ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೇಬಿನಲ್ಲಿ ನಕಲಿ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.

ಪಾಂಡಿಚೇರಿ ಮೂಲದ ಅರ್ಜುನ್‌ ಎಂಬಾತನನ್ನು ವಶಕ್ಕೆ ಪಡೆದು, ಕ್ಷಮಾಪಣಾಪತ್ರ ಬರೆಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.6 ರಂದು ಅರ್ಜುನ್‌ ದೀಪಾಂಜಲಿ ನಗರದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಾಂಕ್‌ ವಿಡಿಯೋ ಮಾಡಲು ತನ್ನ ಜೇಬಿನಲ್ಲಿ ಆಟಿಕೆಯ ಗನ್‌ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಗನ್‌ ಕಂಡು ಕೋಪಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕ್ಷಮಾಪಣಾಪತ್ರ ಬರೆಸಿಕೊಂಡಿದ್ದಾರೆ. ಈ ವೇಳೆ ಅರ್ಜುನ್‌ನಿಂದ ತಪ್ಪೊಪ್ಪಿಗೆ ಪಡೆದುಕೊಂಡಿದ್ದು ಅದನ್ನು ಬಿಸಿಪಿ ಖಾತೆಯಲ್ಲಿ ಅಪ್‌ಲೋಡ್‌ ಮಾಡಿ ಜಾಗೃತಿ ಮೂಡಿಸಿದ್ದಾರೆ. ತಮಾಷೆ ಅಲ್ಲ: ಆಟಿಕೆ ಗನ್‌ನಿಂದ ಮಾಡುವ ಪ್ರಾಂಕ್ ಯಾವುದೇ ತಮಾಷೆ ಅಲ್ಲ. ಇದು ಸಾರ್ವಜನಿಕರಲ್ಲಿ, ಭಯ ಹುಟ್ಟಿಸಿ, ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟು ಮಾಡಬಹುದು. ಸಾರ್ವಜನಿಕ ಸ್ಥಳಗಳು ಅಪಾಯಕಾರಿ ಕಂಟೆಂಟ್‌ಗೆ ಸ್ಥಳವಲ್ಲ. ಈ ರೀತಿಯಲ್ಲಿ ವರ್ತಿಸುವ ಮುನ್ನ ಯೋಚಿಸಿ. ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಾರೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.