ನಗರದ ಕಾಳೇನ ಅಗ್ರಹಾರ - ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗಕ್ಕಾಗಿ ಬೆಂಗಳೂರಿನಲ್ಲೇ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ನಿರ್ಮಿಸಿರುವ ಚಾಲಕ ರಹಿತ ರೈಲಿನ ಪ್ರೊಟೊಟೈಪ್ (ಮೂಲಮಾದರಿ) ರೈಲು ಶೀಘ್ರ ಬಿಡುಗಡೆ ಆಗುವ ಸಾಧ್ಯತೆಯಿದೆ.
ಮಯೂರ್ ಹೆಗಡೆ
ಬೆಂಗಳೂರು : ನಗರದ ಕಾಳೇನ ಅಗ್ರಹಾರ - ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗಕ್ಕಾಗಿ ಬೆಂಗಳೂರಿನಲ್ಲೇ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ನಿರ್ಮಿಸಿರುವ ಚಾಲಕ ರಹಿತ ರೈಲಿನ ಪ್ರೊಟೊಟೈಪ್ (ಮೂಲಮಾದರಿ) ರೈಲು ಶೀಘ್ರ ಬಿಡುಗಡೆ ಆಗುವ ಸಾಧ್ಯತೆಯಿದೆ.
ಸುರಂಗ (13.76ಕಿಮೀ), ಎತ್ತರಿಸಿದ (7.5ಕಿಮೀ) ಮಾರ್ಗ ಸೇರಿ 21.25 ಕಿಮೀ ಉದ್ದದ ಗುಲಾಗಿ ಮಾರ್ಗಕ್ಕಾಗಿ 20 ರೈಲು ಸೆಟ್‌ಗಳನ್ನು ಪೂರೈಸುವ ಹೊಣೆಯನ್ನು ಬಿಇಎಂಎಲ್ ಹೊತ್ತಿದೆ. 2026ರ ಮೇ ವೇಳೆಗೆ ಎತ್ತರಿಸಿದ ಹಂತ ಹಾಗೂ ಡಿಸೆಂಬರ್‌ನಲ್ಲಿ ಸುರಂಗ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆಯನ್ನು ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯತ್ನಿಸುತ್ತಿದೆ.
ಹೀಗಾಗಿ ರೈಲಿನ ಪ್ರೊಟೊಟೈಪ್ ಮಾದರಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿ, ತಪಾಸಣೆಗೆ ಒಳಪಡಿಸಿ ಮಾಡಿಕೊಳ್ಳಬೇಕಾದ ಅಗತ್ಯ ಸುಧಾರಣೆಯತ್ತ ಬಿಇಎಂಎಲ್ ಚಿತ್ತ ಹರಿಸಿದೆ. ಬಳಿಕ ಹೆಚ್ಚಿನ ಪ್ರಮಾಣದಲ್ಲಿ ರೈಲುಗಳ ನಿರ್ಮಾಣ ಆಗಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಪ್ರೊಟೊಟೈಪ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಆರು ಬೋಗಿಗಳ ಚಾಲಕ ರಹಿತ ರೈಲು ಇದಾಗಿದ್ದು, ಸಿಬಿಟಿಸಿ ( ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಆಧಾರಿತವಾಗಿ ಸಂಚರಿಸಲಿದೆ. ಕಳೆದ ಆಗಸ್ಟ್‌ನಲ್ಲಿ ಉದ್ಘಾಟನೆಗೊಂಡ ಹಳದಿ ಮಾರ್ಗಕ್ಕಾಗಿ ಸಿಬಿಟಿಸಿ ತಂತ್ರಜ್ಞಾನದ ಚಾಲಕ ರಹಿತ ರೈಲನ್ನು ಚೀನಾದ ಸಿಆರ್‌ಆರ್‌ಸಿ ಕಂಪನಿಯ ಸಹಯೋಗದಲ್ಲಿ ಕಲ್ಕತ್ತಾದ ಟಿಆರ್‌ಎಸ್‌ಎಲ್ ಕಂಪನಿ ನಿರ್ಮಿಸಿಕೊಟ್ಟಿತ್ತು. ಈಗ ಬೆಂಗಳೂರಿನ ಬಿಇಎಂಎಲ್‌ನ ನ್ಯೂ ತಿಪ್ಪಸಂದ್ರ ರೈಲ್ವೆ ಶೆಡ್‌ನಲ್ಲಿ ಈ ತಂತ್ರಜ್ಞಾನದ ರೈಲು ನಿರ್ಮಾಣ ಆಗುತ್ತಿದೆ.
