ಒನ್‌ವೇನಲ್ಲಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ದೂಂಡಾವರ್ತನೆ

KannadaprabhaNewsNetwork | Updated : Mar 17 2024, 01:03 PM IST

ಸಾರಾಂಶ

ಒನ್‌ವೇನಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಜನರ ಜತೆ ದುಂಡಾವರ್ತನೆ ತೋರಿದ ಕಾರು ಚಾಲಕ, ಬೈಕ್‌ ಸವಾರನಿಗೆ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಕಾರು ಚಾಲನೆ ಮಾಡಿಕೊಂಡು ಬರುವುದನ್ನು ಪ್ರಶ್ನೆ ಮಾಡಿದ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೂಂಡಾರ್ವತನೆ ತೋರಿದ ಆರೋಪದಡಿ ಕಾರು ಚಾಲಕನೊಬ್ಬನನ್ನು ಮಹದೇವಪುರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಶುಕ್ರವಾರ ವೈಟ್‌ಫೀಲ್ಡ್‌ ಬಳಿಯ ಗ್ರಾಫೈಟ್‌ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಸೃಜನ್‌ ಕದಂಬ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಾಗೂ ಫೋಟೋ ಸಹಿತ ದೂರು ನೀಡಿದ್ದರು. 

ಈ ದೂರಿನ ಮೇರೆಗೆ ಮಹದೇವಪುರ ಸಂಚಾರ ಠಾಣೆ ಪೊಲೀಸರು, ಆರೋಪಿ ಕಾರು ಚಾಲಕ ಸುನೀಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಘಟನೆ?
ಗ್ರಾಫೈಟ್‌ ಜಂಕ್ಷನ್‌ನಲ್ಲಿ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಸುನೀಲ್‌ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ವಾಹನ ಸವಾರರು ಸುನೀಲ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಇದರಿಂದ ಕೋಪಗೊಂಡ ಸುನೀಲ್‌, ಕಾರಿನಿಂದ ಕೆಳಗೆ ಇಳಿದು ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಳಿಕ ಸ್ಥಳದಿಂದ ತೆರಳಿದ್ದ.

ಈ ಘಟನೆಯನ್ನು ಸೃಜನ್‌ ಕದಂಬ ಎಂಬುವವರು ಮೊಬೈಲ್‌ನಲ್ಲಿ ಸೆರೆ ಹಿಡಿದು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು. 

ಇದರ ಬೆನ್ನಲ್ಲೇ ಮಹದೇವಪುರ ಸಂಚಾರ ಠಾಣೆ ಪೊಲೀಸರು, ಕಾರಿನ ನೋಂದಣಿ ಸಂಖ್ಯೆ ಆಧರಿಸಿ, ಚಾಲಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಹಠಾತ್‌ ತೆರೆದ ಕಾರ್‌ ಬಾಗಿಲಿಗೆ ಬೈಕ್‌ ಡಿಕ್ಕಿಯಾಗಿ ಸವಾರ ಸಾವುಕನ್ನಡಪ್ರಭ ವಾರ್ತೆ ಬೆಂಗಳೂರು ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಬಾಗಿಲು ಹಠಾತ್ತಾಗಿ ತೆರೆದ ಪರಿಣಾಮ ಬಾಗಿಲಿಗೆ ಬೈಕ್ ಡಿಕ್ಕಿಯಾಗಿ ನಿಮ್ಹಾನ್ಸ್ ಸಂಸ್ಥೆಯ ಡಿ ದರ್ಜೆ ನೌಕರರೊಬ್ಬರು ಸಾವನ್ನಪ್ಪಿರುವ ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಪಿ.ನಗರದ ನಿವಾಸಿ ವೆಂಕಟೇಶ್ (54) ಮೃತ ದುರ್ದೈವಿ. ಘಟನೆ ಸಂಬಂಧ ಕಾರಿನ ಮಾಲಿಕ ವಿಲಿಯಮ್ಸ್‌ನನ್ನು ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ವೆಂಕಟೇಶ್, ಡಿ ದರ್ಜೆ ನೌಕರರಾಗಿದ್ದು, ಎಂದಿನಂತೆ ಶುಕ್ರವಾರ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೊರಟಿದ್ದರು. ಇತ್ತ ತಮ್ಮ ಪತ್ನಿ ಜತೆ ಶಾಪಿಂಗ್‌ಗೆ ಬಂದಿದ್ದ ಖಾಸಗಿ ಕಂಪನಿ ಉದ್ಯೋಗಿ ವಿಲಿಯಮ್ಸ್ ಅ‍ವರು, ತಿಲಕನಗರ-ಮೈಕೋಲೇಔಟ್‌ ಮುಖ್ಯರಸ್ತೆ ರಸ್ತೆ ಬದಿ ನಿಲ್ಲಿಸಿದ್ದ ತಮ್ಮ ಕಾರಿನ ಬಾಗಿಲನ್ನು ಹಿಂದೆ ಮುಂದೆ ನೋಡದೆ ದಿಢೀರನೇ ತೆಗೆದಿದ್ದಾರೆ. 

ಇದರಿಂದ ಹಠಾತ್ತಾಗಿ ಕಾರಿನ ಬಾಗಿಲು ತೆರೆದ ಪರಿಣಾಮ ಬಾಗಿಲಿಗೆ ಬೈಕ್‌ ಡಿಕ್ಕಿಯಾಗಿ ವೆಂಕಟೇಶ್ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article