ರಾಮನಗರ: ಬೆಂಗಳೂರು ನಗರಕ್ಕಿಂತಲೂ ಬಿಡದಿ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು

ರಾಮನಗರ: ಬೆಂಗಳೂರು ನಗರಕ್ಕಿಂತಲೂ ಬಿಡದಿ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಬಿಡದಿ ಪುರಸಭೆ ಕಾರ್ಯಾಲಯ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಡದಿ ಕೈಗಾರಿಕಾ ಪ್ರದೇಶ ಜಾಗತಿಕ ಮಟ್ಟದ ಕೈಗಾರಿಕೆಗಳನ್ನು ಹೊಂದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ಬಳಿಕ ಕೈಗಾರಿಕಾ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದೆ. ಈಗ ಮೆಟ್ರೋ ಜಾಲ ವಿಸ್ತರಣೆಯಾದಲ್ಲಿ ಬಿಡದಿ ಪಟ್ಟಣ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಮೆಟ್ರೋ ಜಾಲವನ್ನು ಬಿಡದಿವರೆಗೂ ವಿಸ್ತರಿಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಪರಿಶ್ರಮದಿಂದಾಗಿ ಬಿಡದಿ ಗ್ರಾಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿತು. ಈಗ ಬಿಡದಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದ್ದೇವೆ. ಬಿಡದಿ ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು ಗಮನದಲ್ಲಿಟ್ಟುಕೊಂಡು ಸುಮಾರು 8 ರಿಂದ 10 ಕೋಟಿ ವೆಚ್ಚದಲ್ಲಿ ಪುರಸಭೆ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸುಸಜ್ಜಿತ ಕ್ರೀಡಾಂಗಣ:

ಈ ಭಾಗದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ 8 ರಿಂದ 10 ಎಕರೆ ಜಾಗ ಗುರುತಿಸಿದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿಕೊಡಲು ಟೊಯೋಟಾ ಕಂಪನಿ ಸ್ಪಂದಿಸಿದೆ. ಕ್ರೀಡಾಂಗಣಕ್ಕೆ ರೇಷ್ಮೆ ಇಲಾಖೆಗೆ ಸೇರಿದ ಜಾಗವನ್ನು ಹಸ್ತಾಂತರ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ರೇಷ್ಮೆ ಸಚಿವ ವೆಂಕಟೇಶ್ ಅವರೊಂದಿಗೆ ಸಭೆ ನಡೆಸಿ ಕ್ರಮ ವಹಿಸಬೇಕು. ನಲ್ಲಿಗುಡ್ಡೆಕೆರೆ ಪ್ರವಾಸಿ ತಾಣ ಮಾಡಲು ಈಗಷ್ಟೇ ಜಲಸಾಹಸ ಕ್ರೀಡೆಗಳಿಗೆ ಚಾಲನೆ ನೀಡಿದ್ದೇವೆ. ಕೆರೆಯಲ್ಲಿ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಬಿಎಂಐಸಿಪಿ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 10 ಕೋಟಿ ಮಂಜೂರು ಮಾಡಿದೆ ಎಂದು ಹೇಳಿದರು.

ಬಿಡದಿ ಭವಿಷ್ಯದ ಬೆಂಗಳೂರು:

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಪುರಸಭೆ ಕಚೇರಿಗೆ ಇದು ಸೂಕ್ತ ಸ್ಥಳವಾಗಿದೆ. ಭವಿಷ್ಯದಲ್ಲಿ ಬಿಡದಿ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆಗಳನ್ನು ಮೀರಿ ವೇಗವಾಗಿ ಬೆಳೆಯಲಿದೆ. ಬಿಡದಿ ಪುರಸಭೆ ಭವಿಷ್ಯದ ಬೆಂಗಳೂರು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಶಾಸಕ ಬಾಲಕೃಷ್ಣ ಬಿಡದಿ ಪಟ್ಟಣದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿಯೇ ಪಟ್ಟಣದ ಅಭಿವೃದ್ಧಿ ಜೊತೆಗೆ ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಪುರಸಭೆ ಸಿಬ್ಬಂದಿಗಳಾದ ಚಲಪತಿ, ಎಂ.ಮೀನಾಕ್ಷಿ, ಶ್ಯಾಮ್, ಶಿಲ್ಪಾ ಅವರನ್ನು ಗೌರವಿಸಲಾಯಿತು. 2025-26 ಸಾಲಿನ ಶೇ.5ರ ಅನುದಾನದಡಿ ವಿಕಲಚೇತನರಿಗೆ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 50 ಸಾವಿರ ಜೀವ ವಿಮಾ ಬಾಂಡ್ ಗಳನ್ನು ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ಯೋಜನಾ ಪ್ರಾಧಿಕಾರದ ನಿರ್ದೇಶಕ ಶೇಖರ್, ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಉಪಾಧ್ಯಕ್ಷೆ ಆಯಿಷಾ ಖಲೀಲ್, ವಿಪಕ್ಷ ನಾಯಕ ಸಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಮುಖ್ಯಾಧಿಕಾರಿ ಮೀನಾಕ್ಷಿ ಉಪಸ್ಥಿತರಿದ್ದರು.

18ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.