ಹಾಡಿನ ಸಂಗೀತ ಬ್ಯಾಟ್ಸ್‌ಮನ್‌ನಂತೆ, ಹಿನ್ನೆಲೆ ಸಂಗೀತ ಬೌಲರ್‌ ಇದ್ದಂಗೆ

Published : Jun 02, 2025, 04:38 PM IST
Ajaneesh Loknath

ಸಾರಾಂಶ

ಕನ್ನಡದ ಜತೆಗೆ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅಜನೀಶ್‌ ಬಿ ಲೋಕನಾಥ್‌, ಈಗ ಮಲಯಾಳಂ ಚಿತ್ರರಂಗಕ್ಕೂ ಪ್ರವೇಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಹುಭಾಷಾ ಸಂಗೀತಗಾರನ ಮಾತುಗಳು ಇಲ್ಲಿವೆ.

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸಂದರ್ಶನ ಹಾಡಿನ ಸಂಗೀತ ಬ್ಯಾಟ್ಸ್‌ಮನ್‌ನಂತೆ, ಹಿನ್ನೆಲೆ ಸಂಗೀತ ಬೌಲರ್‌ ಇದ್ದಂಗೆ ಕನ್ನಡದ ಜತೆಗೆ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅಜನೀಶ್‌ ಬಿ ಲೋಕನಾಥ್‌, ಈಗ ಮಲಯಾಳಂ ಚಿತ್ರರಂಗಕ್ಕೂ ಪ್ರವೇಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಹುಭಾಷಾ ಸಂಗೀತಗಾರನ ಮಾತುಗಳು ಇಲ್ಲಿವೆ. 

ಆರ್ . ಕೇಶವಮೂರ್ತಿ

ಕನ್ನಡದಲ್ಲೇ ಕೈತುಂಬ ಕೆಲಸ ಇದ್ದರ ಮಲಯಾಳಂ ಚಿತ್ರ ಒಪ್ಪಿಕೊಂಡಿದ್ದೀರಲ್ಲ?

ನನ್ನ ಕೆಲಸನೇ ಸಂಗೀತ. ಹೀಗಾಗಿ ಇದು ಇನ್ನೊಂದು ಅವಕಾಶ ಅಂತ ಒಪ್ಪಿಕೊಂಡೆ. ಒಂದು ಟೈಮ್ ಇತ್ತು, ಒಂದಾದರೂ ಸಿನಿಮಾ ನನಗೆ ಸಿಗಬೇಕು ಅಂತ ಕಾಯುತ್ತಿದ್ದ ದಿನಗಳು. ಈಗ ಕೆಲಸ ಸಿಗುತ್ತಿದೆ. ಹಂಸಲೇಖ ಅವರು 10 ವರ್ಷದಲ್ಲಿ 100ಕ್ಕಿಂತ ಮೇಲೆ ಸಿನಿಮಾ ಮಾಡಿಬಿಟ್ಟಿದ್ದಾರೆ. 

ಮಲಯಾಳಂ ಚಿತ್ರ ಯಾವ ರೀತಿಯದ್ದು?

‘ಕಾಟ್ಟಾಳನ್‌’ ಅನ್ನುವ ಒಳ್ಳೆ ಕತೆ ಇರುವ ಥ್ರಿಲ್ಲರ್‌ ಸಿನಿಮಾ. ಬಹುತೇಕ ಕತೆ ಕಾಡಿನ ಒಳಗೆ ನಡೆಯುತ್ತದೆ. ತುಂಬಾ ಸಿಂಪಲ್ ಆಗಿರುವ ಕತೆಯಾದರೂ ತೆರೆ ಮೇಲೆ ತುಂಬಾ ಚೆನ್ನಾಗಿ ಬರುತ್ತದೆಂಬ ನಂಬಿಕೆ ಇದೆ. ‘ಮಾರ್ಕೋ’ದಂತಹ ಚಿತ್ರ ನಿರ್ಮಿಸಿದ ದೊಡ್ಡ ಪ್ರೊಡಕ್ಷನ್‌ ಸಿನಿಮಾ. 

