತ್‌ ಜೊತೆಗಿನ ಜಗಳದಿಂದ ಕೆರಳಿದ ಚಂದ್ರಶೇಖರ್‌, ತನ್ನ ಶತ್ರು ಕೊಲೆಗೆ ನಿರ್ಧರಿಸಿದ್ದ. ಆಗ ಆತನಿಗೆ ಶರತ್‌ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಇನ್ನುಳಿದ ನಾಲ್ವರು ಆರೋಪಿಗಳು ಸಾಥ್ ಕೊಟ್ಟಿದ್ದಾರೆ. ಈ ಹತ್ಯೆಗೆ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ತನ್ನ ಗೆಳೆಯ ರೌಡಿ ಸ್ಟೀಫನ್‌ ಬಿಡುಗಡೆವರೆಗೆ ಚಂದ್ರಶೇಖರ್ ಕಾಯುತ್ತಿದ್ದ. ವಾರದ ಹಿಂದಷ್ಟೇ ಮಾಜಿ ಕಾರ್ಪೋರೇಟರ್ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರಬಂದು ಸ್ನೇಹಿತರ ಜತೆ ಸ್ಟೀಫನ್‌ ಕೈ ಮಿಲಾಯಿಸಿದ್ದಾನೆ. ಅಂತೆಯೇ ಪೂರ್ವಯೋಜಿತ ಸಂಚಿನಂತೆ ಶುಕ್ರವಾರ ರಾತ್ರಿ ಶರತ್‌ ಮೇಲೆರಗಿ ಆರೋಪಿಗಳು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

PREV

Recommended Stories

ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ
ದುಡ್ಡಿನ ಮಳೆ ಸುರಿಸುವುದಾಗಿ ನಂಬಿಸಿ ಮಹಾ ಧೋಖಾ!