ಪುಸ್ತಕ ಪರಿಚಯ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಬ್ಯಾಟೆಮರ ಹಾಗೂ ಬಿಂಬದೊಳಗೆ ಬಿಂಬ ಕೃತಿಗಳ ಪರಿಚಯ.

ತೃತೀಯ ಲಿಂಗಿಗಳ ಸಮಗ್ರ ಅಧ್ಯಯನ

ಬಿಂಬದೊಳಗೊಂದು ಬಿಂಬಲೇ: ಡಾ. ರೇಷ್ಮಾ ಉಲ್ಲಾಳ್ಪ್ರ: ನವಕರ್ನಾಟಕ ಪಬ್ಲಿಕೇಶನ್ಸ್, ಬೆಂಗಳೂರು.ದೂ:080-22161900/01/02 ತೃತೀಯ ಲಿಂಗಿಗಳ ಕುರಿತ ಸಂಶೋಧನಾತ್ಮಕ ಪ್ರಬಂಧವಿದು. ಇದರಲ್ಲಿ ಲೇಖಕಿ ಲೈಂಗಿಕ ಅಲ್ಪಸಂಖ್ಯಾತರ ಜೈವಿಕ ಹಿನ್ನೆಲೆ, ಬದುಕಿನ ಆಳ ಅಗಲಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮಗು ಹುಟ್ಟಿದ ತಕ್ಷಣ ಗೊತ್ತು ಮಾಡಿಕೊಳ್ಳುವುದು ಅದರ ಲಿಂಗ. ಅದು ಗಂಡೇ ಹೆಣ್ಣೇ ಎಂದು ಲಿಂಗನಿಷ್ಕರ್ಷೆ ಮಾಡಿ ಅದರಂತೆಯೇ ಅದನ್ನು ಬೆಳೆಸಿ ಅದರ ಜವಾಬ್ದಾರಿಗಳನ್ನು ತಿಳಿಸಿಕೊಡುವುದು ಅನಾದಿ ಕಾಲದಿಂದ ಬಂದ ಪದ್ದತಿ. ಆದರೆ ಕೆಲವು ಮಕ್ಕಳು ಬೆಳೆದಂತೆ ತಮ್ಮ ಲಿಂಗತ್ವದ ಗೊಂದಲದಿಂದ ನರಳುತ್ತಾರೆ. ಇದನ್ನು ಅರಗಿಸಿಕೊಳ್ಳುವುದೂ ಮನೆಯವರಿಗೆ ಕಷ್ಟವಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಅಪಹಾಸ್ಯಕ್ಕೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತದೆ. ಈ ತೃತೀಯ ಲಿಂಗಿಗಳ ಬಗ್ಗೆ ಸಮಾಜಕ್ಕೆ ಇರುವ ಅಸಹ್ಯವನ್ನೂ, ಅಂತರವನ್ನೂ ಹೋಗಲಾಡಿಸಬೇಕೆನ್ನುವ ನಿಟ್ಟಿನಲ್ಲಿ ಈ ಕೃತಿ ಮಹತ್ವದ್ದಾಗಿ ಕಾಣುತ್ತದೆ. ತೃತೀಯ ಲಿಂಗಿಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಲೇಖಕಿ ಈ ಕೃತಿಯಲ್ಲಿ ತೃತೀಯ ಲಿಂಗಿಗಳ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ತೃತೀಯ ಲಿಂಗಿಗಳು ತಮ್ಮ ಆಸ್ತಿತ್ವಕ್ಕಾಗಿ ಮಾಡುತ್ತಿರುವ ಹೋರಾಟ ಇಂದು ನೆನ್ನೆಯದಲ್ಲ. ಪುರಾಣ ಕಾಲದಿಂದಲೂ ತೃತೀಯ ಲಿಂಗಿಗಳು ಇದ್ದಾರೆ. ಅಂಬೆ ಬೃಹನ್ನೆಳೆ ಇಂಥವರನ್ನು ನಮ್ಮ ಪುರಾಣದಲ್ಲಿ ಓದಿದ್ದೇವೆ. ತೃತೀಯ ಲಿಂಗಿಗಳು ಎಂದರೆ ಭಿಕ್ಷೆ ಬೇಡುವವರು, ವೇಶ್ಯಾವೃತ್ತಿ ಮಾಡುವವರು ಎಂಬ ನಂಬಿಕೆ ಸಮಾಜದಲ್ಲಿ ಬಲವಾಗಿ ಬೇರೂರಿಬಿಟ್ಟಿದೆ. ಈ ನಂಬಿಕೆಯನ್ನು ಹೋಗಲಾಡಿಸಲು ಲೇಖಕಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. *ಹಾಸನ ಸೊಗಡಿನ ಭಾಷೆಯ ವಿಶಿಷ್ಟ ಕಥಾಗುಚ್ಛಪು:ಬ್ಯಾಟೆಮರಲೇ: ಎ.ಎಸ್.ಜಿಪ್ರ: ಮಂಜುಳಾದೂ: 7019646201/8884080808

