ಬುಕಿಂಗ್‌ ರದ್ದು ಮಾಡಿದ ಮಹಿಳೆ ಮೇಲೆ ರ್ಯಾಪಿಡೋ ಚಾಲಕ ಹಲ್ಲೆ

KannadaprabhaNewsNetwork | Updated : Jan 23 2024, 05:02 PM IST

ಸಾರಾಂಶ

ತಡವಾಗಿ ಬಂದಿದ್ದಕ್ಕೆ ಬುಕಿಂಗ್‌ ರದ್ದು ಮಾಡಿದ ಮಹಿಳೆ ಮೇಲೆ ರ್ಯಾಪಿಡೋ ಆಟೋ ಚಾಲಕ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಕಿಂಗ್‌ ರದ್ದು ಮಾಡಿದ್ದಕ್ಕೆ ಕೋಪಗೊಂಡು ಮಹಿಳಾ ಟೆಕಿ ಮೇಲೆ ರಸ್ತೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಪರಾರಿ ಆಗಿದ್ದ ರಾಪಿಡೋ ಆಟೋ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರಿನ ಗಂಗಾವರಪ್ರಸಾದ್‌(30) ಬಂಧಿತ. ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಬೆಳ್ಳಂದೂರಿನ ಗ್ರೀನ್‌ಲೇನ್‌ ಲೇಔಟ್‌ನಲ್ಲಿ ಈ ಘಟನೆ ನಡೆದಿತ್ತು. 

ಈ ಸಂಬಂಧ ಹಲ್ಲೆಗೆ ಒಳಗಾದ ಮಹಿಳಾ ಟೆಕಿಯ ಪರವಾಗಿ ಸ್ನೇಹಿತ ರಾಜೇಶ್‌ ಪ್ರಧಾನ್‌ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ನಗರ ಪೊಲೀಸರಿಗೆ ದೂರು ನೀಡಿದ್ದರು. 

ಇದರ ಬೆನ್ನಲ್ಲೇ ಬೆಳ್ಳಂದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಏನಿದು ಘಟನೆ?:
ಒಡಿಸ್ಸಾ ಮೂಲದ ಯುವತಿ ನಗರದ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಳ್ಳಂದೂರಿನ ಗ್ರೀನ್‌ಲೇನ್‌ ಲೇಔಟ್‌ನ ಪೇಯಿಂಗ್‌ ಗೆಸ್ಟ್‌(ಪಿಜಿ)ನಲ್ಲಿ ಉಳಿದುಕೊಂಡಿದ್ದಾರೆ. 

ಶನಿವಾರ ಬೆಳಗ್ಗೆ ಗ್ರೀನ್‌ಲೇನ್‌ ಲೇಔಟ್‌ನಿಂದ ವೈಟ್‌ಫೀಲ್ಡ್‌ನ ತುರುಬರಹಳ್ಳಿಗೆ ತೆರಳಲು ರಾಪಿಡೋ ಆಟೋ ಬುಕ್‌ ಮಾಡಿದ್ದರು. ಆಟೋ ಚಾಲಕ ಗಂಗಾವರಪ್ರಸಾದ್‌ ನಿಗದಿತ ಸ್ಥಳಕ್ಕೆ ಬಂದಿದ್ದಾನೆ. 

ಈ ವೇಳೆ ಆ ಮಹಿಳಾ ಟೆಕಿ ಆಟೋ ಬರುವುದು ವಿಳಂಬವಾಗಿದೆ ಎಂಬ ಕಾರಣ ನೀಡಿ ಬುಕಿಂಗ್‌ ರದ್ದುಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ಗಂಗಾವರಪ್ರಸಾದ್‌ ಮಹಿಳಾ ಟೆಕಿಯನ್ನು ನಿಂದಿಸಿ ಕೈಗಳಿಂದ ಹಲ್ಲೆ ಮಾಡಿ ರಸ್ತೆಗೆ ತಳ್ಳಿ ಪರಾರಿಯಾಗಿದ್ದ.

ಮಹಿಳಾ ಟೆಕ್ಕಿ ತುರ್ತಾಗಿ ರೈಲಿನಲ್ಲಿ ಊರಿಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಘಟನೆ ಸಂಬಂಧ ದೂರು ನೀಡಿಲ್ಲ. 

ಆದರೆ, ಆಕೆಯ ಸ್ನೇಹಿತ ರಾಜೇಶ್‌ ಪ್ರಧಾನ್‌ ಎಂಬುವವರು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. 

ಇದರ ಬೆನ್ನಲ್ಲೇ ಬೆಳ್ಳಂದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.ಲಗೇಜ್‌ ಎತ್ತಲ್ಲ ಅಂದಿದ್ದಕ್ಕೆ

ನಿಂದಿಸಿದಳು: ಚಾಲಕ
‘ಆಟೋ ಬಂದಾಗ ಮಹಿಳಾ ಟೆಕಿ ಲಗೇಜ್‌ ಎತ್ತಿ ಆಟೋ ಒಳಗೆ ಇಡುವಂತೆ ಹೇಳಿದರು. ನನಗೆ ಆರೋಗ್ಯ ಸರಿಯಲ್ಲ. ನೀವೇ ಎತ್ತಿ ಇರಿಸಿಕೊಳ್ಳಿ ಎಂದು ಹೇಳಿದೆ. 

ಅಷ್ಟಕ್ಕೆ ಆಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಅಂಗಿ ಹಿಡಿದು ಎಳೆದಾಡಿದರು. ಈ ವೇಳೆ ನಾನು ಆಕೆಯನ್ನು ತಳ್ಳಿದೆ’ ಎಂದು ಬಂಧಿತ ಆಟೋ ಚಾಲಕ ಗಂಗಾವರಪ್ರಸಾದ್‌ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

Share this article