ಬೆಂಗಳೂರು : ಪ್ರಯಾಣಿಕರ ಡ್ರಾಪ್‌ ಮಾಡಿ ವಾಪಸ್‌ ಬಂದು ಮನೆಯಲ್ಲಿ ಚಿನ್ನ ಕದ್ದ ಚಾಲಕ!

KannadaprabhaNewsNetwork |  
Published : Jan 17, 2025, 01:45 AM ISTUpdated : Jan 17, 2025, 04:31 AM IST
Bhopal museum theft

ಸಾರಾಂಶ

ಪ್ರಯಾಣಿಕರನ್ನು ಡ್ರಾಪ್‌ ಮಾಡಿ ಬಳಿಕ ಪ್ರಯಾಣಿಕರ ಮನೆಗೆ ವಾಪಾಸ್‌ ಬಂದು ನಗದು ಸೇರಿದಂತೆ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪ್ರಯಾಣಿಕರನ್ನು ಡ್ರಾಪ್‌ ಮಾಡಿ ಬಳಿಕ ಪ್ರಯಾಣಿಕರ ಮನೆಗೆ ವಾಪಾಸ್‌ ಬಂದು ನಗದು ಸೇರಿದಂತೆ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್‌ನ ಬ್ಯಾಟರಾಯನದೊಡ್ಡಿಯ ಗ್ರಾಮದ ಕಾರ್ತಿಕ್‌ ಕುಮಾರ್‌ ಅಲಿಯಾಸ್‌ ಟ್ಯಾಟೋ ಕಾರ್ತಿ(25) ಬಂಧಿತ. ಆರೋಪಿಯಿಂದ ₹8 ಲಕ್ಷ ಮೌಲ್ಯದ 141 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿವಸ್ತುಗಳು, ₹2 ಸಾವಿರ ನಗದು, ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ.

ಇದೇ ತಿಂಗಳ 7ರಂದು ಕಾಮಾಕ್ಷಿಪಾಳ್ಯ ವೃಷಭಾವತಿನಗರ ನಿವಾಸಿ ಪ್ರೇಮನಾಥ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಪ್ರೇಮನಾಥ ಅವರು ಜ.7ರಂದು ಬೆಳಗ್ಗೆ ವೈಯಕ್ತಿಕ ಕೆಲದ ನಿಮಿತ್ತ ನೆಲಮಂಗಲಕ್ಕೆ ತೆರಳಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆ ಪ್ರೇಮನಾಥ ಅವರ ಪತ್ನಿ ಮತ್ತು ಪುತ್ರ ಸಂಬಂಧಿಕರೊಬ್ಬರನ್ನು ಸ್ಯಾಟಿಲೆಟ್‌ ಬಸ್‌ ನಿಲ್ದಾಣಕ್ಕೆ ಬಿಟ್ಟುಬರುವ ಸಲುವಾಗಿ ಒಲಾ ಆ್ಯಪ್‌ನಲ್ಲಿ ಆಟೋ ಬುಕ್‌ ಮಾಡಿದ್ದಾರೆ.

ಈ ವೇಳೆ ಆರೋಪಿ ಕಾರ್ತಿಕ್‌ ಆಟೋ ತೆಗೆದುಕೊಂಡು ಪ್ರೇಮನಾಥ ಅವರ ಮನೆಗೆ ಬಳಿ ಬಂದಿದ್ದಾನೆ. ಪ್ರೇಮನಾಥ ಅವರ ಪತ್ನಿ, ಪುತ್ರ ಹಾಗೂ ಸಂಬಂಧಿಕನನ್ನು ಆಟೋ ಹತ್ತಿಕೊಂಡು ಸ್ಯಾಟಲೆಟ್‌ ಬಸ್‌ ನಿಲ್ದಾಣದತ್ತ ತೆರಳಿದ್ದಾರೆ. ಈ ನಡುವೆ ಮನೆಗೆ ಬೀಗ ಹಾಕಿ ಕೀ ಅನ್ನು ಕಿಟಕಿಯಲ್ಲಿ ಇರಿಸಿರುವುದಾಗಿ ಪ್ರೇಮನಾಥಗೆ ಕರೆ ಮಾಡಿ ತಿಳಿಸಿದ್ದಾರೆ.

ವಾಪಾಸ್‌ ಬಂದಾಗ ಕಳವು ಬೆಳಕಿಗೆ:

ಪ್ರೇಮನಾಥ ಅವರ ಪತ್ನಿ ಮತ್ತು ಮಗ ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಗೆ ವಾಪಾಸ್‌ ಬಂದು ಕಿಟಕಿಯಲ್ಲಿ ಇರಿಸಿದ್ದ ಕೀ ತೆಗೆದುಕೊಂಡು ಮನೆ ಬೀಗ ತೆಗೆದು ಒಳಗೆ ಹೋದಾಗ, ಬೀರುವಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಪರಿಶೀಲನೆ ಮಾಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿವಸ್ತುಗಳು ಹಾಗೂ ನಗದು ಹಣ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಪತಿ ಪ್ರೇಮನಾಥಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಾಪ್‌ ಮಾಡಿ ಬಳಿಕ ಕಳವು:

ಆರೋಪಿ ಆಟೋ ಚಾಲಕ ಕಾರ್ತಿಕ್‌, ಪ್ರೇಮನಾಥ ಅವರ ಪತ್ನಿ ಹಾಗೂ ಮಗನನ್ನು ಪಿಕಪ್‌ ಮಾಡಲು ಮನೆ ಬಳಿ ಬಂದಿದ್ದಾಗ, ಮನೆಯ ಬೀಗದ ಕೀ ಅನ್ನು ಕಿಟಕಿಯಲ್ಲಿ ಇರಿಸುವುದನ್ನು ನೋಡಿಕೊಂಡಿದ್ದಾನೆ. ಬಳಿಕ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಅವರನ್ನು ಡ್ರಾಪ್ ಮಾಡಿ ನಂತರ ಪ್ರೇಮನಾಥ ಅವರ ಮನೆ ಬಳಿ ಬಂದಿದ್ದಾನೆ. ಕಿಟಕಿಯಲ್ಲಿ ಇರಿಸಿದ್ದ ಬೀಗ ಕೀ ತೆಗೆದುಕೊಂಡು ಬೀಗ ತೆರೆದು ಮನೆ ಪ್ರವೇಶಿಸಿ, ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿವಸ್ತುಗಳು ಹಾಗೂ ನಗದು ಕಳವು ಮಾಡಿದ್ದಾನೆ.

ಮತ್ತೆ ಕೀ ಕಿಟಕಿಯಲ್ಲಿರಿಸಿ ಪರಾರಿ:

ನಂತರ ಮತ್ತೆ ಮನೆಗೆ ಬೀಗ ಹಾಕಿ ಕೀ ಅನ್ನು ಕಿಟಕಿಯಲ್ಲಿ ಇರಿಸಿ ಪರಾರಿಯಾಗಿದ್ದಾನೆ. ತನಿಖೆ ವೇಳೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳವು ಮಾಡಿದ್ದಾಗಿ ಆರೋಪಿ ಕಾರ್ತಿಕ್‌ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಆರೋಪಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ
ಶ್ರೀರಂಗಪಟ್ಟಣ: ಕುಡಿದ ಮತ್ತಿನಲ್ಲಿದ್ದ ಸ್ನೇಹಿತನ ಕೊಲೆ