ರಮೇಶ್ ಅರವಿಂದ್ ಅವರಿಗೆ ಕಲಾಭೂಷಣ ಪ್ರಶಸ್ತಿ ಗೌರವ

KannadaprabhaNewsNetwork | Published : Dec 15, 2023 1:31 AM

ಸಾರಾಂಶ

ರಮೇಶ್ ಅರವಿಂದ್ ಅವರಿಗೆ ಕರ್ನಾಟಕ ಕಲಾಭೂಷಣ ಪ್ರಶಸ್ತಿ ಗೌರವ ಸಂದಿದೆ. ಡಿ.14ರಿಂದ ಡಿ.17ರವರೆಗೆ ಬೆಂಗಳೂರಿನ ಕೆಂಪೇಗೌಡ ಮೈದಾನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ನಡೆಯುವ ‘ಕರುನಾಡ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಮೇಶ್ ಜೊತೆ ಮಾತುಕತೆ.

- ಪ್ರಿಯಾ ಕೆರ್ವಾಶೆ

- ಕರ್ನಾಟಕ ಕಲಾಭೂಷಣ ಪ್ರಶಸ್ತಿ ಬಗ್ಗೆ?

ಖುಷಿ ಇದೆ. ಪ್ರಶಸ್ತಿಯ ಜೊತೆಗೆ ಅದನ್ನು ಪ್ರದಾನ ಮಾಡುತ್ತಿರುವ ಜಾಗವೂ ನನ್ನ ಮನಃಪಟಲದಲ್ಲಿ ಬೇರೆ ರೀತಿ ದಾಖಲಾಗಿದೆ. ದಕ್ಷಿಣ ಬೆಂಗಳೂರು, ಶ್ರೀನಿವಾಸ ನಗರದ ಕೆಂಪೇಗೌಡ ಮೈದಾನ ಸುತ್ತಮುತ್ತ ನನ್ನ ಬಾಲ್ಯದ ನೆನಪುಗಳಿವೆ. 3ಬಿ ಬಸ್‌ನಲ್ಲಿ ಈ ಜಾಗದಲ್ಲೆಲ್ಲ ಓಡಾಡುತ್ತಿದ್ದೆವು. ಅದೇ ಜಾಗದಲ್ಲಿ ಪ್ರಶಸ್ತಿ ಸಿಗುತ್ತಿರುವುದು ಒಂದು ರೀತಿಯಲ್ಲಿ ಜಗತ್ತೆಲ್ಲ ಸುತ್ತಿ ಮನೆ ಊಟ ಮಾಡುವಂಥಾ ಅನುಭವ ನೀಡುತ್ತಿದೆ. - ಸಿನಿಮಾ ಜರ್ನಿಯಲ್ಲಿ ಕಂಡುಕೊಂಡ ಕೆಲವು ಸತ್ಯಗಳು?ನಾನು ಚಿತ್ರರಂಗದ ಹಿನ್ನೆಲೆ ಇರುವವನಲ್ಲ. ಆದರೆ ಈ ಕ್ಷೇತ್ರದಲ್ಲಿ ಬಹಳ ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದೇನೆ. ಸಿನಿಮಾ ಇರಬಹುದು, ಯಾವುದೇ ಕ್ಷೇತ್ರ ಇರಬಹುದು, ನಮ್ಮ ಕೆಲಸವನ್ನು ಸಿನ್ಸಿಯರ್ ಆಗಿ ಮಾಡುತ್ತ ಬಂದರೆ ಖಂಡಿತಾ ಸಕ್ಸಸ್ ಇದೆ. ಇದು ನನ್ನ ಅನುಭವದ ಮಾತು.

- ಕೆಡಿ ಸಿನಿಮಾ ಶೂಟಿಂಗ್‌ನಲ್ಲಿರೋ ಹಾಗಿದೆ?ಹೌದು. ಧ್ರುವ ಸರ್ಜಾ ಹಾಗೂ ನನ್ನ ಭಾಗದ ಶೂಟಿಂಗ್ ಸದ್ಯ ನಡೆಯುತ್ತಿದೆ. ಜನವರಿ 14ರವರೆಗೆ ಈ ಚಿತ್ರದ ಶೂಟ್‌ನಲ್ಲಿರುತ್ತೇನೆ. ಅಧರ್ಮವನ್ನು ಕಂಡರೆ ಆಗದ ಧರ್ಮನ ಪಾತ್ರ ನನ್ನದು. ಬಹಳ ವಿಭಿನ್ನ ಪಾತ್ರ. ಇದಾಗಿ ಆಕಾಶ್ ಶ್ರೀವತ್ಸ ಜೊತೆಗೆ ‘ದೈಜಿ’ ಸಿನಿಮಾ ಶೂಟಿಂಗ್. ನೀವು ಹೆಂಗಸರ ಮೇಲೆ ದೆವ್ವ ಬರೋದು ಕೇಳಿರಬಹುದು, ಇದು ಗಂಡಸರ ಮೇಲೆ ದೆವ್ವ ಬರೋ ಇಂಟರೆಸ್ಟಿಂಗ್ ಕಥೆ. ಆಮೇಲೆ ಗಣೇಶ್ ಹಾಗೂ ನನ್ನ ಕಾಂಬಿನೇಶನ್‌ನಲ್ಲಿ ವಿಖ್ಯಾತ್ ಅವರ ಸಿನಿಮಾ. ಅದಾಗಿ ನಿರ್ದೇಶನದ ಕಡೆ ಹೋಗುವ ಯೋಚನೆ.- ನಿಮ್ಮ ನಿರ್ದೇಶನದ ಚಿತ್ರಕ್ಕೆ ಕಥೆ ಫೈನಲ್ ಆಗಿದೆಯಾ?ಎರಡು ಮೂರು ಸ್ಕ್ರಿಪ್ಟ್ ತಲೆಯಲ್ಲಿದೆ. ನನ್ನದೊಂದು ವಿಚಿತ್ರ ಅಭ್ಯಾಸ ಇದೆ. ಕಥೆಯ ಒನ್‌ಲೈನ್‌ ಅಥವಾ ಐಡಿಯಾ ತಲೆಗೆ ಬಂದರೆ ಅದರ ಸಂಪೂರ್ಣ ಸ್ಕ್ರಿಪ್ಟ್‌ ಅನ್ನು ಸಿದ್ಧ ಮಾಡಿ ಇಡುತ್ತೀನಿ. ಕೆಲವು ಕಥೆಗಳು ಕಾಲ ಕ್ರಮೇಣ ಮರೆಯಾಗುತ್ತವೆ. ಕೆಲವು ಹತ್ತು ವರ್ಷದ ನಂತರವೂ ಮನಸ್ಸಲ್ಲಿ ಉಳಿಯುತ್ತವೆ. ಅಂಥಾ ಕಥೆಯೊಂದನ್ನು ಆರಿಸಿ ನಿರ್ದೇಶನ ಮಾಡುತ್ತೇನೆ. ಆದರೆ ಈ ಬಗ್ಗೆ ಮುಂದೆ ವಿವರವಾಗಿ ಮಾತನಾಡೋಣ.- ಧಾರಾವಾಹಿ ನಿರ್ಮಾಣಕ್ಕೂ ಇಳಿದಿದ್ದೀರಿ?ಹೌದು ‘ಆಸೆ’, ‘ನೀನಾದೆ ನಾ’ ಎಂಬೆರಡು ಧಾರಾವಾಹಿಗಳ ನಿರ್ಮಾಣಕ್ಕಿಳಿದಿದ್ದೇನೆ. ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

Share this article