ಸಂಗೀತಗಾರನಾಗಿ ನಿಮಗೆ ಈ ಚಿತ್ರ ಕನೆಕ್ಟ್‌ ಆಗಿದ್ದು ಹೇಗೆ?

ನಿರ್ದೇಶಕರ ಸೆನ್ಸಿಬಿಲಿಟಿ ನನಗೆ ಇಷ್ಟ. ಅವರು ಕತೆ ಹೇಳುವ ರೀತಿ, ಸೀನ್‌ಗಳನ್ನು ವಿವರಿಸುವ ರೀತಿ ಇಷ್ಟವಾಯಿತು. ಸನ್ನಿವೇಶಗಳು ತುಂಬಾ ಚೆನ್ನಾಗಿರುತ್ತದೆ. ತುಂಬಾ ಕ್ಲ್ಯಾರಿಟಿ ಇದೆ. ಹೀಗಾಗಿದ್ದಾಗ ಸಂಗೀತಗಾರನಾಗಿ ನನ್ನ ಕೆಲಸಕ್ಕೆ ತುಂಬಾ ಜಾಗ ಇದೆ. ನಿಮ್ಮ ಯಾವ ಸಿನಿಮಾ ನೋಡಿ ಮಲಯಾಳಂ ಚಿತ್ರತಂಡ ಅಹ್ವಾನ ನೀಡಿದ್ದು? ಒಂದು ಸಿನಿಮಾ ಅಂತೇನು ಇಲ್ಲ. ಯಾಕೆಂದರೆ ಈ ತಂಡ ನನ್ನ ಸಂಪರ್ಕಿಸಿದಾಗ ನನ್ನ ಎಲ್ಲಾ ಸಿನಿಮಾಗಳ ಬಗ್ಗೆಯೂ ಮಾತನಾಡಿದರು. ‘ಉಳಿದವರು ಕಂಡಂತೆ’, ‘ದಿಯಾ’, ‘ಬೆಲ್ ಬಾಟಮ್’, ‘ವಿಕ್ರಾಂತ್ ರೋಣ’, ‘ಕಾಂತಾರ’ ಹೀಗೆ ನೀವು ಕೆಲಸ ಮಾಡಿರುವ ಚಿತ್ರಗಳು ಒಂದೇ ರೀತಿಯಾಗಿಲ್ಲ. ಲವ್, ಎಪಿಕ್, ಮಾಸ್, ರೆಟ್ರೋ, ಡಿವೋಷನಲ್‌, ಕ್ರೈಮ್‌, ಥ್ರಿಲ್ಲರ್‌ ಹೀಗೆ ಎಲ್ಲಾ ಜಾನರ್‌ ಕತೆಗಳಿಗೂ ಸಂಗೀತ ನೀಡಿದ್ದೀರಿ ಅಂತ ಮೆಚ್ಚಿಕೊಂಡರು.

ಮಲಯಾಳಂ ಭಾಷಿಕರು ಇತರರನ್ನು ಕರೆಸಿಕೊಳ್ಳುವುದು ಅಪರೂಪ ಅಲ್ವಾ? 

ಆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಇತ್ತೀಚಿನ ಜನರೇಷನ್‌ನಲ್ಲಿ ಮಲಯಾಳಂ ಚಿತ್ರರಂಗಕ್ಕೆ ಹೋಗಿರುವ ತಂತ್ರಜ್ಞರು ಎಂದರೆ ನಾನು ಮತ್ತು ರವಿ ಬಸ್ರೂರು ಮಾತ್ರ.

‘ ಕಾಂತಾರ’ದ ಹಾಡನ್ನು ವಿವಾದ ಮಾಡಿದ ಭಾಷೆಗೆ ಹೋಗುತ್ತಿದ್ದೀರಿ? 

