ಬೆಂಗಳೂರು : ರೈಸ್ ಪುಲ್ಲಿಂಗ್ ಚೊಂಬು ತೋರಿಸಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರು. ಮೌಲ್ಯದ ಜಮೀನು ಮತ್ತು ಮನೆ ಸೇರಿ ಸ್ಥಿರಾಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ವಂಚಿಸಿದ್ದ ಮಹಿಳೆ ಸೇರಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರತ್ನ, ಹೊಳೆನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್, ಮಂಜುನಾಥ ಹಾಗೂ ನಟೇಶ್ ಬಂಧಿತರು. ಆರೋಪಿಗಳಿಂದ ರೈಸ್ ಪುಲ್ಲಿಂಗ್ ಚೊಂಬುಗಳನ್ನು ಜಪ್ತಿ ಮಾಡಲಾಗಿದೆ. ಉದ್ಯಮಿ ಹೆಣ್ಣೂರು ಪ್ರಕೃತಿ ಲೇಔಟ್ ನಿವಾಸಿ ವಿ.ಕಾಂತರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಉದ್ಯಮಿ ಕಾಂತರಾಜು ಗಂಗಾ ಬೋರ್‌ವೆಲ್ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಚ್ಚಾ ತೈಲ ಮತ್ತು ರಿಫೈನರಿ ಪ್ಲಾಂಟ್ ತೆರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪರಿಚಿತರ ಮುಖಾಂತರ ಆರೋಪಿಗಳಾದ ನಾಗರತ್ನ ಮತ್ತು ರಾಮಚಂದ್ರಪ್ಪ ಪರಿಚಯವಾಗಿದೆ. ಈ ವೇಳೆ ನಾಗರತ್ನ, ಚನ್ನರಾಯಪಟ್ಟಣದಲ್ಲಿ ನನ್ನದು ಪೆಟ್ರೋಲ್ ಬಂಕ್ ಇದೆ. ನನಗೆ ಶ್ರೀರಾಮುಲು ಮತ್ತು ಅಶ್ವತ್ಥನಾರಾಯಣ ಪರಿಚಯವಿದ್ದಾರೆ. ಒಎನ್‌ಜಿಸಿಯಲ್ಲಿ ತುಂಬಾ ಅನುಭವವಿದೆ. ಪ್ಲಾಂಟ್ ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದಳು.
5 ಲಕ್ಷ ಕೋಟಿ ರು. ಮೌಲ್ಯದ 5 ರೈಸ್ ಪುಲ್ಲಿಂಗ್ ಚೊಂಬು:
ಪ್ಲಾಂಟ್ ವ್ಯವಹಾರಕ್ಕೆ ಸಾವಿರಾರು ಕೋಟಿ ರು. ಬಂಡವಾಳಬೇಕು. ಅಷ್ಟೊಂದು ಬಂಡಾವಳ ಹೊಂದಿಸುವುದು ನಿಮ್ಮಿಂದ ಅಸಾಧ್ಯ. ನಮ್ಮ ಬಳಿ 5 ರೈಸ್ ಪುಲ್ಲಿಂಗ್ ಚೊಂಬುಗಳಿವೆ. ಅವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಲಕ್ಷ ಕೋಟಿ ರು. ಬೆಲೆ ಇದೆ ಎಂದು ನಂಬಿಸಿದ್ದರು. ಬಳಿಕ ಆರೋಪಿಗಳಾದ ನಟೇಶ್ ಮತ್ತು ಸುಕುಮಾರ್, ತಾವು ರೇಡಿಯಸ್ ಕಂಪನಿ ಸಿಇಒಗಳು ಎಂದು ಪರಿಚಯಿಸಿಕೊಂಡರೆ, ರಾಮಚಂದ್ರಪ್ಪ ತಾನು ಸಿಇಜಿಎಆರ್‌ಎನ್ ಕಂಪನಿ ಸಿಇಒ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆರೋಪಿಗಳು ಕಾಂತರಾಜುಗೆ ರೈಸ್ ಪುಲ್ಲಿಂಗ್ ಚೊಂಬುಗಳನ್ನು ತೋರಿಸಿದ್ದರು.
