ಕನ್ನಡಪ್ರಭ ವಾರ್ತೆ ಬೆಂಗಳೂರು
ತನಗೆ ಸಂಬಳ ಕೊಡಲಿಲ್ಲ ಎಂದು ಕೋಪಗೊಂಡು ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆ ರೆಸ್ಟೋರೆಂಟ್ ಮಾಜಿ ಕೆಲಸಗಾರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.ಲಿಂಗರಾಜಪುರದ ನಿವಾಸಿ ವೇಲು ಮುರುಗನ್ ಬಂಧಿತನಾಗಿದ್ದು, ಮಹದೇವಪುರದ ಫಸ್ತಾ ಸ್ಟ್ರೀಟ್ ರೆಸ್ಟೋರೆಂಟ್‌ಗೆ ತನ್ನ ಮೊಬೈಲ್‌ನಿಂದ ಬುಧವಾರ ರಾತ್ರಿ ಕರೆ ಮಾಡಿ ಬಾಂಬ್ ಸ್ಫೋಟಿಸುವುದಾಗಿ ವೇಲು ಬೆದರಿಸಿದ್ದ. ಈ ಬಗ್ಗೆ ರೆಸ್ಟೋರೆಂಟ್ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಮಹದೇವಪುರ ಠಾಣೆ ಪೊಲೀಸರು, ಮೊಬೈಲ್ ಕರೆ ಮಾಹಿತಿ ಆಧರಿಸಿ ರಾತ್ರಿಯೇ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.
ಆರು ತಿಂಗಳು ಇಂದಿರಾನಗರದ ಫಸ್ತಾ ಸ್ಟ್ರೀಟ್ ರೆಸ್ಟೋರೆಂಟ್‌ನ ಬ್ರ್ಯಾಂಚ್‌ನಲ್ಲಿ ವೇಲು ಕೆಲಸ ಮಾಡಿದ್ದ. ಆದರೆ ಆತ ವಿಪರೀತ ಮದ್ಯ ವ್ಯಸನಿ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿತ್ತು. ಕುಡಿತದ ಕಾರಣಕ್ಕೆ ಸಂಬಳ ಸಹ ಸಿಕ್ಕಿರಲಿಲ್ಲ. ಬಾಕಿ ವೇತನ ವಿಚಾರವಾಗಿ ಬುಧವಾರ ಸಹ ರೆಸ್ಟೋರೆಂಟ್ ವ್ಯವಸ್ಥಾಪಕರನ್ನು ಭೇಟಿಯಾಗಿ ಆತ ಒತ್ತಾಯಿಸಿದ್ದ. ಹೀಗಿದ್ದರೂ ಆತನಿಗೆ ಸಂಬಳವನ್ನು ರಸ್ಟೋರೆಂಟ್ ವ್ಯವಸ್ಥಾಪಕ ಕೊಟ್ಟಿರಲಿಲ್ಲ. ಇದರಿಂದ ಕೆರಳಿದ ವೇಲು, ಬುಧವಾರ ರಾತ್ರಿ ಕಂಠಮಟ್ಟ ಮದ್ಯ ಸೇವಿಸಿ ಮಹದೇವಪುರದ ನಿಮ್ಮ ರೆಸ್ಟೋರೆಂಟ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.