ಮೆಟ್ರೋ ರೈಲಿನ ಹಳಿಗೆ ಜಿಗಿದು ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆಟ್ರೋ ರೈಲಿನ ಹಳಿಗೆ ಜಿಗಿದು ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.ದೊಡ್ಡಬೆಲೆ ನಿವಾಸಿ ಶಾಂತಗೌಡ ಪೊಲೀಸ್ ಪಾಟೀಲ್ (38) ಮೃತ ದುರ್ದೈವಿ. ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 8.15 ಗಂಟೆಗೆ ರೈಲು ಆಗಮಿಸುತ್ತಿದ್ದಂತೆ ಏಕಾಏಕಿ ಹಳಿಗೆ ಜಿಗಿದು ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಶಾಂತಗೌಡ ಪಾಟೀಲ್ ಉದ್ಯೋಗದಲ್ಲಿದ್ದರು. ತಮ್ಮೂರಿನಲ್ಲೇ ಪತ್ನಿ ಹಾಗೂ ಮಗುವನ್ನು ಬಿಟ್ಟಿದ್ದ ಅವರು, ದೊಡ್ಡಬೆಲೆ ಸಮೀಪ ತಮ್ಮ ಸ್ನೇಹಿತನ ಮನೆಯಲ್ಲಿ ನೆಲೆಸಿದ್ದರು. ಇದಕ್ಕೂ ಮೊದಲು ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದ ಪಾಟೀಲ್ ಅವರು, ಅಲ್ಲಿ ಕೆಲಸ ಕಳೆದುಕೊಂಡು ಒಂದು ವರ್ಷ ಉದ್ಯೋಗವಿಲ್ಲದೆ ಮನೆಯಲ್ಲಿದ್ದರು. ಇದರಿಂದ ಪಾಟೀಲ್ ತೀವ್ರ ಖಿನ್ನತೆಗೊಳಗಾಗಿದ್ದರು. ಬಳಿಕ ಬಿಡದಿಯಲ್ಲಿ ಕೆಲಸ ಸಿಕ್ಕಿದ ಬಳಿಕ ಬೆಂಗಳೂರಿಗೆ ಅವರು ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷಗಳಿಂದ ತಮ್ಮ ಜೀವನದಲ್ಲಿ ಉಂಟಾದ ಅನಿರೀಕ್ಷಿತ ಬೆಳವಣಿಗೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು. ಈ ಯಾತನೆಯಲ್ಲೇ ಮೆಟ್ರೋ ರೈಲಿಗೆ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಚಾರ ಸ್ಥಗಿತ:
ಯುವಕನ ಆತ್ಮಹತ್ಯೆ ಘಟನೆ ಹಿನ್ನೆಲೆಯಲ್ಲಿ ಒಂದು ಮುಕ್ಕಾಲು ಗಂಟೆ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ನಂತರ ಮೃತದೇಹವನ್ನು ಹಳಿಯಿಂದ ಹೊರತೆಗೆದ ಮೇಲೆ ಅಂದರೆ 9.40 ರ ಹೊತ್ತಿಗೆ ಸಂಚಾರ ಪುನರಾರಂಭಗೊಂಡಿತು.