4 ಎಕರೆ 18 ಗಂಟೆ ಜಮೀನು, ಮನೆ ಕ್ರಯ :
ಈ ರೈಸ್ ಪುಲ್ಲಿಂಗ್ ಚೊಂಬುಗಳನ್ನು ನಾವೇ ಮಾರಾಟ ಮಾಡಿ ಹಣವನ್ನು ನಿಮಗೆ ಕೊಡುತ್ತೇವೆ. ಅಲ್ಲಿಯವರೆಗೆ ನಿಮ್ಮ ಸ್ಥಿರಾಸ್ತಿಯನ್ನು ನಮಗೆ ಬರೆದುಕೊಡಬೇಕು. ಒಂದು ತಿಂಗಳೊಳಗೆ ರೈಸ್ ಪುಲ್ಲಿಂಗ್ ಚೊಂಬು ಮಾರಾಟ ಮಾಡಿ ಬಳಿಕ ನಿಮ್ಮ ಆಸ್ತಿಯನ್ನು ನಿಮಗೆ ವಾಪಾಸ್ ಬರೆದುಕೊಡುವುದಾಗಿ ಹೇಳಿ ಕಾಂತರಾಜು ಅವರ ಕನಕಪುರ ತಾಲೂಕು ಅತ್ತಿಗುಪ್ಪೆ ಗ್ರಾಮದಲ್ಲಿನ 4 ಎಕರೆ 18 ಗುಂಟೆ ಜಮೀನನ್ನು ಸುಕುಮಾರನ್ ಪತ್ನಿ ಸವಿತಾ ಹೆಸರಿಗೆ ಕ್ರಯ ಮಾಡಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಚೊಂಬುಗಳು ಮಾರಾಟವಾಗಿಲ್ಲ ಎಂದು ಹೇಳಿ ಮಾರಾಟಕ್ಕೆ ಮಾರುಕಟ್ಟೆಯಲ್ಲಿ 1 ಕೋಟಿ ರು. ಹಣ ಠೇವಣಿ ಇರಿಸಬೇಕು ಎಂದು ಥಣಿಸಂದ್ರದ ಕಾಂತರಾಜು ಅವರ ಮನೆಯನ್ನು ರಾಮಚಂದ್ರ ಪಳಸಿಕರನ್ ಹೆಸರಿಗೆ ಬರೆಸಿಕೊಂಡಿದ್ದರು.
ಚೊಂಬುಗಳು 100 ಕೋಟಿ ರು.ಗೆ ಮಾರಾಟ:
ಇದಾದ ಒಂದು ವರ್ಷದ ಬಳಿಕ ಆರೋಪಿಗಳು ಈ ಚೊಂಬುಗಳು 100 ಕೋಟಿ ರು.ಗೆ ಮಾರಾಟವಾಗಿವೆ ಎಂದು ಹೇಳಿದ್ದರು. ಬಳಿಕ ನೆಲಮಂಗಲದ ಶಿವನಹಳ್ಳಿ ಗ್ರಾಮದಲ್ಲಿನ ಕಾಂತರಾಜು ಅವರ 2 ಎಕರೆ 4 ಗುಂಟೆ ಜಮೀನನ್ನು ಎ.ಸಿ.ಗಂಗರಾಜು ಎಂಬ ವ್ಯಕ್ತಿಯ ಹೆಸರಿಗೆ ಜಿಪಿಎ ನೋಂದಣಿ ಮಾಡಿಸಿದ್ದರು. ಬಳಿಕ ರೈಸ್ ಪುಲ್ಲಿಂಗ್ ಚೊಂಬು ಖರೀದಿಸಿರುವ ಕಂಪನಿಯಿಂದ ನಿಮ್ಮ ಮನೆಗೆ 100 ಕೋಟಿ ರು. ಬರುತ್ತದೆ ಮತ್ತು ಬ್ಯಾಂಕ್ ಖಾತೆಗೆ 500 ಕೋಟಿ ರು. ಬರುತ್ತದೆ ಎಂದು ನಂಬಿಸಿ ಕಾಂತರಾಜು ಬಳಿ ಬ್ಯಾಂಕ್ ಖಾತೆ ಮಾಹಿತಿ ಪಡೆದು ತೆರಳಿದ್ದರು. ಬಳಿಕ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದರು. ಈ ಸಂಬಂಧ ಕಾಂತರಾಜು ಸಿಸಿಬಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.