ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಎದುರೇ ಕಾಮಗಾರಿ ವಿಳಂಬಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಎದುರೇ ಕಾಮಗಾರಿ ವಿಳಂಬಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ನಾಗವಾರ ಕ್ರಾಸ್‌ನಿಂದ ಬಾಗಲೂರು ಕ್ರಾಸ್‌ ಮೆಟ್ರೋ ನಿಲ್ದಾಣದವರೆಗೆ ಪರಿಶೀಲನೆ ನಡೆಸಿದರು. ಈ ವೇಳೆ ನಾಗವಾರ ಜಂಕ್ಷನ್‌, ವೀರಣ್ಣಪಾಳ್ಯ ಜಂಕ್ಷನ್, ವೆಂಕಟಂ ಕಫೆ ಬಳಿ ಹಾಗೂ ಬಳ್ಳಾರಿ ರಸ್ತೆ – ಎಸ್ಟೀಮ್ ಮಾಲ್ ಬಳಿ ಮೆಟ್ರೋ ಕಾಮಗಾರಿಗಳಿಂದಾಗಿ ಅವ್ಯವಸ್ಥೆ ಆಗಿರುವುದು ಹಾಗೂ ಪಿಲ್ಲರ್‌ ನಿರ್ಮಾಣಕ್ಕೆ ತಂದ ಪರಿಕರಗಳನ್ನು ಬೇಕಾಬಿಟ್ಟಿ ರಸ್ತೆಯಲ್ಲಿ ಇಟ್ಟಿರುವುದು ಹಾಗೂ ಅದರಿಂದಾಗಿ ಸಂಚಾರ ಸಮಸ್ಯೆ ಉಂಟಾಗಿರುವ ಬಗ್ಗೆ ಸ್ಥಳೀಯರು ಸಚಿವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪಿಲ್ಲರ್‌ ನಿರ್ಮಾಣಕ್ಕೆ 2-3 ವರ್ಷ ವಿಳಂಬ

ಪಿಲ್ಲರ್‌ ನಿರ್ಮಾಣಕ್ಕೆ 2-3 ವರ್ಷ ವಿಳಂಬ ಆಗಿರುವುದನ್ನು ಪ್ರಶ್ನಿಸಿದರು. ಬಿಎಂಆರ್‌ಸಿಎಲ್‌ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಎರಡು ತಿಂಗಳಲ್ಲಿ ಆಗಬೇಕಾದ ಕೆಲಸಕ್ಕೆ ಎರಡು ವರ್ಷ ಏಕೆ ಬೇಕಾಯಿತು? ಮೆಟ್ರೋ ಕಾಮಗಾರಿ ಶೀಘ್ರವಾಗಿ ಮುಗಿಸಲು ಎದುರಾಗಿರುವ ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುವಲ್ಲಿ ಅಧಿಕಾರಿಗಳು ತಡಬಡಾಯಿಸಿದರು.

ನಾಗವಾರ ಜಂಕ್ಷನ್‌, ವೀರಣ್ಣಪಾಳ್ಯ ಜಂಕ್ಷನ್‌ನಲ್ಲಿ ಕಾಮಗಾರಿಯ ಸ್ಥಳದಲ್ಲಿನ ಹೆಚ್ಚಿನ ಭಗ್ನಾವಶೇಷ ತಕ್ಷಣ ತೆರವುಗೊಳಿಸಬೇಕು. ಬ್ಯಾರಿಕೇಡ್‌ಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ವೆಂಕಟಂ ಕಫೆ ಬಳಿ ಹೊರವರ್ತುಲ ಸರ್ವಿಸ್ ರಸ್ತೆಯ ಎರಡೂ ಬದಿಗಳನ್ನು ಮುಚ್ಚಿರುವುದು ಸಂಚಾರಕ್ಕೆ ತೊಂದರೆಯಾಗಿದೆ. ಕನಿಷ್ಠ ಒಂದು ಲೇನ್‌ಅನ್ನು ಸಂಚಾರಕ್ಕೆ ತೆರೆಯುವಂತೆ ಹಾಗೂ ರಸ್ತೆ ಯೋಗ್ಯ ಸ್ಥಿತಿಯಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ ರಸ್ತೆ–ಎಸ್ಟೀಮ್ ಮಾಲ್ ಬಳಿ ಸರ್ವಿಸ್ ರಸ್ತೆಗೆ ಸೂಕ್ತ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಬೇಕು. ಕೊಡಿಗೆಹಳ್ಳಿ ಜಂಕ್ಷನ್ ನಲ್ಲಿ 2021 ರಿಂದ ಪೂರ್ಣಗೊಳ್ಳದೇ ಮೆಟ್ರೋ ಪಿಲ್ಲರ್‌ ಕಾಮಗಾರಿಯಿಂದ ಜನತೆಗೆ ತೀವ್ರ ತೊಂದರೆಯಾಗಿದೆ. ಬೇಗ ಕೆಲಸ ಮುಗಿಸಬೇಕು. ಹೆಬ್ಬಾಳದಿಂದ ಬಾಗಲೂರು ಕ್ರಾಸ್ ವರೆಗೆ ಉತ್ತರ ನಗರ ಪಾಲಿಕೆ, ಎನ್‌ಎಚ್‌ಎಐ ಮತ್ತು ಮೆಟ್ರೋ ಸಂಸ್ಥೆಗಳು ಸ್ವಚ್ಛತೆಗೆ ಮುಂದಾಗುವಂತೆ ಸೂಚಿಸಿದರು.

ವಿಡಿಯೋ ಹಚಿಕೊಂಡ ಕಿರಣ್‌ಮಜುಮ್‌ದಾರ್‌

ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಉದ್ಯಮಿ ಕಿರಣ್‌ಮಜುಮ್‌ದಾರ್‌ ಶಾ, ‘ ಅವರು (ಅಧಿಕಾರಿಗಳು) ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಅವರಿಗೆ ಅನುದಾನ ಪೂರ್ಣ ಸಿಕ್ಕಿರುವುದರಿಂದ ವಿಳಂಬದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವರು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಬರೆದಿದ್ದಾರೆ.