ಒಂದು ದೊಡ್ಡ ಡ್ಯಾಮಿನ ಗೇಟ್‌ ತೆಗೆದಾಗ ಒಳ್ಳೆಯ ನೀರಿನ ಜತೆಗೆ ಕಲುಷಿತ ನೀರು ಬರುತ್ತದೆ. ಹೀಗಾಗಿ ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಆದರೆ, ಹಾಡಿನ ಕಾರಣಕ್ಕೆ ಎದ್ದ ಚರ್ಚೆ, ವಾದ, ಅಭಿಪ್ರಾಯಗಳನ್ನು ನಾನು ವಿವಾದ ಅಂತ ನೋಡಲ್ಲ. ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಿತು, ನನ್ನ ಹಾಡು ಮತ್ತಷ್ಟು ಜನಕ್ಕೆ ತಲುಪಿತು ಅಂತಲೇ ನೋಡುತ್ತೇನೆ. ಸಂಗೀತ ಅನ್ನೋದು ಸರಿ-ತಪ್ಪು ಅನ್ನೋದಲ್ಲ. ಇದು ಗಣಿತ ಇದ್ದಂತೆ. ಸಾಲ್ವ್ ಮಾಡಿಕೊಂಡು ಮುಂದಕ್ಕೆ ಹೋಗಬೇಕು.

ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಎರಡಕ್ಕೂ ಬೇರೆ ಬೇರೆ ತಂತ್ರಜ್ಞರು ಕೆಲಸ ಮಾಡುತ್ತಾರಲ್ಲ ಯಾಕೆ? ನಾನು ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಕಂಪೋಸ್‌ ಎರಡೂ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇನೆ. ಬರೀ ಒಂದನ್ನು ಒಪ್ಪಿಕೊಂಡು ನಾನು ಕೆಲಸ ಮಾಡಲ್ಲ. ಆದರೆ, ಕೆಲವು ಷರತ್ತುಗಳೊಂದಿಗೆ ‘ರಂಗಿತರಂಗ’, ‘ರಾಜರಥ’ ಚಿತ್ರಗಳಿಗೆ ಮಾತ್ರ ಹಿನ್ನೆಲೆ ಸಂಗೀತವನ್ನಷ್ಟೇ ಮಾಡಿದ್ದೇನೆ.

ನಿಮ್ಮ ಪ್ರಕಾರ ಹಿನ್ನೆಲೆ ಸಂಗೀತ ಮತ್ತು ಹಾಡಿನ ಸಂಗೀತದ ನಡುವಿನ ವ್ಯತ್ಯಾಸ ಅಥವಾ ಮಹತ್ವ ಏನು? 

ಹಾಡು ಅಂದರೆ ಐದು ನಿಮಿಷ, ಹಿನ್ನೆಲೆ ಸಂಗೀತ ಎರಡೂವರೆ ಗಂಟೆ. ಅಂದರೆ ಸಿನಿಮಾ ಮುಗಿಯುವ ತನಕ. ಥಿಯೇಟರ್‌ ಎಕ್ಸಿಪಿರಿಯೆನ್ಸ್‌ ಕೊಡೋದು, ದೃಶ್ಯಗಳನ್ನ ಪರಿಣಾಮಕಾರಿಯಾಗಿ ನೋಡುಗರಿಗೆ ತಲುಪಿಸೋದು ಹಿನ್ನೆಲೆ ಸಂಗೀತ. ‘ಕಾಂತಾರ’ ಚಿತ್ರದ ಕೊನೆಯ ಇಪ್ಪತ್ತು ನಿಮಿಷ, ನಾವು ನಮ್ಮನ್ನೇ ಮರೆತಿದ್ದು ಹಿನ್ನೆಲೆ ಸಂಗೀತದ ಕಾರಣಕ್ಕೆ ಅಂತ ನೋಡಿದವರು ಹೇಳಿದ್ದಾರೆ. ಒಂದು ರೀತಿಯಲ್ಲಿ ಹಾಡಿನ ಸಂಗೀತ ಅಂದರೆ ಬ್ಯಾಟ್ಸ್‌ಮನ್‌ ಇದ್ದಂತೆ. ಒಂದೇ ಬಾಲ್‌ನಲ್ಲಿ ಔಟೂ ಆಗದುಹುದು. ಆದರೆ, ಹಿನ್ನೆಲೆ ಸಂಗೀತ ಎಂದರೆ ಬೌಲರ್‌ ಇದ್ದಂತೆ. ಹೇಗೆ ಬೌಲಿಂಗ್‌ ಮಾಡಿದರೂ ಆರು ಬಾಲ್‌ ಇದ್ದೇ ಇರುತ್ತದೆ.