ಒಂದೊಂದು ಊರಿನ ಭಾಷೆಯೂ ಅನನ್ಯ. ಮೈಸೂರಿನ ಶಿಷ್ಟಗನ್ನಡ, ಮಂಡ್ಯದ ಕನ್ನಡ, ಕುಂದಗನ್ನಡ, ಉತ್ತರಕರ್ನಾಟಕದ ಗಂಡು ಕನ್ನಡ ಹೀಗೆ. ಈ ಕೃತಿಯಲ್ಲಿ ಹಾಸನದ ಅಪ್ಪಟ ಹಳ್ಳಿ ಭಾಷೆಯನ್ನು ಕಾಣಬಹುದು. ಇಲ್ಲಿ ಬಳಸಿರುವ ಭಾಷೆಯೇ ಈ ಕೃತಿಯ ಹೈಲೈಟ್. ಸರಳವಾದ ಕತೆಗಳು. ಹಾಸನದ ಮಣ್ಣಿನ ಅಪ್ಪಟ ಹಳ್ಳಿಸೊಗಡಿನ ಭಾಷೆ. ಉಪ್ಪೆಸ್ರು ಬಸ್ಸಾರಿನಷ್ಟೇ ಘಂ ಎನ್ನುವ ಭಾಷೆ. ಹೆಂಗಸರು ಬಹಿರ್ದೆಶೆಗೆ ಹೋಗುವಾಗ ಅವರಿಗೆ ಗೊತ್ತಾಗದಂತೆ ಹಿಂಬಾಲಿಸಿ ಬಂದು ಅವರನ್ನು ಕದ್ದು ನೋಡುವ ಪೂಜಾರಪ್ಪ. ಅವನ ಚಾಳಿಗೆ ಅಸಹ್ಯಿಸಿಕೊಂಡು ಹಠ ಹಿಡಿದು ಮನೆಯಲ್ಲೇ ಟಾಯ್ಲೆಟ್ ಕಟ್ಟಿಸಿಕೊಳ್ಳುವ ದ್ಯಾವಕ್ಕನ ಕತೆ, ಹತ್ತು ವರ್ಷವಾದರೂ ಚಡ್ಡಿಯಲ್ಲೇ ಒಂದ ಮಾಡಿಕೊಂಡು ತಾಯಿಯ ಕೈಯಲ್ಲಿ ಬೈಯಿಸಿಕೊಳ್ಳುವ ಮುಗ್ಧ ಬಾಬುವಿನ ಕತೆ, ಎಂಬತ್ತರ ಇಳಿವಯಸ್ಸಲ್ಲಿ ಜ್ಞಾಪಕ ಶಕ್ತಿ ಕಳೆದುಕೊಂಡು ಮನೆ ತೊರೆದು ಎತ್ತಲೋ ಹೋದ ಚಿಕ್ಕಮ್ಮ ಮತ್ತೆ ಮರಳಿ ಮನೆಗೆ ಬಂದ ಚಿಕ್ಕಮ್ಮ ಕತೆ, ಅಂದ ಚೆಂದ ಕಳೆದುಕೊಂಡು ಹಳೆಯದಾಗಿದ್ದ ದೇವರ ರಥವನ್ನು ಮೂದಲಿಸುತ್ತ, ಹೊಸತೇರು ಮಾಡಿಸಬೇಕೆಂದು ಹಠ ಮಾಡುತ್ತ ನಾನಾ ಆಟಗಳನ್ನು ಆಡಿ ಕೊನೆಗೂ ಹೊಸತೇರಿನ ಸೃಷ್ಟಿಗೂ ಅದರ ಧ್ವಂಸಕ್ಕೂ ಕಾರಣನಾದ ಚಂದ್ರಣ್ಣನ ಕತೆ ಹೀಗೆ ಒಂದು ಹಳ್ಳಿಯಲ್ಲಿ ನಡೆಯುವ ವಿದ್ಯಮಾನಗಳ ಎಂಟು ಕತೆಗಳಿರುವ ಕಥಾಗುಚ್ಛ ಈ ಕೃತಿ. ತನ್ನ ಭಾಷೆಯ ಸೊಗಡಿಂದಲೇ ಆಪ್ತತೆ ಕಾಯ್ದುಕೊಳ್ಳುವ ಕೃತಿಯಿದು.

Share this article