- ಮೇರಠ್‌ನಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಮೆಟ್ರೋ ಸಂಚಾರ

- ಒಂದೇ ಹಳಿ ಮೇಲೆ ಮೆಟ್ರೋ, ರ್‍ಯಾಪಿಡ್‌ ರೈಲು: ದೇಶದಲ್ಲೇ ಮೊದಲುಮೇರಠ್‌: ದೇಶದ ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ಪ್ರಾದೇಶಿಕ ತ್ವರಿತಗತಿ ಸಾರಿಗೆ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. ಒಂದೇ ಹಳಿಯ ಮೇಲೆ ಮೆಟ್ರೋ ಮತ್ತು ರ್‍ಯಾಪಿಡ್‌ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದಾಗಿದೆ. ಈ ವೇಳೆ ಮೆಟ್ರೋ ರೈಲಲ್ಲಿ ಸಂಚರಿಸಿದ ಮೋದಿ ವಿದ್ಯಾರ್ಥಿಗಳು, ಅಧಿಕಾರಿಗಳ ಜತೆ ಸಂವಾದ ನಡೆಸಿದರು.

ಆ ಬಳಿಕ 12, 930 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದ ಮೋದಿ, ನಮ್ಮ ಸರ್ಕಾರ ಇದೀಗ ಉದ್ಘಾಟಿಸಿದ ಯೋಜನೆಗಳು ವಿಕಸಿತ ಉತ್ತರ ಪ್ರದೇಶ ಮತ್ತು ವಿಕಸಿತ ಭಾರತಕ್ಕೆ ಹೆಚ್ಚಿನ ಬಲ ನೀಡುತ್ತವೆ. ಈ ಯೋಜನೆಗಳು ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಕೆಲಸದ ಸಂಸ್ಕೃತಿಯನ್ನು ತೋರಿಸುತ್ತದೆ. ನಮ್ಮ ಸರ್ಕಾರ ಯಾವುದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸಲು ಬದ್ಧವಾಗಿದೆ ಎಂದರು.

120 ಕಿ.ಮೀ. ವೇಗದ ಮೆಟ್ರೋ:

ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ 23 ಕಿ.ಮೀ. ಉದ್ದದ ಮೇರಠ್‌ ಮೆಟ್ರೋ ದೇಶದ ಅತಿವೇಗದ ಮೆಟ್ರೋ ಎಂಬ ಹಿರಿಮೆಗೆ ಪಾತ್ರವಾಗಿದೆ. ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವೆ ಈ ರೈಲು ಸಂಚರಿಸಲಿದೆ.


ನಮೋ ಭಾರತ್‌:

ನಮೋ ಭಾರತ್‌ ಕಾರಿಡಾರ್‌ ದೆಹಲಿ - ಗಾಝಿಯಾಬಾದ್‌ - ಮೇರಠ್‌ ಸಂಪರ್ಕಿಸುವ ದೇಶದ ಮೊದಲ ಪ್ರಾದೇಶಿಕ ತ್ವರಿತಗತಿಯ ಸಾರಿಗೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಡಿ ಈಗಾಗಲೇ ಕೆಲವು ಮಾರ್ಗ ಉದ್ಘಾಟನೆಗೊಂಡಿದ್ದು, ಬಾಕಿ ಉಳಿದಿದ್ದ ದೆಹಲಿಯ ಸರಾಯಿ ಕಾಲೆ ಖಾನ್‌ ಮತ್ತು ನ್ಯೂ ಅಶೋಕ್‌ ನಗರ ನಡುವಿನ 5 ಕಿ.ಮೀ. ಮತ್ತು ಉತ್ತರ ಪ್ರದೇಶದ ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವಿನ 21 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಿದರು. ಈ ಮೂಲಕ ದೆಹಲಿ ಮತ್ತು ಮೇರಠ್‌ ನಡುವಿನ ಸಂಪೂರ್ಣ ಕಾರಿಡಾರ್‌ ಉದ್ಘಾಟನೆಗೊಂಡಂತಾಗಿದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ ಈ 82 ಕಿ.ಮೀ. ಉದ್ದದ ನಮೋ ಭಾರತ್‌ ತ್ವರಿತಗತಿ ಸಾರಿಗೆಯು ಪ್ರಮುಖ ನಗರ ಕೇಂದ್ರಗಳಾದ ಸಾಹಿಬಾಬಾದ್‌, ಗಾಝಿಯಾಬಾದ್‌, ಮೋದಿನಗರ್‌ ಮತ್ತು ಮೀರತ್‌ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುತ್ತದೆ.