ನೀವು ಕಂಡುಕೊಂಡಂತೆ ಸಂಗೀತಕ್ಕಿರುವ ಶಕ್ತಿ ಏನು? ಪ್ರೇಕ್ಷಕ ಥಿಯೇಟರ್‌ಗೆ ಬಂದು ಪರದೆ ಮುಂದೆ ಕೂತು ಸಿನಿಮಾ ನೋಡಲು ಶುರು ಮಾಡಿದಾಗ ಅಲ್ಲಿವರೆಗೂ ಆತನ ಜೀವನದಲ್ಲಿ ಏನೆಲ್ಲ ನಡೆದಿರುತ್ತದೆ ಅದೆಲ್ಲವೂ ಮರೆಸಿ ಆ ಚಿತ್ರ ತನ್ನ ಜತೆಗೆ ಪ್ರೇಕ್ಷಕನನ್ನು ಕರೆದುಕೊಂಡು ಹೋಗುವ ಶಕ್ತಿ ಸಂಗೀತಕ್ಕಿದೆ.

ಆದರೆ, ಇತ್ತೀಚೆಗೆ ಅಬ್ಬರದ ಸಂಗೀತವೇ ಪ್ರಧಾನ ಆಗುತ್ತಿದೆಯಲ್ಲ? 

ಕಾಲಾಯ ತಸ್ಮೈ ನಮಃ. ಅಂದರೆ ಕಾಲಕ್ಕೆ ತಕ್ಕಂತೆ ಸಂಗೀತವೂ ಸಾಗುತ್ತಿದೆ. 70-80-90ರ ದಶಕದಲ್ಲಿ ಮೆಲೋಡಿ ಹಾಡುಗಳು ಹೆಚ್ಚಿದ್ದವು ಅಂತೀರಿ. ಅದು ಅವತ್ತಿನ ಕಾಲ. ಆಗಿನ ಜನರೇಷನ್ ಮತ್ತು ಅವರ ಅಭಿರುಚಿಯನ್ನು ಸಂಗೀತ-ಹಾಡು ಪ್ರತಿನಿಧಿಸುತ್ತದೆ. ಈಗ 4ಜಿ, 5ಜಿ ಕಾಲ. ಸಂಗೀತ ಅಬ್ಬರ ಇದೆ ಅಂದರೆ ಜನ ಕೂಡ ಫಾಸ್ಟ್ ಇದ್ದಾರೆ ಎಂದರ್ಥ. ಯಾರಿಗೂ ಟೈಮ್‌ ಇಲ್ಲ. ನಮ್ಮ ಬದುಕು ವೇಗವಾಗಿ ಹೋಗುತ್ತಿದೆ. ಸಂಗೀತವೂ ಅಷ್ಟೇ.

ಬೇರೆ ಭಾಷೆಗಳ ಕಮರ್ಷಿಯಲ್‌ ಚಿತ್ರಗಳಲ್ಲೂ ಜಾನಪದ ಹಾಡುಗಳಿರುತ್ತವೆ. ಕನ್ನಡದಲ್ಲಿ ಯಾಕಿಲ್ಲ? 

