ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ನಿಗಮವು ಮೊದಲ ಬಾರಿಗೆ ಸಂಪೂರ್ಣ ವಾಣಿಜ್ಯ ಉದ್ದೇಶದ ಸಂಕಿರ್ಣ ನಿರ್ಮಾಣಕ್ಕೆ ಮುಂದಾಗಿದೆ. ನಾಗವಾರ ಮೆಟ್ರೋ ನಿಲ್ದಾಣದ ಮೇಲ್ಭಾಗದ 6 ಎಕರೆಯಲ್ಲಿ 4 ಅಂತಸ್ತಿನ ಕಟ್ಟಡ ತಲೆಎತ್ತಲಿದ್ದು, ಬಿಎಂಆರ್‌ಸಿಎಲ್‌ಗೆ ಆದಾಯ ತಂದುಕೊಡುವ ಹೊಸ ಮೂಲವಾಗಲಿದೆ.ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ನಾಗವಾರ ಮೆಟ್ರೋ ನಿಲ್ದಾಣದ ಮೇಲ್ಭಾಗದ ಆರು ಎಕರೆಯಲ್ಲಿ ಬೃಹತ್ ವಾಣಿಜ್ಯ ಸಂಕಿರ್ಣವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ. ಈ ಸಂಬಂಧ ಬಿಎಂಆರ್‌ಸಿಎಲ್ ಗುತ್ತಿಗೆ ಕಂಪನಿಗಳಿಂದ ಆಸಕ್ತಿ ಅಭಿವ್ಯಕ್ತಿ ಅರ್ಜಿ (ಇಒಐ) ಆಹ್ವಾನಿಸಿದ್ದು, ಡಿ.15ರೊಳಗೆ ಸಲ್ಲಿಸುವಂತೆ ತಿಳಿಸಿದೆ.
ಒಟ್ಟಾರೆ 23,392.24 ಚ.ಮೀ. (5.7 acres) ಜಾಗದಲ್ಲಿ ನಾಲ್ಕು ಅಂತಸ್ತಿನ ನಿರ್ಮಿಸಲಾಗುವುದು. ‘ಎ’ ದರ್ಜೆಯ ಅಂದರೆ ಕಾರ್ಪೋರೆಟ್ ದರ್ಜೆಯ ಕಚೇರಿಗಳಿಗೆ, ಶಾಪಿಂಗ್ ಮಾಲ್ ರೀತಿಯ ವಹಿವಾಟು ಉದ್ದೇಶಕ್ಕೆ ಕಟ್ಟಡವನ್ನು ನೀಡಲಾಗುವುದು. ಬಿಎಂಆರ್‌ಸಿಎಲ್ ವಿವಿಧ ಮೂಲಗಳಿಂದ ಶೇ.15ರಷ್ಟು ಆದಾಯ ಹೆಚ್ಚಿಸಲು ಯೋಜಿಸಿಕೊಂಡಿದೆ. ಬಿಎಂಆರ್‌ಸಿಎಲ್‌ಗೆ ಮೆಟ್ರೋ ರೈಲು ಕಾರ್ಯಾಚರಣೆ, ಜಾಹೀರಾತು, ಪಾರ್ಕಿಂಗ್ ಹೊರತುಪಡಿಸಿ ಹೆಚ್ಚಿನ ಆದಾಯ ಕಂಡುಕೊಳ್ಳಲು ವಾಣಿಜ್ಯ ಸಂಕಿರ್ಣದಿಂದ ಸಾಧ್ಯವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.ಮೇಲೆ ನಿರ್ಮಾಣವಾಗುವ ವಾಣಿಜ್ಯ ಸಂಕಿರ್ಣಕ್ಕೆ ಮೆಟ್ರೋ ಕಾನ್‌ಕಾರ್ಸ್, ಪ್ಲಾಟ್‌ಫಾರ್ಮ್ ಹಂತದಿಂದ ಲಿಫ್ಟ್, ಎಸ್ಕಲೇಟರ್ ಸಂಪರ್ಕ ವ್ಯವಸ್ಥೆ ಇರಲಿದೆ. ಇದರಿಂದ ನಿಲ್ದಾಣದ ಮೂಲಕ ನೇರವಾಗಿ ಸಂಕಿರ್ಣಕ್ಕೆ ತೆರಳಲು ಅವಕಾಶ ಇರಲಿದೆ ಎಂದು ವಿವರಿಸಿದರು.
ಮುಂದಿನ 2026ರ ಡಿಸೆಂಬರ್ ವೇಳೆಗೆ ನಾಗವಾರ ಮೆಟ್ರೋ ನಿಲ್ದಾಣ ತೆರೆಯಲು ಉದ್ದೇಶಿಸಲಾಗಿದೆ. ಇದು ಎಂಬೆಸ್ಸೆ ಬ್ಯುಸಿನೆಸ್ ಪಾರ್ಕ್, ಕಾರ್ಲೆ ಟೌನ್ ಸೆಂಟರ್ ಸೇರಿ ಇತರೆ ಟೆಕ್ ಸೆಂಟರ್‌ಗಳಿಗೆ ಸಮೀಪವಿದೆ. ಇದಲ್ಲದೆ ನಾಗವಾರ ಮೆಟ್ರೋ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗಕ್ಕೆ ಇಂಟರ್ ಚೇಂಜ್ ಆಗಿಯೂ (ಎಲಿವೆಟೆಡ್) ಕಾರ್ಯ ನಿರ್ವಹಿಸಲಿದೆ. ಈ ಮಾರ್ಗ 2027ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.ಮೆಟ್ರೋ ಭೂಗತ ನಿಲ್ದಾಣದ ಪಕ್ಕದಲ್ಲೇ 3,225.73 ಚದರ ಮೀಟರ್ ಬಹು-ಹಂತದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋಗೆ ಬರುವವರು ಮತ್ತು ವಾಣಿಜ್ಯ ಉದ್ದೇಶಗಳಿಗೆ ಬರುವವರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪಾರ್ಕಿಂಗ್ ಗೆ ಅವಕಾಶ ನೀಡಲಾಗಿದೆ.ಬಿಎಂಆರ್‌ಸಿಎಲ್ ಕೆ.ಆರ್. ಪುರಂನಲ್ಲಿ 1.66 ಎಕರೆ ಜಾಗದಲ್ಲಿ ನೆಲಮಾಳಿಗೆಯ ಪಾರ್ಕಿಂಗ್ ಸೌಲಭ್ಯ ಸಹಿತ 11 ಅಂತಸ್ತಿನ ವಾಣಿಜ್ಯ ಕಟ್ಟಡ, ಮೆಜೆಸ್ಟಿಕ್‌ನಲ್ಲೂ ವಾಣಿಜ್ಯ ಸ್ಥಳ ಮತ್ತು ನಿಲ್ದಾಣದ ಮೇಲೆ ದೊಡ್ಡ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವ ಯೋಜನೆ ಘೋಷಿಸಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))