ಕಳೆದ ಜೂನ್ ತಿಂಗಳಿಂದಲೇ ಬಿಇಎಂಎಲ್ ಈ ರೈಲುಗಳ ಪೂರೈಕೆ ಆರಂಭಿಸಬೇಕಿತ್ತು. ಆದರೆ, ಪ್ರಮುಖ ಉಪಕರಣಗಳ ಲಭ್ಯತೆ ವಿಳಂಬವಾದ ಕಾರಣ ಪೂರೈಕೆ ಸಾಧ್ಯವಾಗಿಲ್ಲ. ಈಗ ಪ್ರೊಟೊಟೈಪ್ ಬಿಡುಗಡೆ ಆದರೂ ರೈಲಿನ ಸಂಚಾರ ಪರೀಕ್ಷೆಗೆ ಕೆಲವು ದಿನ ತಗುಲಲಿದೆ. ಮೂಲ ಮಾದರಿಯನ್ನು ಟ್ರೇಲರ್‌ಗಳ ಮೂಲಕ ಕೊತ್ತನೂರು ಡಿಪೋಗೆ 20 ಕಿಮೀ ಸಾಗಿಸಿ ಅಲ್ಲಿ ಪರೀಕ್ಷೆ ನಡೆಯಲಿದೆ.
2026ರಲ್ಲಿ ಈ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆ ಆರಂಭಿಸಲು ಕನಿಷ್ಠ 6-8 ರೈಲುಗಳು ಬೇಕಾಗುತ್ತವೆ. ಮುಂದಿನ ಐದು ತಿಂಗಳಲ್ಲಿ 8 ರೈಲುಗಳನ್ನು ಪೂರೈಸಲು ಬಿಇಎಂಎಲ್ ಪ್ರಯತ್ನಿಸುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ನೇರಳೆ, ಹಸಿರು ಮಾರ್ಗಕ್ಕೆ ರೈಲು ಒದಗಿಸಿದೆ
ಬಿಇಎಂಎಲ್ ಈಗಾಗಲೇ ನಮ್ಮ ಮೆಟ್ರೋದ ನೇರಳೆ, ಹಸಿರು ಮಾರ್ಗಕ್ಕೆ ರೈಲು ಒದಗಿಸಿದೆ. ಗುಲಾಬಿ ಮಾರ್ಗವೂ ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗ ಮತ್ತು ಹಳದಿ ಮಾರ್ಗಕ್ಕಾಗಿ ಒಟ್ಟೂ 66 ರೈಲುಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದಿದೆ.
ಮೂಲ ಮಾದರಿಯ ರೈಲು ಸಂಪೂರ್ಣ ಸಿದ್ಧವಾದ ಬಳಿಕ ಶಾಸನಬದ್ಧ ಅನುಮೋದನೆ ಪಡೆಯಲು ಬಿಎಂಆರ್‌ಸಿಎಲ್ ರೈಲ್ವೆ ಇಲಾಖೆಯ ಆರ್‌ಡಿಎಸ್‌ಒ ( ರಿಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೆಶನ್ ) ಮತ್ತು ಮೆಟ್ರೋ ಸುರಕ್ಷತಾ ಆಯುಕ್ತಾಲಯವನ್ನು ಸಂಪರ್ಕಿಸಲಿದೆ.
ಸುರಂಗ ಮಾರ್ಗದಲ್ಲಿ 13 ನಿಲ್ದಾಣ:
ಎತ್ತರಿಸಿದ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಹಾಗೂ ತಾವರೆಕೆರೆಯಲ್ಲಿ ನಿಲ್ದಾಣಗಳು ಇವೆ. ಸುರಂಗ ಮಾರ್ಗದಲ್ಲಿ 13 ನಿಲ್ದಾಣಗಳಿವೆ. ಜತೆಗೆ ಜಯದೇವದಲ್ಲಿ ಹಳದಿ ಮಾರ್ಗವನ್ನು, ಎಂ.ಜಿ.ರಸ್ತೆಯಲ್ಲಿ ನೇರಳೆ ಮಾರ್ಗವನ್ನು ಹಾಗೂ ಭವಿಷ್ಯದಲ್ಲಿ ಡೈರಿ ಸರ್ಕಲ್‌ನಲ್ಲಿ ಕೆಂಪು ಮಾರ್ಗ ಹಾಗೂ ನಾಗವಾರದಲ್ಲಿ ನೀಲಿ ಮಾರ್ಗವನ್ನು ಸಂಧಿಸಲಿದ್ದು, ಈ ನಿಲ್ದಾಣಗಳು ಇಂಟರ್‌ಚೇಂಜ್‌ಗಳಾಗಿ ಕಾರ್ಯ ನಿರ್ವಹಿಸಲಿವೆ.