ನಾವು ‘ಬೆಲ್‌ ಬಾಟಮ್‌’ ಚಿತ್ರದಲ್ಲಿ ಸಿದ್ದಪ್ಪಾಜಿ ಹಾಡನ್ನು ತಂದಿದ್ವಿ. ಸಿನಿಮಾಗಳಲ್ಲಿ ನಮ್ಮ ಜನಪದ ಹಾಡುಗಳನ್ನು ಜನಪ್ರಿಯ ಮಾಡಬೇಕು. ತುಂಬಾ ಜವಾಬ್ದಾರಿ ಇರಬೇಕು. ಕಲ್ಚರ್ ಆಗಿ ಬಳಸಬೇಕು. ಒಳ್ಳೆಯ ಉದ್ದೇಶ ಇರಬೇಕು. ಜನಪದ ಅನ್ನೋದು ಮುಗ್ಧತೆಯಲ್ಲಿ ಬಂದಿರುವ ಹಾಡು. ಅದರ ಸ್ವಾದ ಎಲ್ಲರಿಗೂ ಸೇರುವಂತಾಗಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕಿದೆ.

ಈಗ ಸಂಗೀತ ಯಾವ ಟ್ರೆಂಡ್‌ನಲ್ಲಿದೆ? ಸಂಗೀತ ಅನ್ನೋದು ಬದಲಾಗುತ್ತಲೇ ಇತ್ತದೆ. ಆದರೆ, ಏನೇ ಟ್ರೆಂಡ್‌ ಬಂದರೂ ಒಳ್ಳೆಯ ಮೆಲೋಡಿ ಹಾಡುಗಳನ್ನು ಜನ ಯಾವಾಗಲೂ ಕೇಳುತ್ತಾರೆ. ಮೆಲೋಡಿ ನಿರಂತರ. ಹೀಗಾಗಿ ಇಲ್ಲಿ ಟ್ರೆಂಡ್‌ ಅನ್ನೋದಕ್ಕಿಂತ ಯಾವುದು ಗೆಲ್ಲುತ್ತದೋ ಅದು ಸೂಪರ್‌ ಅನಿಸುತ್ತದೆ.

ನಿಮ್ಮ ಮೆಚ್ಚಿನ ಸಂಗೀತ- ಹಿನ್ನೆಲೆ ಸಂಗೀತ ಯಾರದ್ದು? 

ಎ ಆರ್‌ ರೆಹಮಾನ್‌, ಇಳಯರಾಜ, ಸಿ ಅಶ್ವತ್, ಎಲ್ ವೈದ್ಯನಾಥನ್‌ ಹೀಗೆ ನಮ್ಮ ತಂದೆ ಕಾಲದ ಅತ್ಯುತ್ತಮ ಸಂಗೀತಗಾರರ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಕೇಳಿಕೊಂಡು, ಮೆಚ್ಚಿಕೊಂಡು ಬಂದವನು ನಾನು.

ನಿಮ್ಮ ಸಂಗೀತದ ಶಕ್ತಿ ಏನು? ನಿಜವಾಗಲೂ ನನಗೆ ಗೊತ್ತಿಲ್ಲ. ಸಂಗೀತ- ಸಾಧನೆ ಅಂತ ಮಾತಾಡೋಷ್ಟು ಅರ್ಹತೆ ನನಗೆ ಇದಿಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಪ್ರತಿ ದಿನವೂ ಹುಣ್ಣಿಮೆ ಆಗಲ್ಲ. ಅಮಾವಸೆಯೂ ಇರುತ್ತದೆ. ಯಾರಾದರೂ ಗುರುತಿಸಿ, ಇದು ನಿಮ್ಮ ಸಂಗೀತದ ಶಕ್ತಿ ಅಂದರೆ ಖುಷಿ ಪಡುತ್ತೇನೆ ಅಷ್ಟೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